ಗೋಣಿಕೊಪ್ಪಲು, ಆ. 13: ಕರ್ನಾಟಕ ರಾಜ್ಯ ವಿಧಾನ ಪರಿಷತ್ನ ಪದವೀಧರರ ಕ್ಷೇತ್ರ ಚುನಾವಣೆಗೆ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಸಂಪೂರ್ಣ ಬೆಂಬಲ ನೀಡುವ ಮೂಲಕ ಪಕ್ಷದ ಅಭ್ಯರ್ಥಿ ಗೆಲುವಿಗೆ ಸಹಕರಿಸಬೇಕೆಂದು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಕರೆ ನೀಡಿದರು.
ಇಲ್ಲಿನ ಪಕ್ಷದ ಕಚೇರಿಯಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದರು. ನೈರುತ್ಯ ಪದವೀಧರರ ಕ್ಷೇತ್ರದ ಚುನಾವಣೆಗೆ ಗ್ರಾಮೀಣ ಮಟ್ಟದ ಪದವೀಧರ ವಿದ್ಯಾರ್ಥಿಗಳನ್ನು ಗುರುತಿಸಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಗೊಳಿಸಬೇಕು. ಚುನಾವಣೆಗಾಗಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಮಿತಿ ರಚಿಸಿ ಸಂಪೂರ್ಣ ಜವಾಬ್ದಾರಿ ನೀಡಲಾಗು ವದು. ಕಾರ್ಯಕರ್ತರು ಒಗ್ಗೂಡಿ ಶ್ರಮಿಸಿ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿತಗೊಳಿಸಬೇಕೆಂದು ಹೇಳಿದರು.
ಪಕ್ಷದ ಎಸ್.ಪಿ. ದಿನೇಶ್ ಮಾತನಾಡಿ, ಚುನಾವಣೆಗೆ 1 ವರ್ಷ ಮೊದಲೇ ಪಕ್ಷ ಅಭ್ಯರ್ಥಿ ಎಂದು ಘೋಷಿಸಿರುವದು ಉತ್ತಮ ಬೆಳವಣಿಗೆ. ಇದು ನಮ್ಮ ಸ್ಥೈರ್ಯವನ್ನು ಹೆಚ್ಚಿಸಿದೆ. ಜಿಲ್ಲಾ ಕಾಂಗ್ರೆಸ್ ಚುನಾವಣೆಗೆ ಪೂರಕ ಬೆಂಬಲ ನೀಡಿ ಸಹಕರಿಸಬೇಕು. ಸಂಘಟನೆಯ ಮೂಲಕ ಗೆಲುವು ಕಾಣಬೇಕು ಎಂದರು.
ಗ್ರಾಮೀಣ ಮಟ್ಟದಿಂದಲ್ಲೇ ಮತ ದಾರರನ್ನು ಪಟ್ಟಿಗೆ ಸೇರ್ಪಡೆಗೊಳಿಸಿ ಮತದಾರರನ್ನು ಹೆಚ್ಚುಗೊಳಿಸಬೇಕು. ಜಿಲ್ಲಾ ಕಾಂಗ್ರೆಸ್ ಇದೀಗ ಬಲಿಷ್ಠಗೊಂಡಿದ್ದು, ಚುನಾವಣೆಯಲ್ಲಿ ನಮ್ಮ ಬಲ ಪ್ರದರ್ಶನ ಮಾಡಬೇಕೆಂದು ಜಿಲ್ಲಾ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಕೊರಕುಟ್ಟೀರ ಸರ ಚಂಗಪ್ಪ ಹೇಳಿದರು.
ಗೋಣಿಕೊಪ್ಪ ನಗರ ಕಾಂಗ್ರೆಸ್ ಅಧ್ಯಕ್ಷ ಅರವಿಂದ್ ಕುಟ್ಟಪ್ಪ, ವಕ್ತಾರ ಟಾಟು ಮೊಣ್ಣಪ್ಪ, ಬ್ಲಾಕ್ ಕಾಂಗ್ರೆಸ್ ಮೈನಾರಿಟಿ ಘಟಕದ ಅಬ್ದುಲ್ ರೆಹಮಾನ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಎನ್. ಪ್ರಕಾಶ್, ವಿನಯ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಅಹಮ್ಮದ್, ಕಾರ್ಯದರ್ಶಿ ಕಾಡ್ಯಮಾಡ ಚೇತನ್, ಎ.ಜೆ. ಬಾಬು, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಕಡೇಮಾಡ ಕುಸುಮಾ ಜೋಯಪ್ಪ, ಜಿ.ಪಂ. ಸದಸ್ಯರಾದ ಪಿ.ಆರ್. ಪಂಕಜ, ಶ್ರೀಜಾ ಶಾಜಿ ಅಚ್ಚುತ್ತನ್, ಬಾನಂಡ ಪೃಥ್ಯು, ತಾ.ಪಂ. ಸದಸ್ಯೆ ಆಶಾ ಜೇಮ್ಸ್, ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತಾ, ತಿತಿಮತಿ ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್, ಮಾಜಿ ಜಿ.ಪಂ. ಸದಸ್ಯ ಮೂಕಳೇರ ಕುಶಾಲಪ್ಪ, ಪೊನ್ನಂಪೇಟೆ ವಲಯ ಕಾಂಗ್ರೆಸ್ ಅಧ್ಯಕ್ಷ ಮತ್ರಂಡ ದಿಲ್ಲು, ಸೇರಿದಂತೆ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.