ಕುಶಾಲನಗರ, ಆ 13: ಕುಶಾಲನಗರದಲ್ಲಿ ನಡೆಯಲಿರುವ ಅಖಂಡ ಭಾರತ ಸಂಕಲ್ಪ ದಿನಾಚರಣೆ ಕಾರ್ಯಕ್ರಮ ಸಂದರ್ಭ ಪಂಜಿನ ಮೆರವಣಿಗೆಯನ್ನು ಶಾಂತಿಯುತವಾಗಿ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರಪ್ರಸಾದ್ ನಾಗರಿಕರಲ್ಲಿ ಮನವಿ ಮಾಡಿದ್ದಾರೆ.

ಕುಶಾಲನಗರ ಪೊಲೀಸ್ ವಿಶ್ರಾಂತಿಗೃಹ ಸಭಾಂಗಣದಲ್ಲಿ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿ, ಈ ಸಂದರ್ಭ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಸಂಘಟನೆಗಳ ಪ್ರಮುಖರು ಎಚ್ಚರವಹಿಸಬೇಕು. ಯಾವದೇ ಅಹಿತಕರ ಘಟನೆಗಳು ನಡೆಯದಂತೆ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಮೆರವಣಿಗೆ ಸಂದರ್ಭ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಬಾರದು. ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕೆಂದು ಸೂಚಿಸಿದರು.

ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆ ಸಂಚಾಲಕರಾದ ಮಂಜುನಾಥ್, ಮಸೀದಿ ಸಮಿತಿ ಅಧ್ಯಕ್ಷರಾದ ತನ್ವೀರ್, ಡಿವೈಎಸ್ಪಿ ಸಂಪತ್‍ಕುಮಾರ್, ವೃತ್ತ ನಿರೀಕ್ಷಕರಾದ ಕ್ಯಾತೆಗೌಡ, ಠಾಣಾಧಿಕಾರಿಗಳಾದ ಜಗದೀಶ್,ಮಹೇಶ್, ಜಯರಾಂ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಎಂ.ಚರಣ್, ಸದಸ್ಯರಾದ ಫಜಲುಲ್ಲಾ, ನಗರ ಬಿಜೆಪಿ ಅಧ್ಯಕ್ಷ ಕೆ.ಜಿ.ಮನು, ಹಿಂದೂಪರ ಸಂಘಟನೆಗಳ ಮತ್ತು ಮುಸ್ಲಿಂ, ಕ್ರೈಸ್ತ ಧರ್ಮದ ಪ್ರಮುಖರು ಇದ್ದರು.