ಶನಿವಾರಸಂತೆ, ಆ. 14: ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಕೆಲಕೊಡ್ಲಿ ಗ್ರಾಮದ ನೂತನ ಸೇತುವೆಯ ಸಮೀಪದ ಹೇಮಾವತಿ ನದಿಗೆ ನಿನ್ನೆ ಈಜಲು ಹೋದ ಬಾಲಕರಿಬ್ಬರು ನೀರು ಪಾಲಾದ ಘಟನೆ ನಡೆದಿದೆ.

ಯಸಳೂರು ಪೇಟೆಯ ನಿವಾಸಿಗಳಾದ ಜೀಶಾನ್ ಅವರ ಪುತ್ರ ಅಸ್ಪನ್ (17) ಶನಿವಾರಸಂತೆಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಮೊಬೈಲ್ ರಿಪೇರಿ ಅಂಗಡಿಯಿದೆ. ಹಾಗೂ ದಿಲ್‍ಧಾರ್ ಬೇಗ್ ಅವರ ಪುತ್ರ ಸುಹೇಬ್ (16) ಯಸಳೂರು ಸರಕಾರಿ ಶಾಲೆಯಲ್ಲಿ ಎಸ್.ಎಸ್. ಎಲ್.ಸಿ. ವ್ಯಾಸಂಗ ಮಾಡುತ್ತಿದ್ದು, ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ರಜೆ ಇದ್ದಾಗ ನದಿಗೆ ಸ್ನಾನ ಮಾಡಲು ಸ್ನೇಹಿತರೊಂದಿಗೆ ತೆರಳುವ ಹವ್ಯಾಸವಿದ್ದು, ನಿನ್ನೆಯು ಸುಮಾರು 6 ಮಂದಿ ಯುವಕರು ತಮ್ಮ ಮೋಟಾರ್ ಸೈಕಲ್‍ಗಳಲ್ಲಿ ನದಿಗೆ ತೆರಳಿದ್ದಾರೆ. ನದಿಯಲ್ಲಿ ಇಳಿದು ಈಜುತ್ತಿದ್ದ ವೇಳೆ ಸುಮಾರು 20 ಅಡಿ ಆಳವಿರುವ ನದಿ ನೀರಿನ ಸೆಳೆತಕ್ಕೆ ಸಿಲುಕಿ ಅಸ್ಪನ್ ಹಾಗೂ ಸುಹೇಬ್ ಸಾವನ್ನಪ್ಪಿದ್ದಾರೆ.

ದಡಕ್ಕೆ ಬಂದ ನಾಲ್ವರು ಯುವಕರು ಊರಿಗೆ ತೆರಳಿದ್ದು, ಭಯದಿಂದ ಈ ವಿಚಾರವನ್ನು ಯಾರಿಗೂ ಹೇಳಿರಲಿಲ್ಲ. ಸಂಜೆ ಮೃತ ಯುವಕರ ತಂದೆ - ತಾಯಿ ಜತೆಯಲ್ಲಿ ತೆರಳಿದ್ದ ಯುವಕರನ್ನು ಗದರಿಸಿ ಕೇಳಿದಾಗ ವಿಚಾರ ಬಯಲಾಯಿತು. ಬಳಿಕ ಕೆಲವರು ನದಿಯ ಬಳಿಗೆ ತೆರಳಿ ಹುಡುಕಾಡಿದಾಗ ನೀರುಪಾಲಾದ ಯುವಕರ ಬಟ್ಟೆಗಳು ಹಾಗೂ ಮೋಟಾರ್ ಸೈಕಲ್ ಗೋಚರಿಸಿತು.

ಇಂದು ಬೆಳಿಗ್ಗೆ ನೂರಾರು ಮಂದಿ ಗ್ರಾಮಸ್ಥರು ನದಿಯ ಬಳಿ ತೆರಳಿದರು. ಮುಳುಗುತಜ್ಞ ಸುಬೇದ್ ಜಾನ್ ಸೇರಿದಂತೆ 6 ಮಂದಿಯ ತಂಡ ನದಿಗಿಳಿದು ಯುವಕರ ಮೃತ ದೇಹವನ್ನು ಹೊರ ತರುವಲ್ಲಿ ಯಶಸ್ವಿಯಾದರು. ಕುಶಾಲನಗರದ ಅಗ್ನಿಶಾಮಕದಳ ತಡವಾಗಿ ಆಗಮಿಸಿತ್ತು. ಶನಿವಾರಸಂತೆ ಸರಕಾರಿ ಸಮುದಾಯ ಆಸ್ಪತ್ರೆಯ ಶವಾಗಾರದಲ್ಲಿ ಮೃತ ಯುವಕರ ಮೃತ ದೇಹವನ್ನು ವೈದ್ಯರ ಪರಿಶೀಲನೆ ನಂತರ ವಾರಿಸುದಾರರಿಗೆ ಒಪ್ಪಿಸಲಾಯಿತು.