ಸೋಮವಾರಪೇಟೆ, ಆ. 11: ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವದರಿಂದ ಸೇವೆ, ದೇಶಭಕ್ತಿಯೊಂದಿಗೆ ಆತ್ಮಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು ಎಂದು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಮಾ ಸುದೀಪ್ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ತಾಲೂಕು ಸಂಸ್ಥೆ ವತಿಯಿಂದ ಸಂಸ್ಥೆಯ ಸಭಾಂಗಣದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗಾಗಿ 71ನೇ ಸ್ವಾತಂತ್ರ್ಯೋತ್ಸ ವದ ಅಂಗವಾಗಿ ಆಯೋಜಿಸಿದ್ದ ತಾಲೂಕು ಮಟ್ಟದ ದೇಶಭಕ್ತಿಗೀತೆ ಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ಸ್ಕೌಟ್ಸ್, ಗೈಡ್ಸ್‍ಗಳಲ್ಲಿ ತೊಡಗಿಸಿಕೊಳ್ಳುವದ ರೊಂದಿಗೆ ಶಿಸ್ತು, ಧೈರ್ಯ, ಪ್ರಾಮಾಣಿ ಕತೆಗಳನ್ನು ಪಠ್ಯದೊಂದಿಗೆ ಅಭ್ಯಸಿಸುತ್ತಾ ಬಂದರೆ ಉತ್ತಮ ಭವಿಷ್ಯವನ್ನು ರೂಪಿಸಿ ಕೊಳ್ಳಬಹುದು ಎಂದರು.
ಜಯಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಸಿ.ಬಿ. ಸುರೇಶ್ ಶೆಟ್ಟಿ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಲ್ಲಿ ಸೇವೆ, ನಾಯಕತ್ವ ಗುಣಗಳನ್ನು ಬೆಳೆಸುವ ಸಂಸ್ಥೆ ಯಾಗಿದ್ದು, ಪ್ರತಿಯೊಂದು ಸರಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಘಟಕಗಳನ್ನು ಪ್ರಾರಂಭಿಸುವ ಮೂಲಕ ವಿದ್ಯಾರ್ಥಿ ಗಳಿಗೆ ಅವಕಾಶ ಮಾಡಿ ಕೊಡಬೇಕೆಂದು ಒತ್ತಾಯಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಸಂಸ್ಥೆ ಅಧ್ಯಕ್ಷ ಬಿ.ಎ. ಭಾಸ್ಕರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಹಿಳಾ ಸಮಾಜದ ಅಧ್ಯಕ್ಷೆ ನಳಿನಿ ಗಣೇಶ್, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಮಾಲತಿ, ಸ.ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಎಂ.ಜೆ. ಅಣ್ಣಮ್ಮ, ಬಿಐಇಆರ್‍ಟಿ ರತ್ನಮ್ಮ, ಬಿಆರ್‍ಪಿ ಶಶಿಧರ್, ಸಿಆರ್‍ಪಿ ಲಕ್ಷ್ಮಿ, ತಾಲೂಕು ಸಂಸ್ಥೆ ಕಾರ್ಯದರ್ಶಿ ಚಂದ್ರಶೇಖರ್, ಚಂದ್ರಕಲಾ, ಮಾನೆರಾಜು ಉಪಸ್ಥಿತರಿದ್ದರು.