ಪೆರಾಜೆ, ಆ. 13: ಮಡಿಕೇರಿಯಿಂದ ಕರಿಕೆ ಮಾರ್ಗವಾಗಿ ಕೇರಳದ ಪಾಣತ್ತೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಪ್ರಕ್ರಿಯೆ ಜಾರಿಯಲ್ಲಿದ್ದು, ಟೆಂಡರ್‍ಗೆ ಮುನ್ನ ಸರ್ವೆ ಕಾರ್ಯಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದರು. ಮಡಿಕೇರಿ ತಾಲೂಕಿಗೊಳಪಟ್ಟ ಪೆರಾಜೆ ಗ್ರಾಮ ಪಂಚಾಯತ್‍ನಲ್ಲಿ ಒಟ್ಟು 3 ಕೋಟಿ ರೂ. ಗಳಿಗೂ ಅಧಿಕ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಭೂಮಿ ಪೂಜೆ ಪ್ರಯುಕ್ತ ಪೆರಾಜೆ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ಜರುಗಿದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಸ್ತೂರಿ ರಂಗನ್ ಇಲ್ಲ

ಯಾವದೇ ಕಾರಣಕ್ಕೂ ಕಸ್ತೂರಿ ರಂಗನ್ ವರದಿಯ ಯೋಜನೆ ಅನುಷ್ಠಾನಕ್ಕೆ ಬಿಡುವದಿಲ್ಲ. ಈ ಬಗ್ಗೆ ಸರಕಾರದ ಮೇಲೆ ತಾನು ಸಾಕಷ್ಟು ಒತ್ತಡ ಹೇರುವ ಕಾರ್ಯ ಮಾಡಿದ್ದೇನೆ, ಜನತೆ ಚಿಂತಿತರಾಗಬೇಕಾಗಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಿ.ಎಸ್.ಟಿ. ದೇಶದ ಮಹತ್ತರ ಬದಲಾವಣೆ. ಪ್ರಧಾನಿ ಮೋದಿ ನೇತೃತ್ವದ ಸರಕಾರ ಜನಪರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಮೇಕ್ ಇನ್ ಇಂಡಿಯಾ ಯೋಜನೆ ನೆರೆಯ ಶತ್ರು ರಾಷ್ಟ್ರ ಚೀನಕ್ಕೆ ಬಲವಾದ ಆರ್ಥಿಕ ಹೊಡೆತ ನೀಡುತ್ತಿದೆ. ಇದೇ ಇಂದಿನ ಚೀನಾದ ಉಪಟಳ ನೀಡುವ ಪರಿಸ್ಥಿತಿಗೆ ಕಾರಣವಾಗಿದೆ. ನಾವು ನಮ್ಮ ದೇಶದ ಅಭಿವೃದ್ಧಿಗಾಗಿ ಏಕತೆಯಿಂದ ಮುನ್ನಡೆದರೆ ಯಾವದೇ ರಾಷ್ಟ್ರಗಳು ನಮ್ಮನ್ನು ಎದುರಿಸಲಾರವು ಎಂದರು.

ಕಳಪೆಯಾಗದಂತೆ ಎಚ್ಚರಿಕೆ ವಹಿಸಿ

ತಾನು ಶಾಸಕನಾದ ಕೂಡಲೇ ಇದೇ ಪೆರಾಜೆ ಗ್ರಾಮದಿಂದ ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸಿದ್ದೆ. ಪೆರಾಜೆ ಗ್ರಾ.ಪಂ.ನಲ್ಲಿ ಸತತ 25 ವರ್ಷಗಳಿಂದ ಬಿಜೆಪಿ ನೇತೃತ್ವದ ಆಡಳಿತವಿದೆ ಎಂದು ಸಂತೋಷ ಹಂಚಿಕೊಂಡರು.