ಡಿಸಿ-ಶಾಸಕರು ವಿಜ್ಞಾನಿಗಳ ತಂಡ ಭೇಟಿ

ಆಲೂರು-ಸಿದ್ದಾಪುರ/ಒಡೆಯನಪುರ, ಆ. 11: ಸಮೀಪದ ಬೆಳಾರಳ್ಳಿ ಮತ್ತು ಹಂಡ್ಲಿ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ನಿರಂತರವಾಗಿ ಕಳೆದ 5 ವರ್ಷಗಳಿಂದ ಶಂಕುಹುಳುಗಳ ಬಾಧೆಯಿಂದಾಗಿ ಬೆಳೆಗಾರರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕಾಫಿ ಮಂಡಳಿ, ಸಂಬಾರ ಸಂಶೋಧನ ಕೇಂದ್ರದ ವಿಜ್ಞಾನಿಗಳು, ಕಾಫಿ ಸಂಶೋಧನ ಕೇಂದ್ರದ ವಿಜ್ಞಾನಿಗಳು ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೆಳಾರಳ್ಳಿ ಮತ್ತು ಹಂಡ್ಲಿ ಕಾಫಿ ತೋಟಗಳಿಗೆ ಭೇಟಿ ನೀಡಿ ಬೆಳೆಗಾರರಿಗೆ ಶಂಕುಹುಳುಗಳ ಬಾಧೆಯನ್ನು ನಿಯಂತ್ರಿಸಲು ತಕ್ಕಮಟ್ಟಿಗೆ ಪರಿಹಾರವನ್ನು ನೀಡಿದ್ದರು. ಆದರೆ ಪ್ರತಿವರ್ಷವೂ ಮಳೆಗಾಲದಲ್ಲಿ ಈ ವ್ಯಾಪ್ತಿಯಲ್ಲಿ ಶಂಕುಹುಳು ಕಾಟದಿಂದ ರೈತರು ಮುಕ್ತರಾಗದ ಹಿನ್ನೆಲೆಯಲ್ಲಿ ಬೆಳೆಗಾರರು ಜಿಲ್ಲಾಡಳಿತ, ಶಾಸಕರು, ಸಂಬಂಧಪಟ್ಟ ವಿಜ್ಞಾನಿಗಳಿಗೆ ಶಂಕುಹುಳು ಬಾಧಿತ ತೋಟಗಳಿಗೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ನೀಡಿದ್ದರಿಂದ ಇಂದು ಬೆಳಾರಳ್ಳಿ ಮತ್ತು ಹಂಡ್ಲಿ ವ್ಯಾಪ್ತಿಯ ಶಂಕುಹುಳು ಬಾಧಿತ ಕಾಫಿ ತೋಟಗಳಿಗೆ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಚೆಟ್ಟಳ್ಳಿ ಕಾಫಿ ಸಂಶೋಧನಾ ಮಂಡಳಿಯ ವಿಜ್ಞಾನಿಗಳು ಮತ್ತು ಜಿಲ್ಲಾ ಕಾಫಿ ಮಂಡಳಿ ಅಧಿಕಾರಿಗಳು, ಸೋಮವಾರಪೇಟೆ ತಹಶೀಲ್ದಾರ್ ಮಹೇಶ್, ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದರು.

ಶಂಕುಹುಳು ಬಾಧೆಯ ಕುರಿತು ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಮತ್ತು ಶಾಸಕ ಅಪ್ಪಚ್ಚುರಂಜನ್ ಕಾಫಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳೊಂದಿಗೆ ಚರ್ಚಿಸಿದರು. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಹಂಡ್ಲಿ ವ್ಯಾಪ್ತಿಯಲ್ಲಿ ಕಳೆದ 5 ವರ್ಷಗಳಿಂದ ಕಾಫಿ ತೋಟಗಳಲ್ಲಿ ಶಂಕುಹುಳು ಬಾಧೆಯಿಂದ ಬೆಳೆಗಾರರು ತೊಂದರೆ ಅನುಭವಿಸುತ್ತಿರುವ ಮಾಹಿತಿಯನ್ನು ಪಡೆದಿದ್ದು, ಈ ಬಗ್ಗೆ ಕಾಫಿ ಸಂಶೋಧನಾ ಮಂಡಳಿಯ ವಿಜ್ಷಾನಿಗಳು, ಸಂಬಾರ ಮಂಡಳಿಯ ವಿಜ್ಞಾನಿಗಳು, ತೋಟಗಾರಿಕೆ ಇಲಾಖೆಯ ವಿಜ್ಞಾನಿಗಳು ಸೇರಿದಂತೆ ಜನಪ್ರತಿನಿಧಿಗಳೊಂದಿಗೆ ಚರ್ಚಿಸಲಾಗಿದೆ. ಶಂಕುಹುಳು ಬಾಧೆಯಿಂದ ಕೆಂಗೆಟ್ಟಿರುವ ರೈತರಿಗೆ ಸಹಾಯ ಮತ್ತು ಶಾಶ್ವತÀ ಪರಿಹಾರ ನೀಡುವ ಸಲುವಾಗಿ ಮಾರ್ಗೊಪಾಯಗಳನ್ನು ಕಂಡುಕೊಳ್ಳುವಂತೆಯೂ ಚರ್ಚಿಸಲಾಗಿದೆ. ಈ ಕುರಿತು ವಿಶೇಷ ಸಭೆಯನ್ನು ನಡೆಸಲಾಗಿದೆ ಎಂದರು. ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಈ ವ್ಯಾಪ್ತಿಯಲ್ಲಿನ ಶಂಕುಹುಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಕುರಿತು ಶೀಘ್ರದಲ್ಲೆ ಸಂಬಾರ ಸಂಶೋಧನಾ ಕೇಂದ್ರ, ಕಾಫಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ಸಭೆಯನ್ನು ಕರೆದು ಶಂಕುಹುಳು ಹಾವಳಿಯನ್ನು ನಿಯಂತ್ರಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗುವದು ಎಂದರು.

ಈ ಸಂದರ್ಭ ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ. ಜಗದೀಶನ್, ಡಾ. ರಾಫಲ್ ಕುರಿಯನ್, ಹಾಸನ ಕಾಫಿ ಮಂಡಳಿಯ ಜಂಟಿ ನಿರ್ದೇಶಕ ಹೇಮಂತ್‍ಕುಮಾರ್, ಮಡಿಕೇರಿ ಕಾಫಿ ಮಂಡಳಿಯ ಉಪ ನಿರ್ದೇಶಕ ರಾಮಗೌಂಡರ್, ಸೋಮವಾರಪೇಟೆ ತೋಟಗಾರಿಕೆ ಇಲಾಖಾಧಿಕಾರಿ ಮುತ್ತಪ್ಪ, ಶನಿವಾರಸಂತೆ ಕಾಫಿ ಮಂಡಳಿಯ ಸಂಪರ್ಕಾಧಿಕಾರಿ ವಿಶ್ವನಾಥ್, ಶನಿವಾರಸಂತೆ ಬೆಳೆಗಾರರ ಸಂಘದ ಅಧ್ಯಕ್ಷ ಆರ್.ಪಿ. ಲಕ್ಷ್ಮಣ್, ಬೆಳೆಗಾರರು, ಶಂಕುಹುಳು ಬಾಧಿತ ತೋಟದ ಮಾಲೀಕರು ಇದ್ದರು.

- ದಿನೇಶ್ ಮಾಲಂಬಿ-ಸುರೇಶ್ ಒಡೆಯನಪುರ.