ವೀರಾಜಪೇಟೆ, ಆ. 13 : ನ್ಯಾಯವಾದಿಗಳ ಸೇವೆ ಮಹತ್ತರವಾದದ್ದು. ಅಮೂಲ್ಯವಾದುದು. ಪ್ರಕರಣಗಳ ಶೀಘ್ರ ಇತ್ಯರ್ಥ ಮುಖ್ಯವಲ್ಲ. ಪ್ರಕರಣದ ಇತ್ಯರ್ಥಕ್ಕೆ ದೀರ್ಘ ಕಾಲವಾದರೂ ಎಲ್ಲ ಮಜಲುಗಳು ಹೊರ ಬರುವಂತೆ ನ್ಯಾಯ ಸಮ್ಮತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಹಾಗೂ ಕರ್ನಾಟಕ ಜ್ಯುಡಿಶೀಯಲ್ ಅಕಾಡೆಮಿಯ ನಿವೃತ್ತ ನ್ಯಾಯಾಧೀಶ ಎಸ್.ಆರ್ ಸೋಮಶೇಖರ್ ಹೇಳಿದರು.
ವೀರಾಜಪೇಟೆ ವಕೀಲರ ಸಂಘದಿಂದ, ಇತ್ತೀಚೆಗೆ ನಿಧನರಾದ ವೀರಾಜಪೇಟೆಯ ಹಿರಿಯ ನ್ಯಾಯವಾದಿ, ಸಾಹಿತಿ ಬಿ.ಜಿ.ರಘುನಾಥ್ ನಾಯಕ್ ಅವರ ಭಾವಚಿತ್ರ ಅನಾವರಣ ಮತ್ತು ಭಾವಪೂರ್ಣ ಸ್ಮರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸೋಮಶೇಖರ್ ಅವರು ನ್ಯಾಯವಾದಿಗಳು ಪ್ರಕರಣಗಳ ಫಲಿತಾಂಶದ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಯಾವದೇ ಕ್ರಿಮಿನಲ್ ಇಲ್ಲವೇ ಸಿವಿಲ್ ಪ್ರಕರಣಗಳಾಗಲಿ ನ್ಯಾಯವಾದಿಗಳ ಪಾತ್ರ ಬಹುಮುಖ್ಯ ಎಂದರು.
ಬಿಟ್ಟಂಗಾಲ ಗ್ರಾಮದ ಕೊಡಗು ಹೆಗ್ಗಡೆ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದ ವೀರಾಜಪೇಟೆ ಸಮುಚ್ಚಯ ನ್ಯಾಯಾಲಯದ ಸೆಷನ್ಸ್ ಎರಡನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಮೋಹನ್ ಪ್ರಭು ಅವರು ಮಾತನಾಡಿ “ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಖಚಿತ ಅದನ್ನು ತಪ್ಪಿಸಲು ಸಾಧ್ಯವಿಲ್ಲ. ತಾನು ಎಷ್ಟು ಕಾಲ ಬದುಕಿದ್ದೇನೆ ಎಂಬುದಕ್ಕಿಂತ ಮುಖ್ಯವಾಗಿ ಬದುಕಿನ ಅವಧಿಯಲ್ಲಿ ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇನೆ ಎಂಬುದು ಮುಖ್ಯವಾಗುತ್ತದೆ. ಆದರ್ಶ ವ್ಯಕ್ತಿತ್ವ ಹೊಂದಿದ್ದ ಬಿ.ಜಿ.ರಘುನಾಥ್ ನಾಯಕ್ ಅವರ ಬದುಕು ಸಮಾಜಮುಖಿಯಾಗಿತ್ತು” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಆರ್.ಕೆ.ಜಿ.ಎಂ.ಎಂ. ಮಹಾಸ್ವಾಮೀಜಿಯವರು ಮಾತನಾಡಿ ವಕೀಲ ವೃತ್ತಿ ಗೌರವಾನ್ವಿತ ವೃತ್ತಿಯಾಗಿದ್ದು, ನಂಬಿರುವ ಕಕ್ಷಿದಾರರಿಗೆ ನ್ಯಾಯ ದೊರಕಿಸಿ ಕೊಡಲು ವಕೀಲರುಗಳು ಗರಿಷ್ಠ ಪ್ರಯತ್ನ ನಡೆಸಬೇಕು ಎಂದರು.
ವೀರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಎನ್.ಗೋಪಾಲಕೃಷ್ಣ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಸಿ.ಟಿ.ಜೋಸೆಫ್, ವೀರಾಜಪೇಟೆಯ ಹಿರಿಯ ವಕೀರುಗಳಾದ ಎಂ.ಕೆ. ಪೂವಯ್ಯ, ಸಿ.ಹೆಚ್. ಕರುಣಾಕರನ್, ಐ.ಆರ್.ಪ್ರಮೋದ್, ಬಿ.ಎಸ್. ಪುಷ್ಪರಾಜ್ ಮಾತನಾಡಿದರು. ರಘುನಾಥ್ ನಾಯಕ್ ಅವರ ಕುಟುಂಬ ಸದಸ್ಯರುಗಳಾದ ಬೆಂಗಳೂರಿನ ವಕೀಲ ವಿನೋದ್ ಕುಮಾರ್ ಹಾಗೂ ನಿಖಿಲ್ ನಾಯಕ್ ಇದ್ದರು. ವೇದಿಕೆಯಲ್ಲಿ ನ್ಯಾಯಾಧೀಶರುಗಳಾದ ಶರ್ಮಿಳಾ ಕಾಮತ್, ಬಿ.ಕೆ.ಮನು ಬಿ.ಜಿ.ರಘುನಾಥ್ ಅವರ ಪತ್ನಿ ಶಶಿಕಾಂತ್, ಸಿವಿಲ್ ಜಡ್ಜ್ ನ್ಯಾಯಾಲಯದ ಡಿ.ಆರ್. ಜಯಪ್ರಕಾಶ್ ಉಪಸ್ಥಿತರಿದ್ದರು.
ವಕೀಲರ ಸಂಘದ ಕಾರ್ಯದರ್ಶಿ ರಾಕೇಶ್ ಸ್ವಾಗತಿಸಿ ನಿರೂಪಿಸಿದರು, ಬಿ.ಬಿ.ಮಾದಪ್ಪ ವಂದಿಸಿದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎನ್.ಸುಬ್ಬಯ್ಯ, ಜಂಟಿ ಕಾರ್ಯದರ್ಶಿ ಸಿ.ಕೆ.ಪೂವಣ್ಣ ಸಂಘದ ಇತರ ಪದಾಧಿಕಾರಿಗಳು ಹಾಜರಿದ್ದರು.