ಮಡಿಕೇರಿ, ಆ. 12: ವಿಶ್ವದ ಅನೇಕ ದೇಶಗಳಲ್ಲಿ ತಮ್ಮ ವಸ್ತುಗಳ ಮಾರಾಟ ಜಾಲವನ್ನು ವಿಸ್ತರಿಸಿಕೊಳ್ಳುತ್ತಿರುವ ಚೈನಾ ದೇಶ ಮಾರುಕಟ್ಟೆಯ ಏಕಸ್ವಾಮ್ಯ ಹೊಂದಲು ಯತ್ನಿಸುತ್ತಿದ್ದು, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುತ್ತಿರುವ ಚೈನಾದ ವಸ್ತುಗಳನ್ನು ಬಹಿಷ್ಕರಿಸುವಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಸಹಪ್ರಾಂತ ಪ್ರಚಾರ ಪ್ರಮುಖ್ ಪ್ರದೀಪ್ ಕರೆ ನೀಡಿದರು. ಸಾಮರಸ್ಯ ವೇದಿಕೆ ಮಡಿಕೇರಿ ಘಟಕದ ವತಿಯಿಂದ ನಗರದ ಓಂಕಾರ ಸದನದಲ್ಲಿ ನಡೆದ ‘ಭಾರತದ ರಾಷ್ಟ್ರೀಯ ಸುರಕ್ಷತೆಗೆ ಚೀನಾ ಸವಾಲುಗಳು’ ಎಂಬ ವಿಷಯದಲ್ಲಿ
(ಮೊದಲ ಪುಟದಿಂದ) ನಡೆದ ಸದ್ಭಾವನಾ ಗೋಷ್ಠಿಯಲ್ಲಿ ವಕ್ತಾರರಾಗಿ ಭಾಗವಹಿಸಿ ಮಾತನಾಡಿದರು.
ಚೈನಾ ದೇಶವು 1951ರಲ್ಲಿ ಟಿಬೇಟನ್ನು ಆಕ್ರಮಣ ಮಾಡಿಕೊಳ್ಳುವ ಮೂಲಕ ನಮ್ಮ ದೇಶದ ಗಡಿಯ ಹತ್ತಿರ ಬರುವದರೊಂದಿಗೆ ಚೈನಾ ತನ್ನ ಗಡಿಗಳನ್ನು ವಿಸ್ತರಿಸಿಕೊಳ್ಳುತ್ತಿದೆ. ಅನೇಕ ದೇಶಗಳಲ್ಲಿ ಚೈನಾ ತನ್ನ ರಾಜಕೀಯ ಪ್ರಭಾವವನ್ನು ಬೀರುತ್ತಿದೆ ಅಲ್ಲದೆ ಅನೇಕ ಭೂಭಾಗಗಳನ್ನು ತನ್ನ ಪ್ರದೇಶವೆಂದು ಮನವಿ ಮಾಡುವ ಮೂಲಕ ಭೂ ಪ್ರದೇಶವನ್ನು ವಿಸ್ತರಿಸಿಕೊಳ್ಳುತ್ತಿದ್ದು, ನೆರೆಯ 18 ದೇಶಗಳೊಂದಿಗೆ ಗಡಿ ತಕರಾರು ಮಾಡಿಕೊಂಡಿದೆ. ಈ 18 ದೇಶಗಳು ಭಾರತ ಮಿತ್ರ ದೇಶಗಳಾಗಿವೆ.
ಪಾಕಿಸ್ತಾನ ನಮ್ಮ ಸೈನಿಕರನ್ನು, ನಾಗರಿಕರನ್ನು ಕೊಲ್ಲುತ್ತಿದ್ದರೆ ಚೈನಾ ಯುದ್ಧ ಅಂದರೆ ಮೋಸವೆಂದು ಹೇಳಿದ ಸೈನ್ಯಾಧಿಕಾರಿ ಸುನ್‍ಜು ಎಂಬಾತನ ತತ್ವದ ಆಧಾರದಂತೆ ಶತ್ರುಗಳನ್ನು ಸುತ್ತುವರಿದು ಕೊಲ್ಲುವ ನೀತಿಯನ್ನು ಅನುಸರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದ ಸುತ್ತಲೂ ಚೈನಾ ತನ್ನ ನೌಕಾ ನೆಲೆಯನ್ನು ಆರಂಭಿಸಿದೆ. ಆದರೆ ಭಾರತದ ನಿವಾಸಿಗಳು ಮನೆ ಮುಂದೆ ಹೋಗುತ್ತಿರುವ ಮಾರಿಯನ್ನು ಒಳಗಡೆ ಕರೆಯುತ್ತಿದ್ದು, ಚೈನಾ ವಸ್ತುಗಳು ದೇಶಾದ್ಯಂತ ವ್ಯಾಪಿಸಿದೆ. ನಮ್ಮ ದೇಶದ ಅನೇಕ ಸಣ್ಣ ಕೈಗಾರಿಕೆಗಳು ಬಾಗಿಲು ಮುಚ್ಚಿದ್ದು, ರೂ.5,89,502 ಕೋಟಿ ಸುಸ್ತಿ ಸಾಲದೊಂದಿಗೆ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ. ದೇಶದ ಸಣ್ಣ ಕೈಗಾರಿಕೆ, ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ ಅಗತ್ಯ. ಚೈನಾ ವಸ್ತು ಬಹಿಷ್ಕರಿಸುವದೇ ಇದಕ್ಕೆ ಪರಿಹಾರವಾಗಿದೆ. ದೇಶದ ಯುವ ಜನತೆ ರಾಯಭಾರಿಗಳಾಗಿ, ರಾಜಕೀಯ ನಾಯಕತ್ವ, ಮಾಧ್ಯಮ- ಸಾಮಾಜಿಕ ಜಾಲತಾಣ ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ತಮ್ಮನ್ನು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವ ಮೂಲಕ ದೇಶಭಕ್ತಿಯನ್ನು ಮೆರೆಯಬೇಕಾಗಿದೆ. ಡೋಕ್ಲಾಂನಲ್ಲಿ ಚೈನಾದ ಸೇನೆ 100 ಮೀ. ಹಿಂದೆ ಸರಿಯುವದಾಗಿ ಹೇಳಿದೆ. ಆದರೆ ಭಾರತದ ಸೇನೆ 250 ಮೀ. ಹಿಂದೆ ಸರಿಯುವಂತೆ ಹೇಳಿದ್ದು, ತಾತ್ಕಾಲಿಕ ಗೆಲುವು ದೊರೆತಿದೆ. 1967ರಲ್ಲಿ ಚೆÉೈನಾ ಆಟದ ಮೈದಾನವನ್ನು ರೂಪಿಸಿತ್ತು. ಆದರೆ 2017ರಲ್ಲಿ ಆಟದ ಮೈದಾನವನ್ನು ಭಾರತ ರೂಪಿಸಿದೆ. ಯುದ್ದ ಯಾವ ದೇಶಕ್ಕೂ ಬೇಕಾಗಿಲ್ಲ. ಚೈನಾಕ್ಕೆ ಶತ್ರುಗಳು ಹೆಚ್ಚಿದ್ದಾರೆ. ಭಾರತಕ್ಕೆ ಮಿತ್ರರು ಹೆಚ್ಚಿದ್ದಾರೆ. ಮೋಸ ಹೋಗದ ರಣನೀತಿಯನ್ನು ಭಾರತ ಸರ್ಕಾರ ಮತ್ತು ಸೈನ್ಯ ಕಂಡುಕೊಂಡಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ತಹಶೀಲ್ದಾರ್ ಟಿ.ಸಿ. ತಮ್ಮಯ್ಯ ಮಾತನಾಡಿ, ಜಾತಿ - ಜಾತಿಗಳ ಮಧ್ಯೆ ಸಾಮರಸ್ಯ ಮೂಡಿಸುವದರೊಂದಿಗೆ ಸಂಘಟಿತ ಸಮಾಜವನ್ನು ನಿರ್ಮಾಣ ಮಾಡಬೇಕಾಗಿದೆ. ಆ ಮೂಲಕ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಜವಾಬ್ದಾರಿ, ಸಾಮರಸ್ಯ ವೇದಿಕೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಸಮಾಜಗಳ ಪ್ರಮುಖರು, ಸಂಘ- ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಭಾರತಿ ರಮೇಶ್ ಪ್ರಾರ್ಥಿಸಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಪರ್ಕ ಪ್ರಮುಖ್ ಅರುಣ್ ಕುಮಾರ್ ಸ್ವಾಗತಿಸಿ, ಶಿವಾಜಿ ಕಾರ್ಯಕ್ರಮ ನಿರೂಪಿಸಿದರೆ, ಚಂದ್ರ ವಂದಿಸಿದರು.