ಗೋಣಿಕೊಪ್ಪಲು, ಆ.13: ದಕ್ಷಿಣ ಕೊಡಗಿನಾದ್ಯಂತ ಮುಂಗಾರು ಕೊರತೆ ಮುಂದುವರಿದಿದ್ದು, ಭತ್ತದ ಬಿತ್ತನೆ ಮಾಡಿದ ರೈತರು ನಾಟಿ ಕಾರ್ಯಕ್ಕೆ ಮಡಿಗಳಲ್ಲಿ ನೀರಿಲ್ಲದೆ ‘ತಲೆ ಮೇಲೆ ಕೈಹೊತ್ತು ಕೂರುವ’ ಪರಿಸ್ಥಿತಿ ಕಂಡು ಬಂದಿದೆ. ಹಲವು ರೈತರು ತಮ್ಮ ಕೆರೆಗಳಲ್ಲಿ ಸಂಗ್ರಹವಾಗಿದ್ದ ನೀರನ್ನು ಪಂಪ್‍ಸೆಟ್ ಮೂಲಕ ಮಡಿಗಳಿಗೆ ಹಾಯಿಸಿ ನಾಟಿ ಮಾಡುವದು ಕಂಡು ಬಂದಿದೆ. ಒಟ್ಟಿನಲ್ಲಿ ಭತ್ತ ಬೆಳೆಯುವ ರೈತ ಕಳೆದ ಎರಡು ವರ್ಷಗಳಿಂದ ವರುಣನ ಕ್ಷೀಣತೆಯಿಂದ ಮಾನಸಿಕವಾಗಿ ಕುಸಿದು ಹೋಗುವಂತಾಗಿದೆ.

ಭತ್ತದ ಉತ್ಪಾದನೆ ಉತ್ತೇಜನಕ್ಕೆ ಯಾಂತ್ರಿಕ ನಾಟಿ ಪದ್ಧತಿಯನ್ನು ಅಳವಡಿಸಿ, ಸಹಾಯಧನ ನೀಡುವ ಮೂಲಕ ರೈತರಲ್ಲಿ ಆಸಕ್ತಿ ಮೂಡಿಸಲು ಕೃಷಿ ಇಲಾಖೆ ಮುಂದಾಗಿದ್ದರೂ, ಮಳೆಯ ಕ್ಷಾಮ ಗದ್ದೆಗಳನ್ನು ಪಾಳುಬಿಡುವ ಸ್ಥಿತಿಯತ್ತ ಸಾಗಿದೆ. ವೀರಾಜಪೇಟೆ ತಾಲೂಕಿನಾದ್ಯಂತ ಸುಮಾರು 14,000 ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಭತ್ತದ ಉತ್ಪಾದನೆಯ ಗುರಿ ಹೊಂದಲಾಗಿತ್ತು. ಆದರೆ ಕೃಷಿ ಇಲಾಖೆಯ ಮೂಲಗಳ ಪ್ರಕಾರ ಶೇ.60 ರಷ್ಟು ನಾಟಿ ಕಾರ್ಯ ಪೂರ್ಣಗೊಂಡಿದ್ದು, ಆಗಸ್ಟ್ 15 ರ ನಂತರ ಯಾಂತ್ರಿಕ ನಾಟಿ ವ್ಯವಸಾಯ ಕಾರ್ಯ ಚುರುಕುಗೊಳ್ಳಲಿದೆ. ಮತ್ತೊಂದೆಡೆ ಬರಗಾಲ ಪೀಡಿತ ತಾಲೂಕಾಗಿ ವೀರಾಜಪೇಟೆ ಸತತ ದ್ವಿತೀಯ ವರ್ಷವೂ ಮುಂದುವರೆಯುವ ಸಾಧ್ಯತೆ ಕಂಡು ಬಂದಿದೆ.

ಜನ, ಜಾನುವಾರು, ವನ್ಯಪ್ರಾಣಿಗಳಿಗೂ ಭವಿಷ್ಯದಲ್ಲಿ ಕುಡಿಯುವ ನೀರಿನ ಅಭಾವ ಕಾಣಿಸಲಿದ್ದು ಜಿಲ್ಲಾಡಳಿತ ಈ ಬಗ್ಗೆ ಈಗಿನಿಂದಲೇ ಬರ ನಿರ್ವಹಣೆಗೆ ಸಜ್ಜಾಗಬೇಕಾದ ಅನಿವಾರ್ಯತೆ ಇದೆ. ಜುಲೈ ತಿಂಗಳ ತಾ.20 ರ ನಂತರ ವಾರ ಸುರಿದ ಮಳೆ ಹೊರತು ಪಡಿಸಿದರೆ ಎಲ್ಲಡೆಯೂ ಒಣ ಹವೆ ಮುಂದುವರಿದಿದೆ. ಇತ್ತ ಮೋಡ ಬಿತ್ತನೆ ಕಾರ್ಯವೂ ನಡೆಯದಿರುವದರಿಂದ ಭತ್ತದ ಮಡಿಗಳಲ್ಲಿಯೂ ನೀರಿನ ಅಭಾವ ಕಂಡು ಬಂದಿದ್ದು, ಕೊಯ್ಲು ಸಂದರ್ಭ, ಭತ್ತ ಮೊಳಕೆಯ ಸಂದರ್ಭ ರೈತರು ಉತ್ಪಾದನೆ ಕಾಯ್ದುಕೊಳ್ಳಲು ಹರಸಾಹಸ ಮಾಡಬೇಕಾಗಿದೆ.

ಬಾಳೆಲೆ ನಿಟ್ಟೂರು ವ್ಯಾಪ್ತಿಯಲ್ಲಿ ಈ ಬಾರಿ ಲಕ್ಷ್ಮಣ ತೀರ್ಥ ಪ್ರವಾಹ ಕಾಣಿಸಿಕೊಳ್ಳದಿದ್ದರೂ, ನದಿ ನೀರನ್ನೇ ಬಳಸಿ ಅಲ್ಲಿನ ರೈತಾಪಿ ವರ್ಗ ನಾಟಿ ಕಾರ್ಯ ಮಾಡಿದೆ. ನಿಟ್ಟೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪವನ್ ಅವರು ಕಳೆದ ಬಾರಿ ಭತ್ತದ ಉತ್ಪಾದನೆಯಲ್ಲಿ ತೀವ್ರ ನಷ್ಟ ಅನುಭವಿಸಿದ್ದರೂ, ಈ ಬಾರಿ ಮತ್ತೆ ಸುಮಾರು 35 ಎಕರೆ ಪ್ರದೇಶದಲ್ಲಿ ಭತ್ತದ ಕೃಷಿ ಮಾಡುತ್ತಿದ್ದಾರೆ. ಜನವರಿಯಿಂದ ಈವರೆಗೆ ಕೇವಲ 28 ಇಂಚು ಮಳೆ ನಿಟ್ಟೂರು ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಲಕ್ಷ್ಮಣ ತೀರ್ಥ ನದಿ ನೀರನ್ನೇ ಬಳಸಿ ನಾಟಿ ಕಾರ್ಯ ಮಾಡಿರುವದಾಗಿ ತಿಳಿಸಿದ್ದಾರೆ. ಅಜ್ಜಂದಿರ ಕಾಲದಿಂದಲೂ ನಿಟ್ಟೂರುವಿನಲ್ಲಿ ಅತ್ಯಧಿಕ ಭತ್ತ ಬೆಳೆಯುತ್ತಿದ್ದು, ಬಾಳೆಲೆ-ನಿಟ್ಟೂರನ್ನು ‘ಭತ್ತದ ಕಣಜ’ ಎಂದೇ ಕರೆಯಲಾಗುತ್ತಿತ್ತು. ಈ ಹಿಂದೆ ಲಕ್ಷ್ಮಣ ತೀರ್ಥ ಪ್ರವಾಹ ಇಳಿಮುಖಗೊಂಡ ನಂತರ ಇಲ್ಲಿ ನಾಟಿ ಮಾಡಲಾಗುತ್ತಿತ್ತು. ಆದರೆ, ಕಳೆದೆರಡು ವರ್ಷಗಳಿಂದ ಬರಗಾಲ ಪೀಡಿತ ಹೋಬಳಿಗಳಲ್ಲಿ ಬಾಳೆಲೆ ಗ್ರಾಮವೂ ಸೇರಿಕೊಂಡಿದೆ.

ಇಲ್ಲಿಗೆ ಸಮೀಪ ಕೈಕೇರಿ ಹಾಗೂ ಕಳತ್ಮಾಡು ಗ್ರಾಮಗಳಲ್ಲಿಯೂ ಅತ್ಯಧಿಕ ರೈತರು ಕೆರೆಯ ನೀರನ್ನು ಬಳಸಿ ಈ ಬಾರಿ ನಾಟಿ ಕಾರ್ಯ ಮುಗಿಸಿದ್ದಾರೆ. ಗೊಟ್ಟಡದ ಬಾಲಕೃಷ್ಣ ಅವರು ಹಲವಾರು ವರ್ಷಗಳಿಂದ ಸುಮಾರು 9 ಎಕರೆ ಪ್ರದೇಶದಲ್ಲಿ ಭತ್ತದ ಉತ್ಪಾದನೆ ಮಾಡುತ್ತಿದ್ದರಲ್ಲದೆ, ಸುಗ್ಗಿ ಹಬ್ಬ ಹುತ್ತರಿಯನ್ನೂ ಹಲವು ಗ್ರಾಮಸ್ಥರನ್ನು ಒಗ್ಗೂಡಿಸಿ ಅದ್ಧೂರಿಯಾಗಿ ನಡೆಸುತ್ತಾ ಬಂದಿದ್ದರು.(ಮೊದಲ ಪುಟದಿಂದ) ಈ ಬಾರಿ ಕೇವಲ ಮೂರು ಎಕರೆಯಲ್ಲಿ ಇಂಟಾನ್ ಭತ್ತದ ಉತ್ಪಾದನೆ ತೆಗೆಯುವ ನಿಟ್ಟಿನಲ್ಲಿ ತಮ್ಮ ಕೆರೆಯ ನೀರನ್ನು ಪಂಪ್‍ಸೆಟ್‍ಗಳ ಮೂಲಕ ಮಡಿಗಳಿಗೆ ಹಾಯಿಸಿ ನಾಟಿ ಕಾರ್ಯ ಮುಗಿಸಿದ್ದಾರೆ. ಇದೇ ಗದ್ದೆಯಲ್ಲಿ ಎರಡು ವರ್ಷದ ಹಿಂದೆ ಜಿಲ್ಲಾ ಪತ್ರಕರ್ತರ ಕೆಸರು ಗದ್ದೆ ಕ್ರೀಡಾಕೂಟ ವನ್ನು ಯಶಸ್ವಿಯಾಗಿ ಆಯೋಜಿಸ ಲಾಗಿತ್ತು. ಈ ಬಾರಿ ತಮ್ಮ ಕಾರ್ಮಿಕರಿಗಾಗಿ ಮಾತ್ರ ಕ್ರೀಡಾ ಕೂಟವನ್ನು ಆಯೋಜಿಸಿದ್ದಾಗಿ ತಿಳಿಸಿದ್ದಾರೆ.

ಕೈಕೇರಿ ನಿವಾಸಿ ಜಮ್ಮಡ ವಿನೋದ್ ಅವರು ವರ್ಷಂಪ್ರತಿ ಸುಮಾರು 15 ಎಕರೆ ಪ್ರದೇಶದಲ್ಲಿ ಭತ್ತದ ಉತ್ಪಾದನೆ ಮಾಡುತ್ತಿದ್ದು ಈ ಬಾರಿ ತಮ್ಮ 15 ಎಕರೆಯಲ್ಲಿ ದೊಡ್ಡಿ ಭತ್ತ ಮತ್ತು ‘ಗಮನ ಸಣ್ಣ’ ಭತ್ತದ ಬಿತ್ತನೆ ಮೂಲಕ ಕೆರೆಯ ನೀರನ್ನು ಬಳಸಿ ನಾಟಿ ಕಾರ್ಯ ಪೂರೈಸಿ ರುವದಾಗಿ ಮಾಹಿತಿ ನೀಡಿದ್ದಾರೆ.

ದಕ್ಷಿಣ ಕೊಡಗಿನ ಕೆರೆ, ತೋಡು, ನದಿಗಳಲ್ಲಿ ಪ್ರವಾಹದ ಸ್ಥಿತಿ ಕಂಡು ಬಂದಿಲ್ಲ.ಬಿರುನಾಣಿ, ಬಿ.ಶೆಟ್ಟಿಗೇರಿ ಬೃಹ್ಮಗಿರಿ ಅಭಯಾರಣ್ಯದ ಸರಹದ್ದಿನಲ್ಲಿ ಸುಮಾರು 80 ರಿಂದ 90 ಇಂಚು ಮಳೆ ದಾಖಲಾಗಿದ್ದು ‘ಜಲ’ಹುಟ್ಟಿದೆ ಎನ್ನಲಾಗುತ್ತಿದೆ. ಅಲ್ಲಿನ ಭತ್ತದ ಮಡಿಗಳಲ್ಲಿ ನೈಸರ್ಗಿಕ ನೀರಿನಿಂದಲೇ ನಾಟಿ ಕಾರ್ಯ ಮಾಡಲಾಗಿದೆ. ಬಿರುನಾಣಿ ಸಮೀಪ ಪೆÇರಾಡ್, ಬಾಡಗರಕೇರಿ, ಬೀರುಗ, ಶ್ರೀಮಂಗಲ ವ್ಯಾಪ್ತಿಯಲ್ಲಿ ಸುಮಾರು 56 ರಿಂದ 65 ಇಂಚುಗಳವರೆಗೆ ಮಳೆ ದಾಖಲಾಗಿದ್ದು ಜಲ ಇನ್ನು ಹುಟ್ಟದಿರುವದರಿಂದ ಭವಿಷ್ಯದಲ್ಲಿ ಅಂತರ್‍ಜಲ ಮಟ್ಟ ಕುಸಿಯಲಿದೆ ಎಂದು ಅಲ್ಲಿನ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಮಾಕುಟ್ಟದಲ್ಲಿ ಮಳೆ ಕೊರತೆ

ದಕ್ಷಿಣ ಕೊಡಗು-ಕೇರಳ ಗಡಿಪ್ರದೇಶ ಮಾಕುಟ್ಟ ಶ್ರೀಮಂತ ಅರಣ್ಯ ಪ್ರದೇಶವನ್ನು ಹೊಂದಿದ್ದು ಈ ಬಾರಿ ಕಳೆದ ಸಾಲಿಗಿಂತಲೂ 5 ಇಂಚು ಮಳೆಕೊರತೆ ಕಂಡು ಬಂದಿದೆ. ಈವರೆಗೆ ಮಾಕುಟ್ಟ ವ್ಯಾಪ್ತಿಯಲ್ಲಿ ಒಟ್ಟು 82 ಇಂಚು ಮಳೆ ದಾಖಲಾಗಿದ್ದರೆ, ಕಳೆದ ವರ್ಷ ಇದೇ ಅವಧಿಗೆ ಸುಮಾರು 87 ಇಂಚು ಮಳೆ ದಾಖಲಾಗಿತ್ತು. ಬಿ.ಶೆಟ್ಟಿಗೇರಿ ವ್ಯಾಪ್ತಿಯಲ್ಲಿ ಈವರೆಗೆ 82 ಇಂಚು ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಗೆ 73 ಇಂಚು ಮಳೆಯಾಗಿದ್ದು ಮಳೆಯ ಪ್ರಮಾಣದಲ್ಲಿ ಕೊಂಚ ಏರು ಮುಖ ಕಂಡಿದೆ. ಇನ್ನು ಗೋಣಿಕೊಪ್ಪಲು ನಗರ ವ್ಯಾಪ್ತಿಯಲ್ಲಿ ಕಳೆದ ವರ್ಷ ಆಗಸ್ಟ್‍ವರೆಗೆ ಸುಮಾರು 32.61 ಇಂಚು ಮಳೆ ದಾಖಲಾಗಿದ್ದರೆ, ಈ ಬಾರಿ 41.41 ಇಂಚು ಮಳೆಯಾಗಿ ಸುಮಾರು 9 ಇಂಚು ಅಧಿಕ ಗೊಂಡಂತಾಗಿದೆ. ಕುಟ್ಟ, ತಿತಿಮತಿ, ಪಾಲಿಬೆಟ್ಟ, ಬಾಳೆಲೆ, ರಾಜಾಪುರ, ನಾಲ್ಕೇರಿ, ಹಾತೂರು ವ್ಯಾಪ್ತಿಯಲ್ಲಿ ಮಳೆಯ ಅಭಾವ ರೈತರನ್ನು ಕಂಗಾಲು ಮಾಡಿದೆ.

ಹೊಸೂರು ಗ್ರಾಮ ಪಂಚಾಯಿತಿ, ಅಮ್ಮತ್ತಿ, ಆನಂದಪುರ, ಬೈರಂಬಾಡ, ಗುಹ್ಯ, ಪಾಲಿಬೆಟ್ಟದ ಹಲವೆಡೆ ಆನೆ ಉಪಟಳ ಅಧಿಕ ಇರುವ ಕಡೆಗಳಲ್ಲಿ ರೈತರು ಭತ್ತದ ಕೃಷಿಯನ್ನೇ ಕೈಬಿಟ್ಟಿರುವದು ಕಂಡು ಬಂದಿದೆ.

ಕಾಫಿ ತೋಟಕ್ಕೆ ನುಸುಳುವ ಕಾಡಾನೆ ಹಿಂಡುಗಳನ್ನು ಮರಳಿ ಕಾಡಿಗಟ್ಟುವ ಕಾರ್ಯಾಚರಣೆ ಸಂದರ್ಭ ಪಟಾಕಿ ಸಿಡಿತ ಹಾಗೂ ಬೆದರು ಗುಂಡುಗಳ ಶಬ್ಧದಿಂದ ಬೆದರಿದ ಕಾಡಾನೆಗಳು ಕಾಫಿ ಫಸಲು ನಷ್ಟಕ್ಕೂ ಕಾರಣವಾಗಿದೆ. ಬಾಳೆಯ ಕೃಷಿ ನೆಲಕಚ್ಚಿದೆ. ಅಡಿಕೆ, ತೆಂಗು ಧ್ವಂಸಗೊಳಿಸುವ ಆನೆಗಳು ಭತ್ತದ ಗದ್ದೆಗೆ ನುಸುಳಿ ಪೈರನ್ನು ಅಲ್ಲಲ್ಲಿ ತಿನ್ನುತ್ತಿರುವದು ಈ ವ್ಯಾಪ್ತಿಯ ಕೃಷಿಕರ ನಿದ್ದೆ ಗೆಡಿಸಿದೆ. ಅರಣ್ಯ ಇಲಾಖೆಯು ಪರಿಹಾರ ನೀಡುವಲ್ಲಿ ವಿಳಂಬ ಹಾಗೂ ಪರಿಹಾರ ಹೆಚ್ಚಳ ಮಾಡದಿರುವ ಕಾರಣ ರೈತರು ತಮ್ಮ ತಾಳ್ಮೆಯನ್ನೂ ಕಳೆದುಕೊಂಡು ದಿನನಿತ್ಯ ಅರಣ್ಯ ಇಲಾಖೆಯೊಂದಿಗೆ ಅಸಮಾಧಾನ ವ್ಯಕ್ತಪಡಿಸುವದು ಕಂಡು ಬರುತ್ತಿದೆ.

ಕೊಡಗಿನ ಸಾಂಪ್ರದಾಯಿಕ ಭತ್ತದ ಮಡಿಗಳು ಇಂಗುಗುಂಡಿಗಳಂತೆ ಮಳೆಗಾಲದಲ್ಲಿ ಕಾರ್ಯ ನಿರ್ವಹಿಸುವದರಿಂದ ಬೇಸಿಗೆಯಲ್ಲಿ ಕೆರೆ ಹಾಗೂ ತೆರೆದ ಬಾವಿಗಳಲ್ಲಿ ಸಾಕಷ್ಟು ನೀರು ಲಭ್ಯತೆ ಇತ್ತು. ಇದೀಗ ಮಳೆಗಾಲದ ಜೂನ್, ಜುಲೈ, ಆಗಸ್ಟ್ ತಿಂಗಳು ಮೋಡವಿದ್ದರೂ ಮಳೆಯಾಗದೆ, ಬಿರುಗಾಳಿಯ ಯಾವದೇ ಮುನ್ಸೂಚನೆ ಇಲ್ಲದೆ ಬೇಸಿಗೆಯ ಧಗೆಯ ವಾತಾವರಣ ಅಲ್ಲಲ್ಲಿ ಸೃಷ್ಟಿಯಾಗಿದೆ.

ಈ ಭಾಗದಲ್ಲಿ ಲಕ್ಷ್ಮಣ ತೀರ್ಥ, ರಾಮತೀರ್ಥ, ಕಾವೇರಿ ನದಿಗಿಂತಲೂ ಅಧಿಕ ನೀರು ಬಿರುನಾಣಿ ಮಾರ್ಗದಲ್ಲಿ ಹರಿದು ಬರುವ ಬರಪೆÇಳೆ, ಕಕ್ಕೆಟ್ಟು, ಕೊಂಗಣ ಹೊಳೆಗಳಲ್ಲಿ ವರ್ಷಂಪ್ರತಿ ಕಂಡು ಬಂದಿದ್ದು, ಕೂಟುಹೊಳೆ ಇರಿಟ್ಟಿಯತ್ತ ನೀಲಂಪೆÇಳೆಯಾಗಿ ಹರಿದುಹೋಗುವದರಿಂದ ಕೊಡಗಿನ ರೈತರಿಗೆ ಏನೂ ಪ್ರಯೋಜನವಿಲ್ಲದಂತಾಗಿದೆ. ಈ ಜಲಮೂಲಗಳಿಂದ ಸುಮಾರು 20 ಗ್ರಾ.ಪಂ.ಗಳಿಗೆ ಶಾಶ್ವತ ಕುಡಿಯುವ ನೀರು ಯೋಜನೆಗೆ ಬಳಸಿಕೊಳ್ಳಲು ಸಾಧ್ಯವಿದ್ದಾಗ್ಯೂ; ರಾಜ್ಯ ಸರ್ಕಾರ ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷ್ಯವಹಿಸಿರುವ ಆರೋಪವಿದೆ. ದಕ್ಷಿಣ ಕೊಡಗಿನ ಜನತೆ ಕುಡಿಯುವ ನೀರಿನ ತೀವ್ರ ಬವಣೆಯನ್ನು ಭವಿಷ್ಯದಲ್ಲಿ ಎದುರಿಸುವ ಸಾಧ್ಯತೆ ಇದೆ.

ತಾಲೂಕಿನ ಬಹುತೇಕ ಕಡೆಗಳಲ್ಲಿ ರೈತರು ಕೆರೆಯ ಮೂಲಕ ನೀರು ಹಾಯಿಸಿ ಭತ್ತದ ನಾಟಿ ಕಾರ್ಯವನ್ನು ಪ್ರಯಾಸದಿಂದ ಮುಗಿಸಿದ್ದು, ಭತ್ತ ಕದಿರು ಕಟ್ಟುವ ಸಂದರ್ಭ ಹಿಂಗಾರು ಮಳೆಯಾದರೂ ರಕ್ಷಣೆ ನೀಡಲಿ ಎಂದು ಆಶಾಭಾವನೆ ಇಟ್ಟುಕೊಂಡಿದ್ದಾರೆ.