ಗೋಣಿಕೊಪ್ಪಲು, ಆ. 12: ಕಾಫಿ ತೋಟದಲ್ಲಿ ತಂಗಿದ್ದ ಗರ್ಭಿಣಿ ಹೆಣ್ಣಾನೆ ಮರಿಗೆ ಜನ್ಮ ನೀಡುವ ಸಂದರ್ಭದಲ್ಲಿ ಮೃತಪಟ್ಟಿರುವ ಘಟನೆ ಸಮೀಪದ ಕೈಕೇರಿಯಲ್ಲಿ ಜರುಗಿದೆ. ಹಿಂಡಿನೊಂದಿಗೆ ಕಾಫಿ ತೋಟಕ್ಕೆ ಬಂದಿದ್ದ 20 ವರ್ಷ ಪ್ರಾಯದ ತುಂಬು ಗರ್ಭಿಣಿ ಆನೆ ಕೈಕೇರಿಯ ಡಾ. ಆಶಿಕ್ ಚಂಗಪ್ಪ ಅವರ ಕಾಫಿ ತೋಟದಲ್ಲಿಯೇ ತಂಗಿತ್ತು ಎನ್ನಲಾಗಿದೆ. ಇದನ್ನು ನೋಡಿದ ಆಶಿಕ್ ಚಂಗಪ್ಪ ಶುಕ್ರವಾರ ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿ ಗಳು ಗುಂಪಾಗಿದ್ದ ಆನೆಗಳನ್ನು ಮರಳಿ ಕಾಡಿನತ್ತ ಓಡಿಸಲು ಪ್ರಯತ್ನಿಸಿದ್ದಾರೆ. ಆದರೆ ಹೆಣ್ಣಾನೆ ಸ್ಥಳದಿಂದ ಕದಲದೆ ಅರಣ್ಯಾಧಿಕಾರಿಗಳ ಮೇಲೆಯೆ ದಾಳಿ ಮಾಡಲು ಮುಂದಾಗಿದೆ.

ಇದರಿಂದ ಭಯಭೀತರಾದ ಅರಣ್ಯಾಧಿಕಾರಿಗಳು ಗರ್ಭಿಣಿ ಆನೆಯನ್ನು ತೋಟದಲ್ಲಿಯೇ ಬಿಟ್ಟು ಉಳಿದ ಆನೆಗಳನ್ನು ಕಾಡಿನತ್ತ ಓಡಿಸಿದ್ದಾರೆ.

ಆದರೆ ಕಾಫಿ ತೋಟದಲ್ಲಿ ತಂಗಿದ್ದ ಆನೆ ಮೃತ ಪಟ್ಟಿರುವುದು ಶನಿವಾರ ಗೋಚರಿಸಿದೆ. ಹುಣಸೂರು ವನ್ಯ ಜೀವಿ ವಿಭಾಗದ ವೈದ್ಯಾಧಿಕಾರಿ ಉಮಾಶಂಕರ್ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದರು. ಮೃತ ಆನೆಯ ಹೊಟ್ಟೆಯಲ್ಲಿ 18 ತಿಂಗಳು ತುಂಬಿದ ಹೆಣ್ಣಾನೆ ಮರಿಯೊಂದು ಮೃತ ಪಟ್ಟ ಸ್ಥಿತಿಯಲ್ಲಿ ಕಂಡು ಬಂದಿತು. ಜನನ ಸುಗಮವಾಗಿ ಆಗದ ಕಾರಣ ಮರಿ ಹೊಟ್ಟೆಯಲ್ಲಿಯೇ ಮೃತ ಪಟ್ಟಿದೆ. ಇದರಿಂದ ಗರ್ಭಿಣಿ ಆನೆಯ ಜೀವಕ್ಕೂ ತೊಂದರೆಯಾಗಿದೆ ಎಂದು ಅವರು ತಿಳಿಸಿದರು. ಮೃತ ಆನೆಯನ್ನು ಕಾಫಿ ತೋಟದಲ್ಲಿಯೇ ಹೂಳಲಾಯಿತು. ಸ್ಥಳಕ್ಕೆ ತಿತಿಮತಿ ಎಸಿಎಫ್ ಶ್ರೀಪತಿ, ಪೊನ್ನಂಪೇಟೆ ಆರ್‍ಎಫ್‍ಒ ಉತ್ತಯ್ಯ ಭೇಟಿ ನೀಡಿದ್ದರು.

-ಎನ್.ಎನ್. ದಿನೇಶ್