ಸುಂಟಿಕೊಪ್ಪ, ಆ.13: ಸುಂಟಿಕೊಪ್ಪ ಪಟ್ಟಣಕ್ಕೆ ಅಗತ್ಯವಾಗಿ ಬೇಕಾದ ಹೈಟಕ್ ಮಾರುಕಟ್ಟೆ ಪ್ರತ್ಯೇಕ ಬಸ್ ನಿಲ್ದಾಣ, ವಾಹನ ಹಾಗೂ ಆಟೋರಿಕ್ಷಾ ನಿಲುಗಡೆಗೆ ಜಾಗದ ಅವಶ್ಯಕತೆಯಿದ್ದು, ಮೂಲ ಸೌಕರ್ಯವಿಲ್ಲದೆ ನಲುಗುತ್ತಿದೆ. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂದಾಜು 13,000 ಜನಸಂಖ್ಯೆ ಹೊಂದಿದ್ದು ಹೋಬಳಿ ವ್ಯಾಪ್ತಿಗೆ ಒಳಪಟ್ಟ 10 ಗ್ರಾಮ ಪಂಚಾಯಿತಿಯ ಜನತೆ ಸುಂಟಿಕೊಪ್ಪ ಕೇಂದ್ರವನ್ನೇ ಅವಲಂಭಿಸಿದ್ದಾರೆ. ಈ ಹಿನ್ನಲೆಯಲ್ಲಿ ಬೆಳೆಯುತ್ತಿರುವ ಪಟ್ಟಣಕ್ಕೆ ಸೂಕ್ತ ಬಸ್ ನಿಲ್ದಾಣದ ಅವಶ್ಯಕತೆ ಕಂಡು ಬಂದಿದೆ. ಹೋಬಳಿ ವ್ಯಾಪ್ತಿಯ ಗ್ರಾಮಗಳಿಂದ ಬರುವ ನೂರಾರೂ ಜನತೆ ಸುಂಟಿಕೊಪ್ಪ ಮೂಲಕವೇ ಸಂಪರ್ಕವನ್ನು ಪಡೆದುಕೊಳ್ಳ ಬೇಕಾಗಿದ್ದು, ಶಿಕ್ಷಣಕ್ಕಾಗಿ ಆಗಮಿಸುವ ವಿದ್ಯಾರ್ಥಿಗಳು, ಪರ ಊರುಗಳಿಗೆ ತೆರಳುವ ಆಗಮಿಸುವ ಸಾರ್ವಜನಿಕರು ವಾಣಿಜ್ಯ ಮಳಿಗೆಗಳ ಮುಂದೆ ಬಸ್ ಹತ್ತುವ ಪರಿಸ್ಥತಿ ಎದುರಾಗಿದೆ. ಇದರಿಂದ ಸುಂಟಿಕೊಪ್ಪಕ್ಕೆ ಸುಸ್ಸಜಿತ ಬಸ್ ನಿಲ್ದಾಣ ಮುಖ್ಯವಾಗಿದೆ. ಓಬಿರಾಯನ ಕಾಲದ ಮಾರುಕಟ್ಟೆ ಇಂದೋ ನಾಳೆಯೋ ಮುರಿದು ಬೀಳಲಿದೆ. ಕೊಡಗಿನ ಬಹುತೇಕ ಪ್ರಮುಖ ಪಟ್ಟಣಗಳಲ್ಲಿ ಹೈಟೆಕ್ ಮಾರುಕಟ್ಟೆ ಬಸ್ ನಿಲ್ದಾಣ ನಿರ್ಮಾಣ ವಾಗಿದೆ. ಆದರೆ ಸುಂಟಿಕೊಪ್ಪ ಪಟ್ಟಣಕ್ಕೆ ಮಾತ್ರ ಈ ಭಾಗ್ಯ ಲಭ್ಯವಾಗಿಲ್ಲ.

ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹಲವಾರು ವರ್ಷಗಳಿಂದ ನಿವೇಶನಕ್ಕಾಗಿ ಹುಡುಕಾಟ ಮಾಡಿದರೂ ಇಂದಿಗೂ ಸಫಲವಾಗಲಿಲ್ಲ. ಶಾಸಕ ಅಪ್ಪಚ್ಚು ರಂಜನ್ ಸುಂಟಿಕೊಪ್ಪದಲ್ಲಿ ನಡೆಯುವ ಹಲವು ಸಭೆ ಸಮಾರಂಭ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಲ್ಲಿ ಜಾಗವನ್ನು ಗುರುತಿಸಿಕೊಟ್ಟರೆ ನೂತನ ಬಸ್ ನಿಲ್ದಾಣ ಹಾಗೂ ಹೈಟೆಕ್ ಮಾರುಕಟ್ಟೆ ನಿರ್ಮಿಸಲು ಅನುದಾನ ನೀಡುವದಾಗಿ ಭರವಸೆ ಹಾಗೂ ಇಚ್ಛಾಶಕ್ತಿಯನ್ನು ವ್ಯಕ್ತಪಡಿಸಿದ್ದಾರೆ.

ಸೋಮವಾರಪೇಟೆ ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ಸುಂಟಿಕೊಪ್ಪದಲ್ಲಿ ಕಂದಾಯ ಇಲಾಖೆ, ಪೊಲೀಸ್ ಠಾಣೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಚೆಸ್ಕಾಂ, ಕೃಷಿ ಇಲಾಖೆ, ಸರಕಾರಿ ಪದವಿ ಪೂರ್ವ ಕಾಲೇಜು, ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ, ಸರಕಾರಿ ಪ್ರೌಢಶಾಲೆ, ಸಂತಮೇರಿ ಆಂಗ್ಲ ಮಾಧ್ಯಮ ಶಾಲೆ, ಸಂತ ಅಂತೋಣಿ ಹಿರಿಯ ಪ್ರಾಥಮಿಕಶಾಲೆ ಗದ್ದೆಹಳ್ಳದ ಸರಕಾರಿ ಪ್ರಾಥಮಿಕ ಶಾಲೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ ವಾಣಿಜ್ಯ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿದೆ.

ಸುಂಟಿಕೊಪ್ಪ ಪಟ್ಟಣದ ನಡುವೆಯೇ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು ನಿತ್ಯ ಸಣ್ಣ ಹಾಗೂ ಭಾರೀ ನೂರಾರು ವಾಹನಗಳ ಸಂಚಾರ ಅದರೊಂದಿಗೆ ಜಿಲ್ಲೆಯ ಪ್ರವಾಸಿ ಕೇಂದ್ರಗಳಿಗೆ ಆಗಮಿಸುವ ಪ್ರವಾಸಿಗರು ಸಹ ಈ ಹೆದ್ದಾರಿಯ ಮೂಲಕವೇ ಸಂಚರಿಸುವದರಿಂದ ನಿತ್ಯವು ವಾಹನ ದಟ್ಟನೆಯಿಂದಲೇ ಕೂಡಿರುತ್ತದೆ.

ಸುಂಟಿಕೊಪ್ಪ ಹೋಬಳಿ ಕೇಂದ್ರದ ಸುತ್ತಮುತ್ತಲು ಹೆಚ್ಚಾಗಿ ಕಾಫಿ ತೋಟಗಳಿದ್ದು ಗ್ರಾಮಗಳ ಕಾರ್ಮಿಕರು ರೈತರು ಸಂತೆ ದಿನವಾದ ಭಾನುವಾರ ಸುಂಟಿಕೊಪ್ಪಕ್ಕೆ ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ.

(ಮೊದಲ ಪುಟದಿಂದ)

ಓಬಿರಾಯನ ಕಾಲದ ಮಾರುಕಟ್ಟೆ: ಸುಂಟಿಕೊಪ್ಪ ಪಟ್ಟಣದ ಮಧ್ಯೆ ರಾಷ್ಟ್ರಿಯ ಹೆದ್ದಾರಿಯು ಹಾದು ಹೋಗಿದ್ದು ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಕಚೇರಿಯ ಹಿಂಭಾಗದಲ್ಲಿ ಓಬಿರಾಯನ ಕಾಲದ ಮಾರುಕಟ್ಟೆ ಸಂತೆಗೆ ಬರುವ ಗ್ರಾಹಕರನ್ನು ಕೈಬೀಸಿ ಕರೆಯುತ್ತದೆ. ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಪ್ಲಾಸ್ಟಿಕ್ ತಾಟುಗಳನ್ನು ಕಟ್ಟಿ ಬೇಸಿಗೆ, ಮಳೆಗಾಲದಲ್ಲಿ ವ್ಯಾಪಾರ ವಹಿವಾಟು ನಡೆಸಬೇಕಾಗುತ್ತದೆ. ದಿನಸಿ ಅಕ್ಕಿ, ತೆಂಗಿನಕಾಯಿ, ಬೆಲ್ಲ, ಬಟ್ಟೆ ವ್ಯಾಪಾರಸ್ಥರು ಮಾರುಕಟ್ಟೆಯ ಶಿಥಿಲಾವಸ್ಥೆಯ ಕಟ್ಟಡದಲ್ಲಿ ವ್ಯಾಪಾರ ಮಾಡಬೇಕಾಗುತ್ತದೆ. ಮಳೆಗಾಲದಲ್ಲಿ ವ್ಯಾಪಾರಸ್ಥರ ಸಾಮಾಗ್ರಿಗಳಿಗೆ ಮಳೆಯ ಸಿಂಚನವಾದುದೂ ಇದೆ. ಕೊಡಗಿನ ಪ್ರಮುಖ ಪಟ್ಟಣದಲ್ಲಿ ಹೈಟಕ್ ಮಾರುಕಟ್ಟೆ ನಿರ್ಮಾಣವಾಗಿದ್ದು, ಇಲ್ಲಿಯೂ ನಿರ್ಮಾಣವಾಗುವ ಅಗತ್ಯತೆ ಇದೆ.

ಇಕ್ಕಟ್ಟಿನ ಬಸ್ ನಿಲ್ದಾಣ: ರಾಷ್ಟ್ರೀಯ ಹೆದ್ದಾರಿ ಬಳಿ ಮಲೆನಾಡು ಅಭಿವೃದ್ಧಿ ನಿಧಿಯಿಂದ ಶಾಸಕರ ಪ್ರಯತ್ನದಿಂದ ಲಭಿಸಿದ ಅಲ್ಪ ಜಾಗದಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಇದು ಬಸ್ ನಿಲ್ದಾಣಕ್ಕೆ ಸೂಕ್ತ ಜಾಗವಾಗಿಲ್ಲ. ಬೆಂಗಳೂರು ಮತ್ತು ಮಂಗಳೂರು ಕಡೆಯಿಂದ ಬಸ್ 5 ನಿಮಿಷಕ್ಕೊಮ್ಮೆ ಬಂದು ಸೇರುತ್ತಿದ್ದು ಹೆದ್ದಾರಿ ಬದಿಯಲ್ಲಿಯೇ ನಿಲ್ಲಿಸಲಾಗುತ್ತಿದೆ. ಪ್ರಯಾಣಿಕರು ಹತ್ತುವ ಇಳಿಯುವ ಸಂದರ್ಭ ಇತರೆ ವಾಹನ ಈ ಬಸ್ ನಿಲ್ದಾಣಕ್ಕಾಗಿ ಮುಂದೆ ಸಾಗಲು ಪ್ರಯಾಸ ಪಡುವಂತಾಗಿದೆ. ಸುಸಜ್ಜಿತ ಬಸ್ ನಿಲ್ದಾಣ ಆಗಬೇಕಾಗಿದ್ದು ನಿವೇಶನ ಹುಡುಕಾಟದಲ್ಲಿ ಸಂಬಂಧಿಸಿದವರು ಮುಂದಾಗಿದ್ದಾರೆ.

ಸುಂಟಿಕೊಪ್ಪ ಪಟ್ಟಣದಲ್ಲಿ ವಾಹನ ನಿಲುಗಡೆಗೆ ಆಟೋರಿಕ್ಷಾ ನಿಲ್ದಾಣಕ್ಕೆ ಜಾಗದ ಅವಶ್ಯಕತೆ ಇದೆ. ಸಂತೆ ದಿನ ವಾಹನ ನಿಲುಗಡೆಗೆ ತೊಂದರೆಯಾಗುತ್ತಿದ್ದು ಟ್ರಾಫಿಕ್ ಜಾಮ್ ಆಗುವದು ಮಾಮೂಲಿ ಯಾಗಿದೆ.

ಜಿಲ್ಲಾಧಿಕಾರಿಗಳ ಭೇಟಿ: ಇತ್ತೀಚೆಗೆ ಸುಂಟಿಕೊಪ್ಪಕ್ಕೆ ಜಿಲ್ಲಾಧಿಕಾರಿಗಳಾದ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಭೇಟಿ ನೀಡಿದ್ದು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಪಿಡಿಓ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದಲ್ಲದೆ ಸುಂಟಿಕೊಪ್ಪಕ್ಕೆ ನೂತನ ಬಸ್ ನಿಲ್ದಾಣ ಹಾಗೂ ಮಾರುಕಟ್ಟೆ ನಿರ್ಮಿಸಲು ಪೈಸಾರಿ ಜಾಗ ಗುರುತಿಸಿ ಅದನ್ನು ಪಂಚಾಯಿತಿ ಖಾತೆಗೆ ದಾಖಲಿಸಲು ಕ್ಷೀಪ್ರಗತಿಯಲ್ಲಿ ಕಾರ್ಯೋನ್ಮುಖರಾಗಬೇಕು. ಸಾಧ್ಯವಾದರೆ ಈಗಿನ ಮಾರುಕಟ್ಟೆಯ ಜಾಗವನ್ನು ಬಸ್ ನಿಲ್ದಾಣಕ್ಕೆ ಬಳಸಲು ಕ್ರಮಕೈಗೊಳ್ಳಬೇಕು. ಹಾಗೆಯೇ ವಾಹನ ಹಾಗೂ ರಿಕ್ಷಾ ನಿಲುಗಡೆಗೆ ಜಾಗ ಗುರುತಿಸಬೇಕೆಂದು ಆದೇಶ ನೀಡಿದ್ದರು.

ಈಗಿನ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಹಿಂದಿನ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸಹ ಬಸ್ ನಿಲ್ದಾಣ, ಮಾರುಕಟ್ಟೆ ಹಾಗೂ ವಾಹನ ನಿಲುಗಡೆಗೆ ಜಾಗ ಗುರುತಿಸಲು ಪ್ರಯತ್ನ ನಡೆಸಿದರೂ ಅದು ಕೈಗೂಡಲಿಲ್ಲ.

ಶಾಸಕ ಅಪ್ಪಚ್ಚು ರಂಜನ್ ಜಾಗ ಕಲ್ಪಿಸಿದರೆ ಮಾರುಕಟ್ಟೆ, ಬಸ್ ನಿಲ್ದಾಣಕ್ಕೆ, ಅನುದಾನ ಒದಗಿಸಿಕೊಡುವ ಭರವಸೆಯನ್ನು ಹಲವಾರು ಸಂದರ್ಭದಲ್ಲಿ ಹೇಳಿದ್ದಾರೆ.

ಒಟ್ಟಾರೆ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಸಾರ್ವಜನಿಕರು ಶ್ರಮಿಸಿದರೆ ಬಹುದಿನದ ಬೇಡಿಕೆ ಈಡೇರಿಸಬಹುದು, ದಿನದಿಂದ ದಿನಕ್ಕೆ ಜನಸಂಖ್ಯೆಯೂ ಹೆಚ್ಚಾಗುತ್ತಿರುವ ಸುಂಟಿಕೊಪ್ಪಕ್ಕೆ ಅಗತ್ಯ ಸೌಲಭ್ಯ ದೊರಬೇಕಾಗಿದೆ.