ಕೂಡಿಗೆ, ಆ. 13: ಕೋವರ್ ಕೊಲ್ಲಿಯಿಂದ ಕೂಡಿಗೆವರೆಗೆ ಕೈಗೊಂಡಿರುವ ರಸ್ತೆ ಅಗಲೀಕರಣ ಕಾಮಗಾರಿ ಸಮರ್ಪಕವಾಗಿ ನಡೆಸದೆ ಮನಬಂದಂತೆ ಮೋರಿಗಳ ನಿರ್ಮಾಣ ಮಾಡುತ್ತಾ ಕಳಪೆ ಕಾಮಗಾರಿ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ರಸ್ತೆ ಅಗಲೀಕರಣದ ಕಾಮ ಗಾರಿಗೆ ರೂ. 18 ಕೋಟಿ ರಸ್ತೆ ನಿಗಮ ದಿಂದ ಮಂಜೂರಾಗಿದ್ದು, ಈ ಕಾಮಗಾರಿಗೆ ಸರ್ಕಾರ ಹಣ ಬಿಡುಗಡೆ ಮಾಡಿದ್ದರೂ ಆ ಹಣದ ಮೊತ್ತಕ್ಕೆ ಸಮರ್ಪಕ ಕಾಮಗಾರಿ ನಡೆಯುತ್ತಿಲ್ಲ ಎಂದು ಸಂಬಂಧಪಟ್ಟ ಮೇಲ್ಮಟ್ಟದ ಅಧಿಕಾರಿಗಳಿಗೆ ಲಿಖಿತವಾಗಿ ದೂರನ್ನು ನೀಡಲಾಗಿದೆ. ಕೋವರ್‍ಕೊಲ್ಲಿಯಿಂದ ಕೂಡಿಗೆವರೆಗೆ 20ಕ್ಕೂ ಹೆಚ್ಚು ಮೋರಿಗಳನ್ನು ನಿರ್ಮಾಣ ಮಾಡಿದ್ದು, ಈ ರಸ್ತೆಯಲ್ಲಿ ದಿನಂಪ್ರತಿ ಕೂಡಿಗೆ-ಸೋಮವಾರಪೇಟೆ ನಡುವೆ ಸಾವಿರಾರು ವಾಹನ ಓಡಾಡುವ ಜಾಗವಾಗಿದೆ. ಗುತ್ತಿಗೆದಾರ ಮನಬಂದಂತೆ ಕಾಮಗಾರಿ ನಡೆಸಿ ಮೋರಿಯ ಜಾಗದಲ್ಲಿ ವಾಹನ ಚಾಲನೆಗೂ ಅವಕಾಶ ಮಾಡಿ ಕೊಡದೆ ತನ್ನ ರೀತಿಯಲ್ಲೇ ಕಾರ್ಯನಿರ್ವಹಿಸು ತ್ತಿರುವದು ಸಾರ್ವಜನಿಕರ ಅಸಮಧಾನವಾಗಿದೆ. ಖಾಸಗಿ ಬಸ್ ಮತ್ತು ಇತರ ವಾಹನ ಮಾಲೀಕರು ರಸ್ತೆಯಲ್ಲಿ ವಾಹನ ಚಾಲನೆಗೆ ಅವಕಾಶ ಮಾಡಬೇಕೆಂದಿದ್ದಾರೆ. ಇನ್ನೊಂದೆಡೆ ರಸ್ತೆ ಗುಂಡಿಗಳು ನೀರು ತುಂಬಿ ಕೆಸರುಮಯವಾಗಿರುವದರಿಂದ ವಾಹನ ಚಾಲನೆ ಮಾಡಲು ಕಷ್ಟವಾಗುತ್ತಿದೆ. ಈಗಾಗಲೇ ಮಂಜೂ ರಾಗಿರುವ ಹಣದಿಂದ ಉತ್ತಮವಾದ ರಸ್ತೆ ಕಾಮಗಾರಿ ನಡೆಯದಿದ್ದಲ್ಲಿ ಪ್ರತಿಭಟನೆ ಮಾಡಲಾಗುವದು ಎಂದು ಸ್ಥಳೀಯ ಗ್ರಾಮಸ್ಥರು ತಿಳಿಸಿದ್ದಾರೆ.

ಈ ಕಾಮಗಾರಿಗೆ ಸಂಬಂಧ ಪಟ್ಟಂತೆ ಸ್ಥಳೀಯ ಶಾಸಕರು ಗಮನಹರಿಸಿ, ಉತ್ತಮ ಗುಣಮಟ್ಟದಲ್ಲಿ ನಡೆಯುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕೆಂದು ಸ್ಥಳೀಯರ ಆಗ್ರಹವಾಗಿದೆ.