ಮಡಿಕೇರಿ, ಆ. 12: ಐತಿಹಾಸಿಕ ಮಡಿಕೇರಿ ದಸರಾ ನಾಡಹಬ್ಬ ಸಮಿತಿಯ ಕಾರ್ಯಾಧ್ಯಕ್ಷ ಅಭ್ಯರ್ಥಿ ಸ್ಥಾನಕ್ಕೆ ತೀವ್ರ ಪೈಪೋಟಿ ನಡುವೆ ಇಂದು ಅಂತಿಮ ಕ್ಷಣದಲ್ಲಿ ಮತದಾನ ನಡೆಯುವದರೊಂದಿಗೆ ಮಹೇಶ್ ಜೈನಿ ಪುನರಾಯ್ಕೆಗೊಂಡಿದ್ದಾರೆ. ಕಾರ್ಯಾಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಕೆ.ಎಸ್. ರಮೇಶ್ 14 ಮತಗಳಲ್ಲಿ ಕೇವಲ 4 ಮತಗಳಿಸಿ ಪರಾಭವಗೊಂಡರೆ, ಮಹೇಶ್ ಜೈನಿ 10 ಮತಗಳೊಂದಿಗೆ ಗೆಲುವಿನ ನಗೆ ಬೀರಿದರು.
ಇಲ್ಲಿನ ಕಾವೇರಿ ಕಲಾಕ್ಷೇತ್ರದಲ್ಲಿ ಇಂದು ಅಪರಾಹ್ನ ಮುಂದಿನ ಕಾರ್ಯಾಧ್ಯಕ್ಷರ ಆಯ್ಕೆ ಸಂಬಂಧ ದಶಮಂಟಪಗಳ ಅಧ್ಯಕ್ಷರ ನೇತೃತ್ವದಲ್ಲಿ; ಉಭಯ ಕಡೆಯಿಂದ ಮತದಾನಕ್ಕೆ ಪಟ್ಟುಹಿಡಿದ ಮೇರೆಗೆ ಚುನಾವಣೆ ನಡೆಸಲಾಯಿತು.ನಗರದ ಪೇಟೆ ರಾಮಮಂದಿರ, ದೇಚೂರು ರಾಮಮಂದಿರ, ಕೋದಂಡರಾಮ ದೇವಾಲಯ, ಕರವಲೆ ಭಗವತಿ, ಚೌಡೇಶ್ವರಿ, ಕೋಟೆ ಗಣಪತಿ ಮಂಟಪಗಳ ಪ್ರತಿನಿಧಿಗಳಿಗೆ ತಲಾ ಒಂದೊಂದು ಮತ ನೀಡಲು ಅವಕಾಶ ಕಲ್ಪಿಸಲಾಯಿತು.ಅಲ್ಲದೆ ಕರಗ ದೇವಾಲಯಗಳ ಮಂಟಪ ಸಮಿತಿ ಅಧ್ಯಕ್ಷರು ಹಾಗೂ ಅರ್ಚಕರು ಸೇರಿದಂತೆ ತಲಾ ಎರಡೆರಡು ಮತಗಳನ್ನು ಚಲಾಯಿಸಲು ಆಯಾ ಸಮಿತಿ ಅಧ್ಯಕ್ಷರು ಮತ್ತು ಅರ್ಚಕರಿಗೆ ಅನುವು ಮಾಡಿಕೊಡಲಾಗಿತ್ತು.
ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ಕಂಚಿ ಕಾಮಾಕ್ಷಿ, ದಂಡಿನ ಮಾರಿಯಮ್ಮ ಹಾಗೂ ಕೋಟೆ ಮಾರಿಯಮ್ಮ ಪ್ರತಿನಿಧಿಗಳು ಸೇರಿ ಒಟ್ಟು 14 ಮಂದಿ ಮತದಾನದಲ್ಲಿ ಪಾಲ್ಗೊಂಡಿದ್ದರು. ಮತ ಎಣಿಕೆ ವೇಳೆ ಮಹೇಶ್ ಜೈನಿ 10 ಹಾಗೂ ಕೆ.ಎಸ್. ರಮೇಶ್ 4 ಮತಗಳನ್ನು ಗಳಿಸಿರುವದು ದೃಢಪಟ್ಟಿತು.
ಈ ಮೊದಲು ಕಾರ್ಯಾಧ್ಯಕ್ಷ ಸ್ಥಾನ ಆಕಾಂಕ್ಷಿಗಳಾಗಿದ್ದ ಬಿ.ಎಂ. ರಾಜೇಶ್, ಬಿ.ಎಸ್. ಪ್ರಶಾಂತ್, ಎಚ್.ಟಿ. ಅನಿಲ್, ನಂದೀಶ ಹಾಗೂ ಮನು ಮಂಜುನಾಥ್ ಕೊನೆಯ ಕ್ಷಣದಲ್ಲಿ ಚುನಾವಣೆಯಿಂದ
(ಮೊದಲ ಪುಟದಿಂದ) ಹಿಂದೆ ಸರಿದರೂ, ಇಬ್ಬರ ನಡುವೆ ಸ್ಪರ್ಧೆ ಏರ್ಪಟ್ಟಿದ್ದರಿಂದ ಚುನಾವಣೆ ನಡೆಸುವದಾಗಿ ದಶಮಂಟಪ ಸಮಿತಿ ಅಧ್ಯಕ್ಷ ಸತೀಶ್ ಧರ್ಮಪ್ಪ ಪ್ರಕಟಿಸಿದರು.
ಜೈನಿ ಹೇಳಿಕೆ: ಕಳೆದ ಎರಡು ವರ್ಷಗಳಲ್ಲಿ ಕಾರ್ಯಾಧ್ಯಕ್ಷನಾಗಿ ಮಾಡಿದ ಕೆಲಸ ಕಾರ್ಯ ಗಮನಿಸಿ, ಎಲ್ಲರ ಸಹಕಾರದಿಂದ ಗೆಲುವು ಸಾಧಿಸಿದ್ದು, ಕೆ.ಎಸ್. ರಮೇಶ್ ಸೇರಿದಂತೆ ನಗರಸಭೆಯ ಎಲ್ಲಾ ಪ್ರತಿನಿಧಿಗಳು, ಸಾರ್ವಜನಿಕರ ಸಹಕಾರದಿಂದ ಈ ಬಾರಿಯ ದಸರಾವನ್ನು ಉತ್ತಮ ರೀತಿ ನಡೆಸುವದಾಗಿ ಮಹೇಶ್ ಜೈನಿ ಅನಿಸಿಕೆ ಹಂಚಿಕೊಂಡರು. ಕಾರ್ಯಾಧ್ಯಕ್ಷರ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಬಳಿಕ ಉಭಯ ಕಡೆಯವರು ಪರಸ್ಪರ ಉಭಯಕುಶಲೋಪರಿ ಹಂಚಿಕೊಳ್ಳುತ್ತಿದ್ದ ದೃಶ್ಯ ಎದುರಾಯಿತು. ನಗರಸಭಾ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ಸದಸ್ಯರುಗಳಾದ ಪಿ.ಡಿ. ಪೊನ್ನಪ್ಪ, ಪ್ರಕಾಶ್ ಆಚಾರ್ಯ ಸೇರಿದಂತೆ ಹತ್ತು ದೇವಾಲಯಗಳ ಪ್ರತಿನಿಧಿಗಳು ಹಾಜರಿದ್ದರು.