ಸಿದ್ದಾಪುರ, ಆ. 13: ಕೇಂದ್ರ ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಲಪಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕೆಂದು ಶಾಸಕ ಅಪ್ಪಚ್ಚು ರಂಜನ್ ಕರೆ ನೀಡಿದರು. ನೆಲ್ಲಿಹುದಿಕೇರಿಯ ಶ್ರೀ ಮುತ್ತಪ್ಪ ಸಭಾಂಗಣದಲ್ಲಿ ನಡೆದ ಬಿ.ಜೆ.ಪಿ. ಪಕ್ಷದ ವಿಸ್ತಾರಕ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮತನಾಡಿದ ಶಾಸಕರು, ಮೋದಿ ಪ್ರಧಾನ ಮಂತ್ರಿಯಾದ ಬಳಿಕ ಹಲವಾರು ಜನಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದು ಈ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕೆಂದು ಕರೆ ನೀಡಿದರು.
ರಾಜ್ಯ ಸರ್ಕಾರವು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದೆ ಎಂದ ಅವರು ಬಡವರ ಹಾಗೂ ದಲಿತರ ಅನುದಾನವನ್ನು ದುರುಪಯೋಗಪಡಿಸಿಕೊಂಡಿದ್ದು, ಸಿದ್ದರಾಮಯ್ಯ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿಯಿಲ್ಲ ಎಂದು ದೂರಿದರು.
ಬಿ.ಜೆ.ಪಿ ಸರ್ಕಾರ ಅಧಿಕಾರದಲ್ಲಿ ಇದ್ದ ಸಂದರ್ಭ ಮುಸ್ಲಿಂ ಸಮುದಾಯಕ್ಕೆ ಶಾದಿ ಮಹಲ್ ಯೋಜನೆಯನ್ನು ಜಾರಿಗೆ ತಂದು ಹಲವಾರು ಸಭಾಂಗಣವನ್ನು ನಿರ್ಮಿಸಲಾಗಿದೆ ಎಂದರು. ನೆಲ್ಲಿಹುದಿಕೇರಿಯ ಕುಂಬಾರಗುಂಡಿ ರಸ್ತೆ ಹಾಗೂ ಹಿಂದೂ ರುದ್ರಭೂಮಿಯ ಕಾಮಗಾರಿಗೆ ರೂ. 22 ಲಕ್ಷವನ್ನು ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಕೇಂದ್ರ ಸರ್ಕಾರ ಈಗಾಗಲೇ ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿರುವ ಬಡ ವರ್ಗದ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡಲಾಗುತ್ತಿದ್ದು, ಗ್ರಾಮಸ್ಥರು ಇದರ ಸದುಪಯೋಗ ವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ವಿಸ್ತಾರಕರಾದ ಸೋಮೇಶ್, ಭಾಸ್ಕರ್, ರಮೇಶ್, ತುಷಾರ್, ಬಿ.ಜೆ.ಪಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್, ಸ್ಥಾನೀಯ ಸಮಿತಿ ಅಧ್ಯಕ್ಷ ಕೆ.ಟಿ. ಷಾಜಿ, ಕಾರ್ಯದರ್ಶಿ ಮಂಜು, ಗ್ರಾ.ಪಂ. ಸದಸ್ಯರುಗಳಾದ ಶಶಿ, ಯೋಗೇಶ್, ಮೈನಾ, ಬಿಂದು, ಬ್ರಿಜೇಶ್, ಲಿಲ್ಲಿ ಪಕ್ಷದ ಮುಖಂಡರುಗಳಾದ ಟಿ.ಸಿ. ಅಶೋಕ, ಪಿ.ಸಿ. ಅಚ್ಚಯ್ಯ ಇನ್ನಿತರರು ಹಾಜರಿದ್ದರು.