ಗೋಣಿಕೊಪ್ಪಲು, ಆ. 11: ಗ್ರಾಮಸ್ಥರನ್ನು ಆನೆ ಭೀತಿಯಿಂದ ಮುಕ್ತಿಮಾಡಲು ವೀರಾಜಪೇಟೆ ಅರಣ್ಯ ಇಲಾಖೆಯ ರ್ಯಾಪಿಡ್ ರೆಸ್ಪಾನ್ಸ್ ತಂಡ ಕಳೆದ ಹಲವು ದಿನಗಳಿಂದ ಅಮ್ಮತ್ತಿ, ಆನಂದಪುರ, ಬಿಬಿಟಿಸಿ ತೋಟ, ಸಿದ್ಧಾಪುರ, ಕಳತ್ಮಾಡು, ಹೊಸೂರು, ಬೈರಂಬಾಡ, ಗುಹ್ಯ ಇತ್ಯಾದಿ ಕಡೆಗಳಲ್ಲಿ ಕಾರ್ಯಾಚರಣೆ ಮೂಲಕ ಕಾಡಿಗಟ್ಟುವ ಹರಸಾಹಸ ಮಾಡುತ್ತಲೇ ಬರುತ್ತಿದೆ. ಹೀಗಿದ್ದರು ಕಳೆದ ಮೂರು-ನಾಲ್ಕು ದಿನಗಳಿಂದ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳತ್ಮಾಡು ಹಾಗೂ ಗೊಟ್ಟಡದಲ್ಲಿ ಬೀಡುಬಿಟ್ಟಿದ್ದ ಸುಮಾರು 10 ಆನೆಗಳನ್ನು ಕಾಡಿಗಟ್ಟಲು ವಿಫಲ ಯತ್ನವನ್ನು ಯುವಕರ ಪಡೆ ಮಾಡುತ್ತಲೇ ಇದ್ದರೂ, ಆನೆಗಳು ವನ್ಯಜೀವಿ ವಲಯದತ್ತ ತೆರಳುವ ಯಾವದೇ ಸೂಚನೆ ಕಾಣುತ್ತಿಲ್ಲ.
ತೋಟ ಮಾಲೀಕರು ಕಾಫಿ, ತೆಂಗು, ಅಡಿಕೆ, ಬಾಳೆ, ಭತ್ತದ ಗದ್ದೆಯಲ್ಲಿ ಆನೆಗಳ ಪುಂಡಾಟದಿಂದ ಸಹಿಸಿ ಸೋತು ಹೋಗಿದ್ದಾರೆ. ಇತ್ತ ಪರಿಹಾರ ಕಾರ್ಯವೂ ವಿಳಂಬ ಹಿನ್ನೆಲೆ ಹೋರಾಟದ ಎಚ್ಚರಿಕೆಯನ್ನು ಬೆಳೆಗಾರರು ನೀಡುತ್ತಲೇ ಬಂದಿದ್ದಾರೆ. ಈ ನಡುವೆ ತಾ.10 ರಂದು ಹಾತೂರು ಗ್ರಾಮದ ದಿ.ಮಂಡೇಪಂಡ ಡಬ್ಲ್ಯು. ಕಾಳಪ್ಪ ಅವರ ಕೆರೆಯಲ್ಲಿ ಕಾಡಾನೆಯೊಂದು ಸಿಲುಕಿ ರಾತ್ರಿ ಇಡೀ ಘೀಳಿಟ್ಟು ಸುತ್ತಮುತ್ತಲಿನ ಗ್ರಾಮಸ್ಥರನ್ನು ಭಯಭೀತಿ ಗೊಳಿಸಿದ ಘಟನೆಯೂ ನಡೆದಿದೆ. ಇಂದು ಬೆಳಿಗ್ಗೆ 8.30 ಸುಮಾರಿಗೆ ಕೆರೆಯಿಂದ ಮೇಲೆ ಬರಲು ಹೋರಾಟ ನಡೆಸಿದ ಕಾಡಾನೆ ಕೊಂಚಹೊತ್ತು ಕೆರೆಯ ಏರಿಯ ಮೇಲೆ ವಿಶ್ರಮಿಸಿ ಕಾಫಿತೋಟದೊಳಗೆ ಮರೆಯಾಗಿದೆ. ರಾತ್ರಿ 2 ಗಂಟೆ ಹೊತ್ತಿನಲ್ಲಿಯೂ ಆನೆ ಘೀಳಿಡುವ ಶ¨್ಧ ಕೇಳಿರುವದಾಗಿ ಸ್ಥಳೀಯ ನಿವಾಸಿ, ನಿವ್ರತ್ತ ಯೋಧ ಪುಟ್ಟಸ್ವಾಮಿ ತಿಳಿಸಿದ್ದಾರೆ.
ಸಾರ್ವಜನಿಕರ ಪ್ರಕಾರ ಆನೆಯು ಗರ್ಭಧರಿಸಿದ್ದು ಪ್ರಸವ ವೇದನೆಯಿಂದ ರಾತ್ರಿಯೆಲ್ಲಾ ಕೆರೆಯಲ್ಲಿ ಸಿಲುಕಿ ಹೋರಾಟ ನಡೆಸಿದೆ. ಆನೆಗೆ ಯಾರೋ ಗುಂಡು ಹೊಡೆದಿರುವ ಸಾಧ್ಯತೆ ಹಿನ್ನೆಲೆ ನೋವಿನಿಂದ ಅರಚಿದೆ ಎಂದು ಹೇಳಿದರೆ, ಅರಣ್ಯ ಇಲಾಖೆಯ ಸಿಬ್ಬಂದಿಗಳು ಆನೆ ಕಾಲು ಬಾಯಿ ಜ್ವರದಿಂದ ನರಳುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ದಿ.ಎಂ.ಡಬ್ಲ್ಯು. ಕಾಳಪ್ಪ ಅವರ ಕುಟುಂಬ ವರ್ಗಕ್ಕೆ ಸೇರಿದ ಜಾಗದಲ್ಲಿ ಹಲವು ಕೆರೆಗಳಿವೆ. ವನ್ಯಪ್ರಾಣಿಗಳ ಉಪಟಳದಿಂದಾಗಿ ಇಲ್ಲಿ ಭತ್ತ ಬೆಳೆಯುವದನ್ನೆ ರೈತರು ಕೈಚೆಲ್ಲಿದ್ದಾರೆ. ಕಾಡು ಹಂದಿಗಳ ಉಪಟಳವೂ ಅಧಿಕವಿದ್ದು, ಕಾಫಿ, ಕಾಳುಮೆಣಸು ಹೊರತುಪಡಿಸಿದರೆ ಇಲ್ಲಿನ ಕೃಷಿಕರು ಉಳಿದೆಲ್ಲಾ ಕೃಷಿ ಕೈ ಬಿಟ್ಟಿದ್ದಾರೆ. ಆನೆ ಶುಂಠಿ ತಿನ್ನುತ್ತಿಲ್ಲ ಎಂಬ ಕಾರಣಕ್ಕೆ ಕೆಲವರು ಶುಂಠಿ ಕೃಷಿ ಮಾಡಿದ್ದಾರೆ. ಉಳಿದಂತೆ ಇಲ್ಲಿಯ ಕೆಲವು ಕಾಫಿ ತೋಟಗಳು ನಿರ್ವಹಣೆ ಇಲ್ಲದೆ ಕಾಡಾಗಿ ಮಾರ್ಪಾಡಾಗಿದ್ದು, ಹಗಲು ಹೊತ್ತು ಕಾಫಿ ತೋಟಗಳ ನಡುವೆಯೇ ಆನೆಗಳ ಹಿಂಡು ಆಶ್ರಯ ಪಡೆಯುತ್ತವೆ.
ಇಲ್ಲಿನ ಗೊಟ್ಟಡ ವ್ಯಾಪ್ತಿಯಲ್ಲಿ ಇತ್ತೀಚೆಗೆ ಮಾಚಿಮಂಡ ಕುಟುಂಬಸ್ಥರ ತೋಟಕ್ಕೆ ನುಸುಳಿ ಬಾಳೆ ಬಾಳೆ ಗಿಡಗಳನ್ನು ಚೆಲ್ಲಾಡಿದೆ. ಗೊಟ್ಟಡ ವ್ಯಾಪ್ತಿಯಲ್ಲಿ ಸುಮಾರು 9 ಆನೆÀಗಳಿದ್ದು, 2 ಆನೆ ಮರಿಗಳೂ ಇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಆನೆ ಮರಿಗಳಿರುವದರಿಂದ ಕಾಡಾನೆಗಳು ಮತ್ತಷ್ಟು ಅಪಾಯಕಾರಿಯಾಗಿದ್ದು, ಸಂಜೆ 6 ಗಂಟೆಯಾಗುತ್ತಿದ್ದಂತೆ ಸಾರ್ವಜನಿಕರು, ಕಾರ್ಮಿಕ ವರ್ಗದ ಓಡಾಟವೇ ನಿಂತುಹೋಗಿದೆ. ಚತುಷ್ಚಕ್ರ ವಾಹನ ಮಾಲೀಕರು ಮಾತ್ರವೇ ರಾತ್ರಿ ಅನಿವಾರ್ಯ ಕಾರಣಗಳಿಗಾಗಿ ಓಡಾಟ ನಡೆಸುವದು ಕಂಡು ಬಂದಿದೆ.
ಕೇವಲ ರೂ.10 ಸಾವಿರ!
ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕೃಸ್ತರಾಜ್ ಅವರನ್ನು ‘ಮೂರು ತಿಂಗಳ ಹಿಂದೆ ಕಳತ್ಮಾಡು-ಹೊಸಕೋಟೆ ನಿವಾಸಿ ಕತ್ರಿಕೊಲ್ಲಿ ಮಣಿ ಕಾಳಪ್ಪ ಎಂಬವರ ಹಸು ಆನೆತುಳಿತದಿಂದ ಸಾವನ್ನಪ್ಪಿದ್ದು ಪರಿಹಾರ ವಿಳಂಬಗತಿ’ ಬಗ್ಗೆ ಪ್ರಶ್ನಿಸಿದಾಗ, ಕಾನೂನು ವ್ಯವಸ್ಥೆಯಲ್ಲಿ ರೂ.10 ಸಾವಿರ ಚೆಕ್ ಮಾತ್ರ್ರ ನೀಡಲು ಸಾಧ್ಯ. ಈ ಬಗ್ಗೆ ರಾಜ್ಯ ಸರ್ಕಾರ ಬೆಳೆಗಾರರ ವನ್ಯಪ್ರಾಣಿಗಳಿಂದಾದ ನಷ್ಟ ಪರಿಹಾರ ಮೊತ್ತ ಹೆಚ್ಚಿಸುವ ಸಲುವಾಗಿ ‘ಕೊಡಗು ಫೌಂಡೇಷನ್’ ಸ್ಥಾಪಿಸಿದ್ದು, ಕಾರ್ಯರೂಪಕ್ಕೆ ಬಂದ ನಂತರ ಮತ್ತಷ್ಟು ಪರಿಹಾರ ನೀಡಲು ಸಾಧ್ಯವಿದೆ ಎಂದು ಮಾಹಿತಿ ನೀಡಿದ್ದಾರೆ.
ಕೆರೆಯಲ್ಲಿ ಆನೆ ಸಿಲುಕಿದ ಬಗ್ಗೆ ಪ್ರಶ್ನಿಸಿದಾಗ ಆನೆಗೆ ಏನೂ ಆಗಿಲ್ಲ. ರಾತ್ರಿಯಿಡೀ ಕೆರೆಯಿಂದ ಮೇಲೆ ಬರಲು ಹೋರಾಟ ನಡೆಸಿರುವ ಹಿನ್ನೆಲೆ ಬಳಲಿದೆ ಅಷ್ಟೇ ಎಂದು ವಿವರಿಸಿದರು. ಕೊಡಗು ಕಾಫಿ ಬೆಳೆಗಾರರ ಸಂಘವೂ ಆನೆ-ಮಾನವ ಸಂಘರ್ಷದಿಂದ ಆಗುವ ನಷ್ಟ ಪರಿಹಾರವನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಇಲಾಖೆಗೆ ಮನವಿ ಮಾಡಿದೆ ಎಂದೂ ಮಾಹಿತಿ ನೀಡಿದರು.
ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ
ಕಳೆದ ಎರಡು ತಿಂಗಳಿನಿಂದ ಹಾತೂರು-ಕೈಕೇರಿ ವ್ಯಾಪ್ತಿಯಲ್ಲಿ ಕಾಡಾನೆ ಉಪಟಳ ಮಿತಿಮೀರಿದೆ. ನಮಗೆ ಅರಣ್ಯ ಇಲಾಖೆ ನೀಡುವ ಪರಿಹಾರ ಏನೇನೂ ಸಾಲದು. ‘ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ಯಂತಿದೆ ಸರ್ಕಾರ ನೀಡುವ ಪರಿಹಾರ. ಪಮ್ಮಡ ಮೋಹನ್ ಅಸಮಾಧಾನ ತೋಡಿಕೊಂಡಿದ್ದಾರೆ.
ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಿ ಚಿಣ್ಣಪ್ಪ ಕಳತ್ಮಾಡು-ಹೊಸೂರು ವ್ಯಾಪ್ತಿಯಿಂದ ಕಾಡಾನೆಗಳನ್ನು ಕಾಡಿಗೆ ಅಟ್ಟಲು 15 ದಿನಗಳ ಗಡುವು ನೀಡಿದ್ದರು. ಆದರೆ, ‘ರ್ಯಾಪಿಡ್ ರೆಸ್ಪಾನ್ಸ್’ ತಂಡದ ಶ್ರಮಕ್ಕೆ ಕಾಡಾನೆಗಳು ‘ರೆಸ್ಪಾಂಡ್’ ಮಾಡದೆ, ಮತ್ತೆ ಅಲ್ಲಲ್ಲಿ ಕಾಣಿಸಿಕೊಂಡಿರುವ ಬಗ್ಗೆ ನೋವನ್ನು ತೋಡಿಕೊಂಡಿದ್ದಾರೆ.
ಕಳತ್ಮಾಡುವಿನ ಮಾಜಿ ಜಿ.ಪಂ. ಸದಸ್ಯ ಕೊಲ್ಲೀರ ಧರ್ಮಜ, ಜಮ್ಮಡ ಪೂವಣ್ಣ, ಕತ್ರಿಕೊಲ್ಲಿ ನಂಜುಂಡ, ಕೊಲ್ಲೀರ ಉಮೇಶ್, ಕತ್ರಿಕೊಲ್ಲಿ ಮಣಿ, ವಿ.ಪಿ. ರಾಜ, ಪಡಿಕಲ್ ಯದು, ಜೆಪ್ಪೆಕೊಲ್ಲಿ ರಾಜಾ, ಪಡಿಕಲ್ ಮನು, ಮಣಿ ಮುಂತಾದವರು ಆನೆ ಉಪಟಳ ತೀವ್ರವಾಗುತ್ತಿರುವ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
- ವರದಿ: ಟಿ.ಎಲ್.ಶ್ರೀನಿವಾಸ್