ಕುಶಾಲನಗರ, ಆ. 12: ಜಿಲ್ಲೆಯಲ್ಲಿ ಸದ್ಯದಲ್ಲಿಯೇ ಎರಡು ನೂತನ ಸಾಕಾನೆ ಶಿಬಿರ ತೆರೆಯಲು ಚಿಂತನೆ ಹರಿಸಲಾಗಿದೆ ಎಂದು ಮಡಿಕೇರಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್ ತಿಳಿಸಿದ್ದಾರೆ. ಅವರು ವಿಶ್ವ ಆನೆ ದಿನಾಚರಣೆ ಅಂಗವಾಗಿ ದುಬಾರೆ ಸಾಕಾನೆ ಶಿಬಿರದಲ್ಲಿ ನಡೆದ ಆನೆ ಉತ್ಸವಕ್ಕೆ ಚಾಲನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ದುಬಾರೆ ಸಾಕಾನೆ ಶಿಬಿರದಲ್ಲಿ 30 ಸಾಕಾನೆಗಳು ಇದ್ದು ಅವುಗಳ ನಿರ್ವಹಣೆ ನಡೆಯುತ್ತಿದೆ. ಕೆಲವು ಆನೆಗಳನ್ನು ಚಿಕ್ಲಿಹೊಳೆ ಮತ್ತು ಹಾರಂಗಿ ನದಿ ತಟದಲ್ಲಿ ನಿರ್ಮಾಣವಾಗಲಿರುವ ನೂತನ ಶಿಬಿರಗಳಿಗೆ ಸ್ಥಳಾಂತರಿಸಲಾಗುವದು.

ದುಬಾರೆ ಸಾಕಾನೆ ಶಿಬಿರದಲ್ಲಿ ಪ್ರತಿನಿತ್ಯ ಪ್ರವಾಸಿಗರಿಗೆ ಆನೆಗಳ ಚಟುವಟಿಕೆ ಬಗ್ಗೆ ಅರಿವು ಮೂಡಿಸಲಾಗುವದು. ಪ್ರವಾಸಿಗರಿಗೆ ಆನೆ ಸ್ನಾನ, ಅವುಗಳಿಗೆ ಆಹಾರ ಒದಗಿಸುವ ಬಗ್ಗೆ ಮಾಹಿತಿ ನೀಡಲು ಸಿಬ್ಬಂದಿಗಳನ್ನು ನೇಮಿಸಲಾಗುವದು ಎಂದರು. ಶಿಬಿರದಲ್ಲಿರುವ ಮರಿಯಾನೆ ಕಾರ್ತಿಕ್ ಆರೋಗ್ಯ ಚೆನ್ನಾಗಿದ್ದು ಸದ್ಯದಲ್ಲಿಯೇ ಸ್ಕ್ರಾಲ್‍ನಿಂದ ಹೊರಗೆ ಬಿಡಲು ಸಿದ್ದತೆ ನಡೆಯುತ್ತಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಕಾವೇರಿ ನದಿಗೆ ಅಡ್ಡಲಾಗಿ ತೂಗುಸೇತುವೆಯೊಂದನ್ನು ನಿರ್ಮಿಸಲು ಪ್ರವಾಸೋದ್ಯಮ ಇಲಾಖೆಯೊಂದಿಗೆ ಪತ್ರ ವ್ಯವಹಾರ ನಡೆಸಲಾಗುವದು ಎಂದು ಸೂರ್ಯಸೇನ್ ತಿಳಿಸಿದ್ದಾರೆ.

ಇದೇ ಸಂದರ್ಭ ಆನೆ ಉತ್ಸವ ಅಂಗವಾಗಿ ಶಿಬಿರದ 30 ಆನೆಗಳಿಗೆ ಹಲವು ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಸಾಕಾನೆ ಶಿಬಿರದ ಪ್ರಶಾಂತ್, ಏಕದಂತ, ಇಂದ್ರ, ತೀರ್ಥರಾಮ, ಕಂಚನ್, ಅಯ್ಯಪ್ಪ, ರಂಜನ್, ಧನಂಜಯ, ಈಶ್ವರ, ಗೋಪಿ, ವಾಲಿ, ಸುಗ್ರೀವ, ಮೈಥಿಲಿ ಸೇರಿದಂತೆ 25 ಕ್ಕೂ ಹೆಚ್ಚು ಆನೆಗಳು ಚೆಂಡಾಟ ಕ್ರೀಡೆಯಲ್ಲಿ ಪಾಲ್ಗೊಂಡವು. ಆದರೆ ಈ ಸಂದರ್ಭ ಕಾರ್ತಿಕ್ ಮರಿಯಾನೆ ಮಾತ್ರ ಸ್ಕ್ರಾಲ್‍ನ ಒಳಗಡೆ ಬಂಧನದಲ್ಲಿ ಇದ್ದ ದೃಶ್ಯ ಗೋಚರಿಸಿತು.

ಪ್ರವಾಸಿಗರಿಗೆ ಆನೆಗಳ ಬಗ್ಗೆ ಮತ್ತು ಆಹಾರ ಒದಗಿಸುವ ಬಗ್ಗೆ ಮಾಹಿತಿ ಒದಗಿಸಲಾಯಿತು. ಮಾವುತ ಕಾವಾಡಿಗರಿಗೆ ಸಮವಸ್ತ್ರ ವಿತರಿಸಲಾಯಿತು.

ಈ ಸಂದರ್ಭ ಕುಶಾಲನಗರ ವಲಯ ಅರಣ್ಯಾಧಿಕಾರಿ ಸಿ.ಆರ್. ಅರುಣ್, ಉಪ ಅರಣ್ಯ ವಲಯಾಧಿಕಾರಿ ರಂಜನ್, ಶಿವರಾಂ ಮತ್ತು ಸಿಬ್ಬಂದಿಗಳು ಇದ್ದರು.

ಪ್ರವಾಸಿಗರ ದಂಡು

ಸತತ 4 ದಿನ ಸರಕಾರಿ ರಜೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ವಿವಿಧ ಪ್ರವಾಸಿ ಕೇಂದ್ರಗಳು ಪ್ರವಾಸಿಗರಿಂದ ತುಂಬಿ ಹೋಗಿದ್ದ ದೃಶ್ಯ ಗೋಚರಿಸಿತು. ದುಬಾರೆ ಸಾಕಾನೆ ಶಿಬಿರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬೋಟಿಂಗ್, ರ್ಯಾಫ್ಟಿಂಗ್ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದು, ಕಂಡುಬಂತು.

ಮೈಸೂರಿಗೆ ಕಾವೇರಿ - ವಿಜಯ : ದುಬಾರೆ ಸಾಕಾನೆ ಶಿಬಿರದಿಂದ ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ಎರಡು ಆನೆಗಳನ್ನು ಶುಕ್ರವಾರ ಕಳುಹಿಸಲಾಗಿದೆ. ಶಿಬಿರದ ಕಾವೇರಿ ಮತ್ತು ವಿಜಯ ಎಂಬ ಆನೆಗಳನ್ನು ಲಾರಿ ಮೂಲಕ ಸಾಗಿಸಲಾಯಿತು. ಈ ಆನೆಗಳು ಕಳೆದ ಹಲವು ವರ್ಷಗಳಿಂದ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುತ್ತಿವೆ.

ಇಲಾಖೆ ವೇತನ : ದುಬಾರೆ ಸಾಕಾನೆ ಶಿಬಿರದ ದಿನಗೂಲಿ ನೌಕರರಿಗೆ 3 ತಿಂಗಳ ಬಾಕಿ ವೇತನವನ್ನು ಪಾವತಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ. ಕಳೆದ 5 ತಿಂಗಳಿನಿಂದ ದಿನಗೂಲಿ ನೌಕರರಿಗೆ ವೇತನ ನೀಡದ ಹಿನ್ನೆಲೆಯಲ್ಲಿ ಈ ಬಾರಿಯ ಮೈಸೂರು ದಸರಾದಲ್ಲಿ ಆನೆಗಳೊಂದಿಗೆ ಪಾಲ್ಗೊಳ್ಳುವದಿಲ್ಲ ಎಂಬ ಎಚ್ಚರಿಕೆ ನೀಡಿದ್ದರು. ತಕ್ಷಣ ಇಲಾಖೆ ವೇತನ ಪಾವತಿಗೆ ಕ್ರಮಕೈಗೊಂಡಿದ್ದು ಇದೀಗ ಎರಡು ತಿಂಗಳ ಸಂಬಳ ಬಾಕಿಯಿದೆ ಎಂದು ಕಾರ್ಮಿಕರು ತಿಳಿಸಿದ್ದಾರೆ.