ಮಡಿಕೇರಿ, ಆ. 11: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನಗರಸಭೆ, ಅರಣ್ಯ ಇಲಾಖೆ, ತೋಟಗಾರಿಕಾ ಇಲಾಖೆ, ರೋಟರಿ ಕ್ಲಬ್, ಚೇಂಬರ್ ಆಫ್ ಕಾಮರ್ಸ್, ಗ್ರೀನ್ ಸಿಟಿ ಫೋರಂ, ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ, ಲಯನ್ಸ್, ಲಯನೆಸ್ ಕ್ಲಬ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಮಹಿಳೋದಯ ಮಹಿಳಾ ಒಕ್ಕೂಟ, ಟೈಲರ್ಸ್ ಅಸೋಸಿಯೇಷನ್ ಇವರ ಸಂಯುಕ್ತ ಆಶ್ರಯದಲ್ಲಿ ಮೈಸೂರು (ಓ.ಡಿ.ಪಿ) ಸಂಸ್ಥೆ ವತಿಯಿಂದ ಮಡಿಕೇರಿ ಗಿರಿ ಸಂರಕ್ಷಣಾ ಬಳಗದ ಮೂಲಕ ನಗರದ ನೆಹರು ಮಂಟಪದಲ್ಲಿ ಗಿರಿ ಸಂರಕ್ಷಣೆಗಾಗಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಾಸ್ಟರ್ ಆರ್‍ಕೆಜಿಎಂಎಂ ಮಹಾಸ್ವಾಮೀಜಿ ಅವರು ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿ ಪರಿಸರದಿಂದಲೇ ನಮ್ಮೆಲ್ಲರ ಜೀವನ ಹಾಗೂ ನಾವು ಉಸಿರಾಡುತ್ತಿರುವದು. ಇಷ್ಟೇ ಅಲ್ಲ ಪ್ರತಿಯೊಂದು ಮರ ಗಿಡ ಪಕ್ಷಿಗಳು ಹಾಗೂ ಮಾನವರು ಪರಿಸರದಿಂದ ಬದುಕುತ್ತಿದ್ದಾರೆ. ಆದ ಕಾರಣ ಪ್ರಕೃತಿಯನ್ನು ಉಳಿಸಬೇಕು ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ. ಸೆಲ್ವಕುಮಾರ್, ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಪರಿಸರ ಅಧಿಕಾರಿ ಗಣೇಶನ್, ಮೈಸೂರು ಓ.ಡಿ.ಪಿ. ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ಸ್ಟ್ಯಾನಿ ಡಿ ಅಲ್ಮಡಾ, ಎನ್‍ಸಿಸಿ ಕೆಡೆಟ್‍ಗಳು ಇತರರು ಪಾಲ್ಗೊಂಡಿದ್ದರು.