ಮಡಿಕೇರಿ, ಆ. 13: ನವವಸಾಹತುವಿನ ಕಾರಣದಿಂದಾಗಿ ಜಾಗತಿಕ ಮಾರುಕಟ್ಟೆಗಳು ಪಡೆದುಕೊಂಡಿದ್ದು, ಭಾಷೆಯನ್ನು ಜಾಗತಿಕ ಮಾರುಕಟ್ಟೆಗಳು ನಿಯಂತ್ರಿಸುತ್ತಿವೆ. ಇದರಿಂದಾಗಿ ಜಾಗತಿಕ ವ್ಯಾಪ್ತಿ ಇಲ್ಲದಿರುವ ಅರೆಭಾಷೆ ಸೇರಿದಂತೆ ದೇಶಿಯ ಭಾಷೆಗಳು ಅವನತಿಯ ಅಂಚಿನಲ್ಲಿವೆ ಎಂದು ದೆಹಲಿಯ ಜವಾಹರ್‍ಲಾಲ್ ನೆಹರು ವಿಶ್ವವಿದ್ಯಾಲಯ, ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಡಾ. ಪುರುಷೋತ್ತಮ ಬಿಳಿಮಲೆ ಆತಂಕ ವ್ಯಕ್ತಪಡಿಸಿದ್ದಾರೆ.ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ, ಜಿಲ್ಲಾ ಪತ್ರಕರ್ತರ ಸಂಘ ಮತ್ತು ಕೊಡಗು ಪ್ರೆಸ್‍ಕ್ಲಬ್ ಸಹಯೋಗದಲ್ಲಿ ನಗರದ ಗೌಡ ಸಭಾಂಗಣದಲ್ಲಿ ನಡೆದ ಭಾಷಾ - ಮಾಧ್ಯಮ ಚಿಂತನ - ಮಂಥನ ವಿಚಾರಗೋಷ್ಠಿ ಮತ್ತು ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಾಗತಿಕ ಉದಾರೀಕರಣ ದಿಂದಾಗಿ ಇಂಗ್ಲೀಷ್ ಭಾಷೆ ಎಲ್ಲೆಡೆಯೂ ವ್ಯಾಪಿಸಿದ್ದು, ಜಾಗತಿಕ ಮಾರುಕಟ್ಟೆಯನ್ನು ನಿಯಂತ್ರಿಸುತ್ತಿರುವ ಇಂಗ್ಲೀಷ್ ಭಾಷೆಯಿಂದಾಗಿ ದೇಶಿಯ ಭಾಷೆಗಳಿಗೆ ಪ್ರಾಧ್ಯಾನತೆ ಕಡಿಮೆಯಾಯಿತು. ಇಂಗ್ಲೀಷ್ ವ್ಯಾಮೋಹ ಇದೀಗ ಜಾಸ್ತಿಯಾಗಿದೆ. ಓದು ಬರಹ ಬಾರದ ಹಳ್ಳಿಗಳಲ್ಲೂ ಇಂಗ್ಲೀಷ್ ಮಾಧ್ಯಮದ ಶಾಲೆಗಳು ತೆರೆದುಕೊಂಡಿದೆ. ಭಾರತದ ಅನೇಕ ರಾಜ್ಯಗಳಲ್ಲಿ ಮೂರ್ನಾಲ್ಕು ಭಾಷೆಗಳಿಗೆ ಆದ್ಯತೆ ನೀಡಿದೆ. ರಾಷ್ಟ್ರೀಯ ಭಾಷಾ ನೀತಿ ಭಾರತದಲ್ಲಿಲ್ಲ ಕಾರಣದಿಂದಾಗಿ ಸ್ಥಳೀಯ ಸಣ್ಣ ಸಣ್ಣ ಭಾಷೆಗಳಿಗೆ ಆದ್ಯತೆಯಿಲ್ಲದಂತಾಗಿದೆ. ಸರ್ಕಾರದ ಯೋಜನೆಗಳಲ್ಲಿ ಭಾಷೆಯ ಬೆಳವಣಿಗೆ ಆದ್ಯತೆ ಇಲ್ಲದಂತಾಗಿದ್ದು, ಮಾಧ್ಯಮಗಳಲ್ಲಿ ಕೋಮು, ಧರ್ಮ ಹಾಗೂ ಗೋವಿನ ಬಗ್ಗೆ ಚರ್ಚೆಯಾಗುತ್ತಿದ್ದರೂ, ಭಾಷೆಯ ಬಗ್ಗೆ ಚರ್ಚೆಯಾಗದಿರುವದು ವಿಷಾದನೀಯವೆಂದರು.

ಕರ್ನಾಟಕದಲ್ಲಿ ಅರೆಭಾಷೆ ಸೇರಿದಂತೆ, ಕೊಡವ, ತುಳು ಇನ್ನಿತರ ಸಣ್ಣ ಭಾಷೆಗಳು ಅಧಿಕೃತ ಭಾಷೆಯಲ್ಲ ಎಂದ ಅವರು ರಾಜ್ಯಸರ್ಕಾರ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡದಿದ್ದರೆ, ಕೇಂದ್ರ ಸರ್ಕಾರಕ್ಕೆ ಏಕೆ ಬೇಕು ಎಂದು ಪ್ರಶ್ನಿಸಿದ ಅವರು ಹಾಗಾಗಿ ಸ್ಥಳೀಯ ಭಾಷೆಗಳು ನಲುಗುತ್ತಿವೆ. ಅರೆಭಾಷೆ ಅನ್ನದ ಭಾಷೆಯಾಗುವದು ಯಾವಾಗ ಎಂದ ಅವರು ಸಣ್ಣ ಭಾಷೆಗಳಿಗೆ ಭವಿಷ್ಯ ಇದ್ದಂತಿಲ್ಲ. ದೇಶದಲ್ಲಿ 3500 ಭಾಷೆಗಳಿವೆ. ಅವುಗಳ ಪೈಕಿ 250 ಭಾಷೆಗಳು ಅವನತಿ ಅಂಚಿನಲ್ಲಿವೆ. 90 ಭಾಷೆಗಳು ಮುಂದಿನ 20 ವರ್ಷದಲ್ಲಿ ಅವನತಿ ಹೊಂದುತ್ತವೆ. ಜನತೆ ಇಂಗ್ಲೀಷ್ ಭಾಷೆಯ ಕಡೆಗೆ, ಖಾಸಗೀಕರಣದ ಕಡೆಗೆ ತೆರಳುತ್ತಿರುವ ಕಾರಣದಿಂದಾಗಿ ಮಾತೃಭಾಷೆಗಳು ಅವನತಿ ಹೊಂದುತ್ತಿವೆ. ಎಲ್ಲಾ ರಾಜ್ಯದ ಜನತೆ ಮಾತೃಭಾಷೆಗಾಗಿ ಒಟ್ಟಾಗಿ ಸಂಘಟಿತ ಹೋರಾಟ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಮಾತೃಭಾಷೆಯನ್ನು ನಾವೇ ಬಸದಿರುವದು ವಿಷಾದನೀಯ. ಮಾತೃಭಾಷೆಯನ್ನು ನಾವೇ ಬಳಸುವಂತಾಗಬೇಕು. ಸಂಘ- ಸಂಸ್ಥೆಗಳು ಮಾಧ್ಯಮಗಳನ್ನು ಬಳಸಿಕೊಳ್ಳುವ ಕಡೆಗೆ ಗಮನ ಹರಿಸಬೇಕು. ಮಾಧ್ಯಮ ಮತ್ತು ಸಮಾಜದ ಬಾಂಧವ್ಯ ವೃದ್ಧಿಯಾಗ ಬೇಕು ಎಂದು ಹೇಳಿದರು.

ಮಾತೃಭಾಷೆ ಬಳಸಿ

ಇನ್ನೋರ್ವ ಮುಖ್ಯ ಅತಿಥಿ ವಿಜಯ ಕರ್ನಾಟಕ ಜಿಲ್ಲಾ ವರದಿಗಾರ ರಮೇಶ್ ಉತ್ತಪ್ಪ ಮಾತನಾಡಿ, ಮಾತೃಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಆದರೆ ನಾವು ಮಾತೃಭಾಷೆಯಿಂದ ದೂರಾಗುತ್ತಿದ್ದೇವೆ. ಇಂಗ್ಲೀಷ್ ವ್ಯಾಮೋಹ ಹೆಚ್ಚಾಗಿದೆ. ಮಕ್ಕಳು ಮಾತೃಭಾಷೆಯಿಂದ ದೂರಾಗಲು ಪೋಷಕರೇ ಕಾರಣರಾಗುತ್ತಿದ್ದಾರೆ ಎಂದು ವಿಷಾದಿಸಿದರು.

ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ

(ಮೊದಲ ಪುಟದಿಂದ) ಕೆ.ಬಿ. ಮಂಜುನಾಥ್ ಅರೆಭಾಷೆ ಬೆಳವಣಿಗೆಯಲ್ಲಿ ಮಾಧ್ಯಮಗಳ ಪಾತ್ರ ವಿಚಾರ ಮಂಡನೆ ಮಾಡಿ ಮಾತನಾಡಿ ದೇಶದಲ್ಲಿ 400 ಭಾಷೆಗಳು ಅಳಿವಿನ ಅಂಚಿನಲ್ಲಿದ್ದು, ಇದು ಎಚ್ಚರಿಕೆಯ ಗಂಟೆಯಾಗಿದೆ. ಭಾಷೆಯನ್ನು ಉಳಿಸುವಲ್ಲಿ ಮಾಧ್ಯಮಗಳ ಪಾತ್ರವೂ ಪ್ರಮುಖವಾಗಿದೆ. ಭಾವನೆಯನ್ನು ವ್ಯಕ್ತಪಡಿಸುವ ಸಾಧನ ಭಾಷೆ. ಭಾಷೆಯನ್ನು ದಾಖಲೀಕರಣ ಮಾಡುವ ಅಗತ್ಯವಿದೆ ಎಂದು ಹೇಳಿದರು.

ಉಪನ್ಯಾಸಕ ಪಟ್ಟಡ ಶಿವಕುಮಾರ್ ಆಡು ಭಾಷೆಯಲ್ಲಿ ಅರೆಭಾಷಾ ಸೊಗಡು ವಿಚಾರವನ್ನು ಮಂಡಿಸಿ ಮಾತನಾಡಿ, ಒಂದು ಭಾಷೆ ಉಳಿಯಬೇಕಾದರೆ, ಅದರ ಬಳಕೆ ಅಗತ್ಯ. ಆಗ ಭಾಷೆಯ ಬೆಳವಣಿಗೆ ಸಾಧ್ಯ. ಗ್ರಾಮೀಣ ಭಾಷೆಗಳ ಅನೇಕ ಪದಗಳು ಇಂದು ಮರೆಯಾಗುತ್ತಿದೆ. ಅರೆಭಾಷೆಗೆ ಸ್ವಂತಿಕೆ ಇದೆ ಎಂದ ಅವರು ಭಾಷೆ ಪ್ರಕೃತಿ, ಪರಿಸರ ಜೊತೆಗೆ ಮಿಳಿತವಾಗಿದೆ. ಪರಿಸರ ನಾಶವಾದಗ ಭಾಷೆಯು ಅವನತಿ ಹೊಂದುತ್ತದೆ ಎಂದು ಹೇಳಿದರು.

ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಮಾತನಾಡಿ, ಜನತೆ ಜಾತಿ, ಮತ, ಪಕ್ಷಬೇಧ ಮರೆತು ಅಕಾಡೆಮಿಯ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ. ಭಾಷಾ ಮಾಧ್ಯಮ ಒಂದು ಉತ್ತಮ ಕಾರ್ಯಕ್ರಮವಾಗಿದೆ ಎಂದು ಹೇಳಿದರು. ಇದೇ ಸಂದರ್ಭ ವೇದಿಕೆಯಲ್ಲಿದ್ದ ಗಣ್ಯರನ್ನು ಅಕಾಡೆಮಿ ಸದಸ್ಯರನ್ನು ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಶಾಲು ಹೊದಿಸಿ ಗೌರವಿಸಿದರು. ಅಕಾಡೆಮಿ ಅಧ್ಯಕ್ಷರನ್ನು ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರಸ್ ಕ್ಲಬ್ ವತಿಯಿಂದ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಅಕಾಡೆಮಿ ಸದಸ್ಯ ಮಂದ್ರಿರ ಮೋಹನ್ ದಾಸ್, ಡಾ. ಕೋರನ ಸರಸ್ವತಿ ಸೇರಿದಂತೆ ಅರೆಭಾಷೆ ಜನಾಂಗ ಬಾಂಧವರು ಹಾಗೂ ಇನ್ನಿತರರು ಇದ್ದರು. ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿ, ವಿ.ಡಿ. ಸಂಚನಾ ಪ್ರಾರ್ಥಿಸಿದರೆ, ಅಕಾಡೆಮಿ ಸದಸ್ಯ ಕುಡೆಕಲ್ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು. ಪ್ರೆಸ್‍ಕ್ಲಬ್ ಪ್ರಧಾನ ಕಾರ್ಯದರ್ಶಿ ಕೆ.ಬಿ. ಮಂಜುನಾಥ್ ವಂದಿಸಿದರು.