ಚೆಟ್ಟಳ್ಳಿ, ಆ. 11: ಚೆಟ್ಟಳ್ಳಿ ಪಟ್ಟಣಕ್ಕೆ ಕಾಲಿಟ್ಟಾಗ ಗಬ್ಬುನಾತ ಮೂಗಿಗೆ ಬಡಿದೊಡನೆ ಎಲ್ಲಿಂದ ವಾಸನೆ ಬರುತ್ತಿದೆ ಎಂದು ಜನರು ಹುಡುಕಾಡುವಂತಾಗಿದೆ.
ಪಂಚಾಯಿತಿ ಬದಿಯಿರುವ ರಾಶಿ ರಾಶಿ ಕಸದಿಂದ ಗಬ್ಬು ವಾಸನೆ ಬರುತ್ತಿದೆ. ಕೋಳಿ ಅಂಗಡಿಯ ತ್ಯಾಜ್ಯವೆಲ್ಲ ಸುರಿಯಲಾಗುತ್ತಿದೆ. ಕೊಳೆತ ತರಕಾರಿಗಳು, ಅಂಗಡಿ ಮಳಿಗೆಗಳ ಕಸವೆಲ್ಲ ನಿತ್ಯವೂ ಇಲ್ಲಿ ರಾಶಿ ಬೀಳುತ್ತಿದೆ.
ಕಸದ ಕೊಂಪೆಯ ಸುತ್ತ ವಾಸಿಸುವವರು ನರಕಯಾತನೆಯ ಬದುಕೆನ್ನುವರು. ಸಾರ್ವಜನಿಕರು ಪಂಚಾಯಿತಿಯನ್ನು ದೂರುತ್ತಿದ್ದು, ಸುತ್ತಲಿನ ಅಂಗಡಿ ಮಳಿಗೆಯವರು ಇರಲಾಗದ ಪರಿಸ್ಥಿತಿಯಿಂದ ಊಟ ಮಾಡುವಾಗ ವಾಕರಿಕೆಯಾಗುತ್ತಿದೆ. ವಿದ್ಯುತ್ ಮಂಡಳಿ, ಅಂಚೆ ಕಚೇರಿ, ಸಹಕಾರ ಭವನದ ಸಿಬ್ಬಂದಿಗಳು ಕಸದ ಕೊಂಪೆಯ ಗಬ್ಬು ವಾಸನೆಯಿಂದ ಬೇಸತ್ತು ಹೋಗಿದ್ದಾರೆ.
ಹಳೆದ ಹಲವು ತಿಂಗಳ ಹಿಂದೆ ಪಂಚಾಯಿತಿ ಕಸದ ಕೊಂಪೆಗೆ ಮುಕ್ತಿ ಕರುಣಿಸಲು ಜಾಗ ಹುಡುಕಾಡಿ ಕೊನೆಗೆ ಬೇರಂಗಿ ಬೆಟ್ಟದ ಜಾಗದಲ್ಲಿ ಟ್ರ್ಯಾಕ್ಟರ್‍ನಲ್ಲಿ ಹೊತ್ತೊಯ್ದು ಸುರಿದರು. ಅಲ್ಲೂ ಸುತ್ತಲಿನ ಸಾರ್ವಜನಿಕರ ದೂರಿನಿಂದ ಕಸದ ಸಮಸ್ಯೆಗೆ ವಿಘ್ನ ಏರ್ಪಟ್ಟಿತಾದರೂ ಹಲವು ಲೋಡು ಕಸ ಬೆಟ್ಟದ ಮಣ್ಣಿನೊಳಕ್ಕೆ ಸೇರಿಹೋದವು.
ಕೋಳಿಯ ತ್ಯಾಜ್ಯವನ್ನು ಟೆಂಡರ್ ನಿಯಮದಂತೆ ಪಟ್ಟಣದ ಸುತ್ತ ಹಾಕುವ ಹಾಗಿಲ್ಲ. ಬೇರೆಲ್ಲೂ ಜಾಗವಿಲ್ಲದೆ ಹಿಂದಿನ ಕಸದ ಕೊಂಪೆಯಲ್ಲೇ ಸುರಿಯಲಾಗುತಿದ್ದು, ಪಂಚಾಯಿತಿ ವತಿಯಿಂದ ತ್ಯಾಜ್ಯ ಸುರಿಯುತ್ತಿರುವ ಕೋಳಿ ಅಂಗಡಿಗೆ ನೋಟಿಸ್ ಜಾರಿ ಮಾಡಲಾಗಿದೆಯಾದರೂ ತ್ಯಾಜ್ಯವೆಲ್ಲ ಅಲ್ಲೇ ಬೀಳುತ್ತಿದೆ. ಪಂಚಾಯಿತಿ ಮಾಸಿಕ ಸಭೆಯಲ್ಲಿ ಚರ್ಚಿಸಿ ಕಸದ ಕೊಳೆತ ಗಬ್ಬುನಾತಕ್ಕೆ ಶಾಶ್ವತ ಪರಿಹರಿಸುವರೇ?
- ಕರುಣ್ ಕಾಳಯ್ಯ