ಮಡಿಕೇರಿ ಆ.11 : ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಗೋದಾಮು ನಿರ್ಮಿಸ ಲೆಂದು ತನ್ನ ಸ್ವಾಧೀದಲ್ಲಿರಿಸಿ ಕೊಂಡಿದ್ದ ಜಾಗವನ್ನು ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆ ಚೆಟ್ಟಳ್ಳಿ ಗ್ರಾ.ಪಂ ನ ಅಭಿವೃದ್ಧಿ ಕಾರ್ಯಗಳಿಗೆ ಮಂಜೂರು ಮಾಡಿ ಆದೇಶ ಹೊರಡಿಸುವ ಮೂಲಕ ರೈತ ವಿರೋಧಿ ಧೋರಣೆಯನ್ನು ಅನುಸರಿಸಿದೆ ಎಂದು ಆರೋಪಿಸಿ ರುವ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ, ಕಂದಾಯ ಅಧಿಕಾರಿಗಳ ಆದೇಶದ ವಿರುದ್ಧ ನ್ಯಾಯಾಲಯದ ಮೂಲಕ ತಡೆಯಾಜ್ಞೆ ತಂದಿರುವದಾಗಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪ್ರತಿನಿಧಿಗಳು ರೈತ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದ್ದು, ಜಾಗ ಗ್ರಾ.ಪಂ ಪಾಲಾಗಲು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾಂಗ್ರೆಸ್‍ನ ವಿಧಾನ ಪರಿಷತ್ ಸದಸ್ಯರು ಕಾರಣವೆಂದು ಆರೋಪಿಸಿದರು.

ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನರೇಂದ್ರ ಮೋದಿ ಸಹಕಾರ ಭವನ ಕಟ್ಟಡದ ಹಿಂಭಾಗದ ಪೈಸಾರಿ ಸರ್ವೆ ಸಂ.157/2 ರ 25 ಸೆಂಟ್ ಜಾಗದ ಪೈಕಿ 0.07 ಸೆಂಟ್ ಜಾಗ ಕಳೆದ 60 ವರ್ಷಗಳಿಂದ ಸಂಘದ ಅನುಭವ ಸ್ವಾಧೀನದಲ್ಲಿದೆ. ಈ ಜಾಗದಲ್ಲಿ ರೈತರ ಅನುಕೂಲಕ್ಕಾಗಿ ಗೋದಾಮು ನಿರ್ಮಿಸಲು 20 ಅಡಿ ಎತ್ತರದ ಮಣ್ಣನ್ನು ತೆಗೆಸಿ, ಜಾಗ ಸಮತಟ್ಟು ಮಾಡಿ, ಅಡಿಪಾಯಕ್ಕಾಗಿ ಪಿಲ್ಲರ್ ನಿರ್ಮಿಸುತ್ತಿರುವ ಸಂದರ್ಭ ಚೆಟ್ಟಳ್ಳಿ ಗ್ರಾ.ಪಂ ತಕರಾರು ತೆಗೆದು ಕಾಮಗಾರಿಗೆ ತಡೆಯುಂಟು ಮಾಡಿತು. ಗ್ರಾ.ಪಂ ಮೂಲಕ ನೀರಿನ ಟ್ಯಾಂಕ್, ಶೌಚಾಲಯ ಹಾಗೂ ಮಳಿಗೆ ನಿರ್ಮಾಣಕ್ಕಾಗಿ ಇದೀಗ ಒಟ್ಟು 19.5 ಸೆಂಟ್ ಜಾಗವನ್ನು ಸೋಮವಾರಪೇಟೆ ತಾ.ಪಂ ಕಾರ್ಯ ನಿರ್ವಹಣಾಧಿಕಾರಿಗಳ ಹೆಸರಿಗೆ ಕಾಯ್ದಿರಿಸಿ ಆರ್‍ಟಿಸಿಯನ್ನು ಬದಲಾಯಿಸಲಾಗಿದೆ ಎಂದು ಮಣಿ ಉತ್ತಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಗೋದಾಮು ನಿರ್ಮಾಣಕ್ಕೆ ಜಾಗ ಮಂಜೂರು ಮಾಡುವಂತೆ ಒತ್ತಾಯಿಸಿ ಈ ಹಿಂದೆ 54 ಗಂಟೆಗಳ ಕಾಲ ಉಪವಾಸ ಸತ್ಯಾಗ್ರಹವನ್ನು ನಡೆಸಲಾಗಿತ್ತು. ಅಂದಿನ ಜಿಲ್ಲಾಧಿಕಾರಿ ಅನುರಾಗ್ ತಿವಾರಿಯವರ ಭರವಸೆಯ ಹಿನ್ನೆಲೆಯಲ್ಲಿ ಧರಣಿಯಿಂದ ಹಿಂದೆ ಸರಿಯಲಾಗಿತ್ತು. ಆದರೆ ಈಗಿನ ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ಅಣತಿಯಂತೆ ವರ್ತಿಸುತ್ತಿದ್ದು, ರೈತರನ್ನು ಕಡೆಗಣಿಸಿ ಗ್ರಾ.ಪಂ ಕಾರ್ಯಕ್ಕೆ ಜಾಗ ಮಂಜೂರು ಮಾಡಿದ್ದಾರೆ ಎಂದು ಮಣಿಉತ್ತಪ್ಪ ಆರೋಪಿಸಿದರು. ಸಂಘದ ಉಪಾಧ್ಯಕ್ಷ ಹೆಚ್.ಎಸ್.ತಿಮ್ಮಪ್ಪಯ್ಯ ಮಾತನಾಡಿ, ಸಂಘದಲ್ಲಿ ಒಡಕು ಮೂಡಿಸುವದಕ್ಕಾಗಿ ಕೆಲವರು ವಿಳಾಸವಿಲ್ಲದ ಅನಾಮದೇಯ ಪತ್ರಗಳ ಮೂಲಕ ವಿನಾಕಾರಣ ಅಧ್ಯಕ್ಷರ ವಿರುದ್ಧ ಗೂಬೆ ಕೂರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.