ಮಡಿಕೇರಿ, ಆ. 13: ವಿದ್ಯಾರ್ಥಿಗಳಲ್ಲಿ ಆಂಗ್ಲ ಭಾಷಾ ವಿಷಯವನ್ನು ಕೌಶಲ್ಯ ಅಭಿವೃದ್ಧಿಗೊಳಿಸುವ ಉದ್ದೇಶದಿಂದ ತಾಲೂಕು ಕೇಂದ್ರದಲ್ಲಿ ತಾಲೂಕಿನ ಸರ್ಕಾರಿ ಶಾಲೆಗಳ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷಾ ವಿಶೇಷ ತರಗತಿಯನ್ನು ನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದಿನಿಂದ ಆರಂಭಿಸಲಾಗಿತ್ತು. ಆದರೆ ತರಗತಿಗೆ ವಿದ್ಯಾರ್ಥಿಗಳು ಆಗಮಿಸಿದ್ದರೂ ಉಪನ್ಯಾಸಕರ ಗೈರು ಹಾಜರಿಯಿಂದ ಗೊಂದಲ ಸೃಷ್ಟಿಯಾಗಿತ್ತು.
ನಗರದ ಸರ್ಕಾರಿ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶೇಷ ತರಗತಿಗೆ ಈ ಕಾಲೇಜಿನ 580 ವಿದ್ಯಾರ್ಥಿಗಳು ಆಗಮಿಸಿದ್ದರೂ, ನಾಪೋಕ್ಲು ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಗೈರು ಹಾಜರಿಯಾಗಿದ್ದರು. ತರಗತಿ ನಡೆಸಲು ಉಪನ್ಯಾಸಕರು ಬಾರದಿದ್ದ ಕಾರಣ 9.30 ಗಂಟೆಗೆ ತರಗತಿಗೆ ಬಂದ ವಿದ್ಯಾರ್ಥಿಗಳು 11 ಗಂಟೆಯಾದರೂ ಅತ್ತಿಂದಿತ್ತ ಓಡಾಡುತ್ತಿದ್ದುದು ಕಂಡು ಬಂದಿತು.
ಈ ಬಗ್ಗೆ ಕಾಲೇಜಿನ ನಾಯಕ ಕಾವೇರಪ್ಪ ಹಾಗೂ ಉಪನಾಯಕಿ ಯುಕ್ತ ‘ಶಕ್ತಿ’ಯೊಂದಿಗೆ ಮಾತನಾಡಿ ವಾರದಲ್ಲಿ ಭಾನುವಾರ ಒಂದು ದಿನ ರಜೆ ಇದೆ. ಆ ದಿನವೂ ತರಗತಿ ನಡೆಸುವದರಿಂದ ಹಲವರಿಗೆ ತೊಂದರೆಯಾಗಲಿದೆ. ಶನಿವಾರ ಮಧ್ಯಾಹ್ನದ ನಂತರ ವಿಶೇಷ ತರಗತಿ ನಡೆಸಿದರೆ, ಎಲ್ಲರಿಗೂ ಅನುಕೂಲ ವಾಗಲಿದೆ. ಉಪನ್ಯಾಸಕರುಗಳಿಗೆ ತರಗತಿ ನಡೆಸಲು ಆಸಕ್ತಿ ಇಲ್ಲ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಬೆಳ್ಯಪ್ಪ ಮಾತನಾಡಿ, ಇಂದಿನಿಂದ ತರಗತಿ ಆರಂಭವಾಗಿದೆ. ಇಂದು ನೋಂದಣಿ ಮಾಡಲಾಗುತ್ತಿದೆ. ಉಪನ್ಯಾಸಕರನ್ನು ನಿಯುಕ್ತಿ ಮಾಡುವದು ಇಲಾಖೆಯ ನಿರ್ದೇಶಕರ ವಿವೇಚನೆಗೆ ಬಿಟ್ಟಿದ್ದು, ಇಂದು ಮೂರು ಮಂದಿ ಶಿಕ್ಷಕರು ಇದ್ದಾರೆ. ಅವರು ತರಗತಿ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.
ಕುಶಾಲನಗರ: ವಿದ್ಯಾರ್ಥಿಗಳಲ್ಲಿ ಆಂಗ್ಲ ಭಾಷಾ ವಿಷಯದಲ್ಲಿ ವ್ಯಾಕರಣ ಮತ್ತು ಮಾತನಾಡುವ ಕೌಶಲ್ಯ ಅಭಿವೃದ್ಧಿಗೊಳಿಸುವ ಉದ್ದೇಶದಿಂದ ತಾಲೂಕು ಮಟ್ಟ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕುಶಾಲನಗರ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶೇಷ ತರಗತಿಗೆ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದರೂ ಉಪನ್ಯಾಸಕರ ಗೈರು ಹಾಜರಿ ಕಾರಣ ಗೊಂದಲದ ವಾತಾವರಣ ಸೃಷ್ಠಿಯಾಗಿತ್ತು.
ಪದವಿಪೂರ್ವ ಶಿಕ್ಷಣ ಇಲಾಖೆ ಹೊರಡಿಸಿದ ನೂತನ ಆದೇಶದಂತೆ ಭಾನುವಾರದ ವಿಶೇಷ ತರಗತಿಗೆ ಸೋಮವಾರಪೇಟೆ ತಾಲೂಕಿನ ನೆಲ್ಲಿಹುದಿಕೇರಿ, ಸುಂಟಿಕೊಪ್ಪ, ಕುಶಾಲನಗರ, ಕೂಡಿಗೆ, ಶಿರಂಗಾಲ, ಆಲೂರು ಸಿದ್ದಾಪುರ, ಐಗೂರು, ಸೋಮವಾರಪೇಟೆ ಸೇರಿದಂತೆ 8 ಕಾಲೇಜಿನ ಪ್ರಥಮ ಮತ್ತು ದ್ವಿತೀಯ ಪಿಯುಸಿ ಅಂದಾಜು 1850 ವಿದ್ಯಾರ್ಥಿಗಳು ಆಗಮಿಸಿದ್ದರು. ಸ್ಥಳೀಯ ಸರಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಬೆಳಿಗ್ಗೆ 10 ಗಂಟೆಗೆ ಆರಂಭವಾಗಬೇಕಾದ ತರಗತಿಗಳು ಉಪನ್ಯಾಸಕರ ಗೈರುಹಾಜರಿಯಿಂದ ಆರಂಭಗೊಳ್ಳದ ಕಾರಣ ವಿದ್ಯಾರ್ಥಿಗಳಲ್ಲಿ ಗೊಂದಲ ಕಂಡುಬಂತು. ನಂತರ 11 ಗಂಟೆ ವೇಳೆಗೆ ತರಗತಿಯಿಂದ ಹೊರನಡೆದ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳತ್ತ ಪ್ರಯಾಣ ಬೆಳೆಸಲು ಆರಂಭಿಸಿದರು. ಇದೇ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಟಿ.ಸ್ವಾಮಿ ಅವರು ವಿದ್ಯಾರ್ಥಿಗಳನ್ನು ಮರಳಿ ತರಗತಿಗಳಿಗೆ ಕರೆತಂದು ಲಭ್ಯವಿದ್ದ ಕಾರ್ಯಕ್ರಮದ ಆಯೋಜಕ ರಿಂದ ಬೋಧನೆ ನೀಡುವಲ್ಲಿ ಕ್ರಮ ಕೈಗೊಂಡರು. ಆಂಗ್ಲ ಭಾಷೆ ಪ್ರಾಧ್ಯಾಪಕರುಗಳ ಗೈರು ಹಾಜರಿಯಿಂದ ಎಲ್ಲವೂ ಅಯೋಮಯವಾದ ದೃಶ್ಯ ಗೋಚರಿಸಿತು.
ಸುದ್ದಿಗಾರರೊಂದಿಗೆ ಮಾತನಾಡಿದ ಟಿ.ಸ್ವಾಮಿ, ಇಂಗ್ಲೀಷ್ ಭಾಷೆಯಲ್ಲಿ ಅನುತ್ತೀರ್ಣ ಗೊಳ್ಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಶಿಕ್ಷಣ ಇಲಾಖೆ ರಾಜ್ಯದಾದ್ಯಂತ ವಿಶೇಷ ತರಗತಿಗಳನ್ನು ನಡೆಸಲು ಸುತ್ತೋಲೆ ಹೊರಡಿಸಿದೆ. ಅದರಂತೆ ಪ್ರತಿ ಭಾನುವಾರ ಪದವಿಪೂರ್ವ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಭಾಷಾ ತರಗತಿಗಳನ್ನು ನಡೆಸಲು ಕ್ರಮಕೈಗೊಳ್ಳಲಾಗಿದೆ. ಸಂಬಂಧಿಸಿದ ಶಿಕ್ಷಕರಿಗೆ ಈ ಬಗ್ಗೆ ಮಾಹಿತಿ ಒದಗಿಸಲಾಗಿದ್ದರೂ ಹಾಜರಾಗದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಗೊಂದಲ ಏರ್ಪಟ್ಟಿದೆ. ಮುಂದಿನ ದಿನಗಳಲ್ಲಿ ಈ ತರಗತಿಗಳನ್ನು ಸಮರ್ಪಕವಾಗಿ ನಡೆಸಲು ಅಗತ್ಯ ಕ್ರಮಕೈಗೊಳ್ಳಲಾಗುವದು ಎಂದು ತಿಳಿಸಿದರು.