ಸೋಮವಾರಪೇಟೆ, ಆ.13: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಕೃಷಿಕರು ಆತಂಕಕ್ಕೆ ಒಳಗಾಗಿದ್ದಾರೆ. ಈ ವ್ಯಾಪ್ತಿಯಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ಕೃಷಿ ಫಸಲನ್ನು ನಷ್ಟಗೊಳಿಸುತ್ತಿವೆ.
ಗ್ರಾ.ಪಂ. ವ್ಯಾಪ್ತಿಯ ಚಿಕ್ಕಾರ, ಕೂಗೂರು, ಹಿರಿಕರ, ದೊಡ್ಡಮಳ್ತೆ ಗ್ರಾಮದಲ್ಲಿ ಕಾಡಾನೆಗಳ ಹಾವಳಿಯಿಂದ ಗ್ರಾಮಸ್ಥರು ಕಂಗಾಲಾಗಿದ್ದು, ಪ್ರತಿದಿನ ಕೃಷಿ ಬೆಳೆಗಳನ್ನು ನಾಶಪಡಿಸುತ್ತಿವೆ. ಅರಣ್ಯ ಇಲಾಖಾ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಪಟಾಕಿ ಸಿಡಿಸಿ, ಗ್ರಾಮದ ಸುತ್ತಮುತ್ತಲಿನಿಂದ ಕಾಡಾನೆಗಳನ್ನು ದೂರದ ಅರಣ್ಯ ಪ್ರದೇಶಕ್ಕೆ ಅಟ್ಟುವ ಪ್ರಯತ್ನ ನಡೆಯುತ್ತಿದ್ದರೂ ಯಾವದೇ ಪ್ರಯೋಜನವಾಗಿಲ್ಲ.
ಹಗಲಿನ ವೇಳೆ ಮಾಲಂಬಿ, ನಿಡ್ತ ಮೀಸಲು ಅರಣ್ಯದಲ್ಲಿ ವಿಶ್ರಾಂತಿ ಪಡೆದುಕೊಳ್ಳುವ ಕಾಡಾನೆಗಳು, ರಾತ್ರಿಯಾಗುತ್ತಲೇ ಗ್ರಾಮಗಳಿಗೆ ನುಗ್ಗಿ ಉಪಟಳ ನೀಡುತ್ತಿವೆ. ನಾಟಿ ಮಾಡಿರುವ ಭತ್ತದ ಪೈರನ್ನು ತಿಂದು ಗದ್ದೆಯಲ್ಲಿ ಓಡಾಡುತ್ತಿರುವ ಕಾಡಾನೆಗಳ ಹಾವಳಿಗೆ ಕೃಷಿಕರು ಚಿಂತೆಗೀಡಾಗಿದ್ದಾರೆ.
ನಿನ್ನೆಯಷ್ಟೇ ಹಿರಿಕರ ಮಂಜುನಾಥ್ ಅವರ ಬಾಳೆಗಿಡಗಳನ್ನು ನಾಶಪಡಿಸಿರುವ ಕಾಡಾನೆಗಳು, ಎಚ್.ಎಂ.ಚಂದ್ರಪ್ಪ ಸೇರಿದಂತೆ ಹೆಚ್ಚಿನ ಬೆಳೆಗಾರರ ಕಾಫಿ ತೋಟಗಳಲ್ಲಿ ಗಿಡಗಳನ್ನು ಹಾನಿಪಡಿಸಿವೆ.