ಮಡಿಕೇರಿ, ಆ. 13: ಭಾರತದ ಹಲವು ಭೂ ಭಾಗಗಳನ್ನು 1947ರಲ್ಲಿ ಸ್ವಾತಂತ್ರ್ಯ ದೊರೆತಾಗ ಕಳೆದು ಕೊಂಡಿದ್ದು, ಮತ್ತೆ ತುಂಡಾದ ಭಾರತವನ್ನು ಒಂದುಗೂಡಿಸುವ ಮೂಲಕ ಅಖಂಡ ಭಾರತವನ್ನು ನಿರ್ಮಿಸುವದರೊಂದಿಗೆ ದೇಶದ ಪರಮ ವೈಭವಕ್ಕೆ ದೇಶದ ಜನರೆಲ್ಲರೂ ಸಂಘಟಿತರಾಗಬೇಕಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತದ ಕಾರ್ಯಕಾರಿಕ್ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ಕರೆ ನೀಡಿದ್ದಾರೆ.

ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ಹಿಂದು ಜಾಗರಣಾ ವೇದಿಕೆಯ ಮಡಿಕೇರಿ ತಾಲೂಕು ಘಟಕದ ವತಿಯಿಂದ ನಡೆದ ಅಖಂಡ ಭಾರತ ಸಂಕಲ್ಪ ದಿನದ ದಿಕ್ಸೂಚಿ ಭಾಷಣ ಮಾಡಿದರು.

ಭಾರತ ದೇಶವು ಭೂತಾನ್, ನೇಪಾಳ, ಶ್ರೀಲಂಕಾ, ಬಾಂಗ್ಲಾ, ಪಾಕಿಸ್ತಾನ ಹೀಗೆ ಹಲವು ಭೂಭಾಗಗಳನ್ನು ಕಳೆದುಕೊಂಡಿದೆ. ದೇಶದ ಸ್ವಾಂತ್ರ್ಯಕ್ಕಾಗಿ ಹಲವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದು, ಅಂತಹ ಮಹನಿಯರನ್ನು ಸ್ಮರಣೆ ಮಾಡುವದು ನಮ್ಮೆಲ್ಲರ ಕರ್ತವ್ಯವಾಗಿದೆ. ಅಲ್ಲದೆ ನಾವು ಕಳೆದುಕೊಂಡ ಭೂಭಾಗಗಳನ್ನು ಮತ್ತೆ ಒಗ್ಗೂಡಿಸುವ ನಿಟ್ಟಿನಲ್ಲಿ ಹಿಂದು ಜಾಗರಣಾ ವೇದಿಕೆ ಅಖಂಡ ಭಾರತ ಸಂಕಲ್ಪ ದಿನ ಆಯೋಜನೆ ಮಾಡಿದೆ. ಅಖಂಡ ಭಾರತ ನಿರ್ಮಾಣ ಮಾಡುವ ಮೂಲಕ ಭಾರತ ಪರಮ ವೈಭವ ಸ್ಥಿತಿಗೆ ತರುವಂತಾಗಬೇಕು. ಹಿಂದೂ, ಮುಸಲ್ಮಾನರು, ಕ್ರೈಸ್ತರು ಒಟ್ಟಾಗಿ ಭಾರತವನ್ನು ರೂಪಿಸೋಣವೆಂದು ಹೇಳಿದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ನಿವೃತ್ತ ಮೇಜರ್ ಬಿದ್ದಂಡ ನಂಜಪ್ಪ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಸತ್ಸಂಗ ನಡೆಸುವ ಮೂಲಕ ಸಂಘಟಿತರಾಗಿರಬೇಕು. ದೇಶದ ಯೋಧರಿಗೆ ಇಂದು ಗೌರವ ದೊರೆಯುತ್ತಿದ್ದು, ಯೋಧನ ತಾಯಿಗೂ ಗೌರವ ದೊರೆಯುವಂತಾಗಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ವಿಶ್ವಾಮಿತ್ರ ಆಚಾರ್ಯ ಸ್ವಾಮೀಜಿ, ಹಿಂದು ಜಾಗರಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಸುಭಾಷ್, ಮಡಿಕೇರಿ ತಾಲೂಕು ಅಧ್ಯಕ್ಷ ಬಿ.ಸಿ. ಪೊನ್ನಪ್ಪ, ನಗರ ಅಧ್ಯಕ್ಷ ನಂದೀಶ್, ತಾಲೂಕು ಸಂಚಾಲಕ ಬಿ.ಬಿ. ಮಹೇಶ್ ಉಪಸ್ಥಿತರಿದ್ದರು. ರವಿ ಭೂತನಕಾಡು ಪ್ರಾರ್ಥಿಸಿ, ಅಜಿತ್ ಸ್ವಾಗತಿಸಿದರು.