ಗೋಣಿಕೊಪ್ಪಲು, ಆ. 12: ಇಲ್ಲಿನ ಕಾವೇರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ ಹಾಗೂ ಡೆಂಗ್ಯೂ ಅರಿವು ಕಾರ್ಯಕ್ರಮ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ವೀರಾಜಪೇಟೆ ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್ ಮಾತನಾಡಿ “ಮಕ್ಕಳಲ್ಲಿ ರಕ್ತಹೀನತೆ, ಅಪೌಷ್ಟಿಕತೆ, ದೈಹಿಕ ಮತ್ತು ಮಾನಸಿಕ ಅಸಮತೋಲನಕ್ಕೆ ದೇಹದಲ್ಲಿರುವ ಜಂತು ಹುಳುಗಳೇ ಕಾರಣ.

ಜಂತು ಹುಳುಗಳಿಂದ ಮಕ್ಕಳಲ್ಲಿ ಹೊಟ್ಟೆ ನೋವು, ಬೇದಿ, ಶೀತ, ಜ್ವರ ಮತ್ತಿತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದಾಗಿ ಮಕ್ಕಳ ಬೆಳವಣಿಗೆ ಕುಂಟಿತಗೊಳ್ಳತ್ತದೆ. ಆದ್ದರಿಂದ 1 ವರ್ಷದಿಂದ 19 ವರ್ಷದ ಒಳಗಿನ ಮಕ್ಕಳು ಕಡ್ಡಾಯವಾಗಿ ಪ್ರತಿ ಆರು ತಿಂಗಳಿಗೊಮ್ಮೆ ಜಂತು ಹುಳು ನಿವಾರಣಾ ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಜಂತು ಹುಳುಗಳು ದೇಹವನ್ನು ಸೇರುವದನ್ನು ತಡೆಗಟ್ಟ ಬೇಕಾದರೆ ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳಬೇಕು. ಯಾವದೇ ಮಾಂಸವನ್ನು ಸೇವಿಸುವ ಮೊದಲು ಚೆನ್ನಾಗಿ ಬೇಯಿಸಬೇಕು.

ತರಕಾರಿ ಹಾಗೂ ಸೊಪ್ಪನ್ನು ಸ್ವಲ್ಪ ಸಮಯದವರೆಗೆ ಉಪ್ಪು ನೀರಿನಲ್ಲಿ ನೆನೆಸಿ ಚೆನ್ನಾಗಿ ತೊಳೆದು ನಂತರ ಉಪಯೋಗಿಸಬೇಕು ಹೀಗೆ ಮಾಡುವದರಿಂದ ಅದರಲ್ಲಿರುವ ಜಂತು ಹುಳುವಿನ ಲಾರ್ವ ನಾಶವಾಗುತ್ತವೆ” ಎಂದರು. ನಂತರ ಡೆಂಗ್ಯೂ ಹರಡುವ ಮತ್ತು ತಡೆಗಟ್ಟುವ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟು ಮನೆಯ ಹೊರಗೆ ಮತ್ತು ಒಳಗೆ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಕರೆ ನೀಡಿದರು. ಈ ಸಂದರ್ಭ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಜಂತು ಹುಳು ನಿವಾರಣಾ ಮಾತ್ರೆಗಳನ್ನು ವಿತರಿಸಲಾಯಿತು. ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಅವರ ಅದ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯರಾದ ಪಿ.ಯು. ದಮಯಂತಿ, ಕೆ.ಪಿ. ಶಾಂತ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಎ.ಕೆ. ಕಾವೇರಮ್ಮ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಜಸಿಂತ ವಿನ್ಸೆಂಟ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಯಾನ ಉಪನ್ಯಾಸಕರಾದ ಚೇತನ್ ಚಿಣ್ಣಪ್ಪ ಹಾಗೂ ಮಹಮದ್ ಅಕ್ರಂ ಉಪಸ್ಥಿತರಿದ್ದರು. ವಿನೀಷ ಮತ್ತು ಕ್ಷೀರಾ ಪ್ರಾರ್ಥಿಸಿದರು. ಅನುವರ್ಣ ನಿರೂಪಿಸಿದರು.