*ಗೋಣಿಕೊಪ್ಪಲು, ಆ. 11: ಮೈಸೂರು ದಸರಾ ಉತ್ಸವಕ್ಕೆ ತೆರಳಲು ಮತ್ತಿಗೋಡು ಸಾಕಾನೆ ಶಿಬಿರದಿಂದ ಮೂರು ಆನೆಗಳು ಶುಕ್ರವಾರ ಹುಣಸೂರು ತಾಲೂಕಿನ ವೀರನ ಹೊಸಳ್ಳಿಗೆ ಮೊದಲ ತಂಡದಲ್ಲಿ ಪ್ರಯಾಣ ಬೆಳೆಸಿದವು 50 ವರ್ಷ ಪ್ರಾಯದ ಅಭಿಮನ್ಯು, 17 ವರ್ಷದ ಭೀಮ, 61ರ ಹರೆಯದ ವರಲಕ್ಷ್ಮಿಯನ್ನು ಮಾವುತರು ಮತ್ತು ಕಾವಾಡಿಗಳು ಕರೆದೊಯ್ದರು. ಇದೇ ಮೊದಲ ಬಾರಿಗೆ ದಸರಾ ಉತ್ಸವಕ್ಕೆ ತೆರಳಿದ ಅಭಿಮನ್ಯುವನ್ನು ಮಾವುತ ವಸಂತ, ಕಾವಾಡಿ ಜೆ.ಕೆ. ರಾಜು, ಶಿಬಿರದಿಂದ ಬೀಳ್ಕೊಟ್ಟರು. ಭೀಮನನ್ನು ಕಾವಾಡಿಗಳಾದ ರಾಧಾಕೃಷ್ಣ ಮತ್ತು ರಾಜು ಕರೆದೊಯ್ದರು, ವರಲಕ್ಷ್ಮಿಯನ್ನು ಮಾವುತ ಗುಂಡು, ಕಾವಾಡಿ ಸತೀಶ್ ತಮ್ಮ ಜೊತೆಯಲ್ಲಿ ಕರೆದೊಯ್ದರು.

ವರಲಕ್ಷ್ಮಿ ಈ ಹಿಂದೆಯೇ ಅನೇಕ ಬಾರಿ ದಸರಾ ಉತ್ಸವದಲ್ಲಿ ಪಾಲ್ಗೊಂಡಿರುವ ಅನುಭವವಿದೆ. ಆದರೆ ಅಭಿಮನ್ಯು ಮತ್ತು ಭೀಮ ಪ್ರಥಮ ಬಾರಿಗೆ ತೆರಳುತ್ತಿರುವುದರಿಂದ ಇವುಗಳನ್ನು ಅತ್ಯಂತ ಎಚ್ಚರಿಕೆಯಿಂದ ಸಂಬಂಧಪಟ್ಟ ಕಾವಾಡಿಗಳು ಲಾರಿಯ ಮೂಲಕ ಕರೆದುಕೊಂಡು ಹೋದರು. ವೀರನಹೊಸಳ್ಳಿಯಲ್ಲಿ ತಂಗುವ ಈ ಆನೆಗಳನ್ನು ಅಲ್ಲಿಂದ ವಿಜೃಂಭಣೆಯ ಪೂಜೆ ಪುರಸ್ಕಾರದ ಮೂಲಕ ಮೈಸೂರಿಗೆ ಕಳುಹಿಸಿಕೊಡಲಾಗುವದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದರು.

- ಚಿತ್ರ ವರದಿ : ಎನ್.ಎನ್. ದಿನೇಶ್