ಕೂಡಿಗೆ, ಆ. 13: ಕ್ರೀಡೆಯಿಂದ ಶಿಸ್ತು, ದೈಹಿಕ ಮತ್ತು ಮಾನಸಿಕ ಸದೃಢತೆಯ ಜೊತೆಗೆ ಉತ್ತಮ ಆರೋಗ್ಯವನ್ನೂ ಪಡೆಯಬಹುದು ಹಾಗೂ ವಿದ್ಯಾರ್ಥಿ ಜೀವನಕ್ಕೆ ತಮ್ಮ ವ್ಯಾಸಂಗದಲ್ಲಿ ಏಕಾಗ್ರತೆಯನ್ನು ಪಡೆಯಲು ಸಾಧ್ಯ ಎಂದು ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಕ್ಯಾತೇಗೌಡ ಹೇಳಿದರು.

ಮೂಕಾಂಬಿಕ ಪ್ರೌಢಶಾಲೆ ಆಶ್ರಯದಲ್ಲಿ ಏರ್ಪಡಿಸಿದ್ದ ವಲಯಮಟ್ಟದ ಪ್ರೌಢಶಾಲಾ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಪ್ರತಿಯೊಂದಕ್ಕೂ ಆಧುನಿಕತೆಯ ಸ್ಪರ್ಶ ಸಿಕ್ಕಿರುವ ಈ ದಿನಗಳಲ್ಲಿ ನಮ್ಮ ಜೀವನವೂ ಯಾಂತ್ರಿಕೃತವಾಗಿಬಿಟ್ಟಿದೆ. ಬದುಕಿಗೆ ಒಂದಿಷ್ಟು ಹುರುಪು ಚೈತನ್ಯ ಬೇಕೆಂದರೆ ಆಟೋಟಗಳ ಕಡೆಗೆ ಗಮನಹರಿಸಬೇಕು ಎಂದರು.

ಕ್ರೀಡಾಕೂಟದ ಕಾರ್ಯದರ್ಶಿ ಸದಾಶಿವಯ್ಯ ಮಾತನಾಡಿ, ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಉತ್ತಮ ಅವಕಾಶ ಶಾಲಾ-ಕಾಲೇಜುಗಳಲ್ಲಿ ಮಾತ್ರ ಸಿಗುತ್ತದೆ. ಜೀವನದಲ್ಲಿ ಕ್ರೀಡೆಗಳನ್ನು ಬಳಸಿಕೊಂಡು ಮುಂದೆ ಬರಬೇಕು ಎಂದರು.

ಮೂಕಾಂಬಿಕ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಪ್ರಸನ್ನ ಚಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೂಡಿಗೆ ಸದ್ಗುರು ಅಯ್ಯಪ್ಪ ಸ್ವಾಮಿ ಪ್ರೌಢಶಾಲೆ ಶಿಕ್ಷಕ ದುರ್ಗೇಶ್, ಮೂಕಾಂಬಿಕ ಶಾಲಾ ಮುಖ್ಯ ಶಿಕ್ಷಕ ಎಸ್.ಎಸ್. ಗೋಪಾಲ್, ಮಾಜಿ ಯೋಧ ನರೇಶ್, ಹಿರಿಯ ವಿದ್ಯಾರ್ಥಿಗಳಾದ ಪ್ರೇಮಾ, ಪ್ರವೀಣ್, ಸುಕನ್ಯಾ, ದೈಹಿಕ ಶಿಕ್ಷಕ ಪ್ರಸನ್ನ ಇದ್ದರು.