ಕೂಡಿಗೆ, ಆ. 13: ಕೂಡಿಗೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪೋಷಕರ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಪ್ರಮುಖ ವಿಷಯವಾಗಿ ವಿದ್ಯಾರ್ಥಿಗಳಿಗೆ ಆಂಗ್ಲಭಾಷಾ ವಿಷಯದಲ್ಲಿ ವ್ಯಾಕರಣ ಮತ್ತು ಮಾತನಾಡುವ ಕೌಶಲ್ಯ ಉತ್ತಮ ಪಡಿಸುವ ವಿಷಯವಾಗಿ ಭಾನುವಾರದಂದು ತರಗತಿ ನಡೆಸುವ ವಿಚಾರವಾಗಿ ಚರ್ಚೆಗಳು ನಡೆದವು.

ಇತ್ತೀಚೆಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶಿಸಿರುವ ಸುತ್ತೊಲೆಯ ವಿಚಾರವನ್ನು ಕಾಲೇಜಿನ ಪ್ರಾಂಶುಪಾಲರು ಪೋಷಕರಿಗೆ ತಿಳಿಸಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಪೋಷಕರಾದ ಟಿ.ಪಿ. ಹಮೀದ್, ನಾಗರಾಜ್, ಕುಮಾರ್ ಮೊದಲಾದವರು ತಮ್ಮ ತಮ್ಮ ಅಭಿಪ್ರಾಯವನ್ನು ಸಭೆಗೆ ತಿಳಿಸಿ ಭಾನುವಾರ ತರಗತಿ ನಡೆಸಲು ನಿರ್ಧರಿಸಿರುವ ಕ್ರಮ ಸರಿಯಾದುದಲ್ಲ. ದೂರದ ವಿದ್ಯಾರ್ಥಿಗಳು ಕುಶಾಲನಗರಕ್ಕೆ ಸೇರಲು ಕಷ್ಟವಾಗುತ್ತದೆ. ಈಗ ನಡೆಯುವ ತರಗತಿಗಳಲ್ಲಿ ಹೆಚ್ಚುವರಿ ತರಗತಿಯನ್ನು ತೆಗೆದುಕೊಂಡು ಆಂಗ್ಲಭಾಷೆಯ ಬಗ್ಗೆ ಕಲಿಸುವದು ಉತ್ತಮವಾಗಿರುತ್ತದೆ ಎಂದು ಸಭೆಗೆ ತಿಳಿಸಿದರು.

ಆಂಗ್ಲಭಾಷೆಯ ತರಗತಿಗಳನ್ನು ತೆಗೆದುಕೊಳ್ಳಲು ನಿರ್ಧರಿಸಿರುವ ತೀರ್ಮಾನ ಸರಿಯಾದುದಲ್ಲ. ಈ ತರಬೇತಿ ನೀಡುವ ಸಂದರ್ಭ ತಾಲೂಕಿನ ಪದವಿಪೂರ್ವ ಕಾಲೇಜಿನ 1800 ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ತರಗತಿ ನಡೆಸುವದು ಎಷ್ಟು ಸಮಂಜಸ ಎಂದು ಪೋಷಕರಲ್ಲಿ ಚರ್ಚೆಗಳು ನಡೆದವು. ಈ ತೀರ್ಮಾನವನ್ನು ರದ್ದುಗೊಳಿಸಿ ವಿದ್ಯಾರ್ಥಿಗಳ ಹಿತದೃಷ್ಠಿಯನ್ನು ಕಾಯ್ದುಕೊಂಡು ಆಯಾಯ ಕಾಲೇಜುಗಳಲ್ಲಿ ಇಂಗ್ಲೀಷ್ ಶಿಕ್ಷಕರು ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಬೇರೆ ಬೇರೆ ತರಗತಿಗಳನ್ನು ನಡೆಸುವದರ ಮೂಲಕ ಕಲಿಕೆಗೆ ಅನುಕೂಲ ಮಾಡಬೇಕೆಂದು ಪೋಷಕರು ಸಲಹೆ ನೀಡಿದರು.

ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲ ಸಿ.ಎಂ. ಮಹಾಲಿಂಗಯ್ಯ ವಿದ್ಯಾರ್ಥಿಗಳ ಪೋಷಕರಿಗೆ ಅನುಮತಿ ಪತ್ರವನ್ನು ಕಾಲೇಜಿಗೆ ತಲಪಿಸುವಂತೆ ಸೂಚಿಸಿದರು. ಅಲ್ಲದೇ ಕಾಲೇಜಿನಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ತಾಲೂಕಿನ ಕೇಂದ್ರ ಸಮಿತಿಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭ ಕಾಲೇಜಿನ ಉಪನ್ಯಾಸಕರು, ಪೋಷಕರು ಸಭೆಯಲ್ಲಿ ಪಾಲ್ಗೊಂಡಿದ್ದರು.