ಮಡಿಕೇರಿ, ಆ. 15: ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್‍ಕ್ಲಬ್ ವತಿಯಿಂದ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಆಯೋಜಿಸಲಾಗಿದ್ದ ‘ಕೊಡಗಿನ ನಿಸರ್ಗ ಸೊಬಗು’ ಛಾಯಾಚಿತ್ರ ಸ್ಪರ್ಧೆಯಲ್ಲಿ ಮಡಿಕೇರಿಯ ಸುನಿಲ್ ಶೆಟ್ಟಿ ಪ್ರಥಮ, ಸುಧಾಮ ಪೆರಾಜೆ ದ್ವಿತೀಯ ಬಹುಮಾನ ಪಡೆದಿದ್ದಾರೆ.

ಮಡಿಕೇರಿಯ ಡೈರಿ ಫಾರಂನ ನಿವಾಸಿ ಕೆ.ಎಂ. ಜಗನ್ನಾಥ್ ಹಾಗೂ ಜಿ.ಎಸ್. ಲೀಲಾ ದಂಪತಿಯ ಪುತ್ರ ಸುನಿಲ್ ಶೆಟ್ಟಿ ಔಷಧಿ ವಿತರಣಾ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

ಮಡಿಕೇರಿಯ ಮಂಗಳಾದೇವಿ ನಗರದ ನಿವಾಸಿ ಕೇಶವ್ ಪೆರಾಜೆ ಹಾಗೂ ನಾಗಮ್ಮ ಪೆರಾಜೆ ದಂಪತಿ ಪುತ್ರ ಸುಧಾಮ ಪೆರಾಜೆ ಆಳ್ವಾಸ್ ಕಾಲೇಜಿನಲ್ಲಿ ಇತ್ತೀಚೆಗೆ ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ. ಈ ಹಿಂದೆ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದ್ದರು.

ಮಡಿಕೇರಿಯ ಮಂಗಳಾದೇವಿ ನಗರದ ನಾಗೇಶ್ ಹಾಗೂ ಗೀತಾ ದಂಪತಿಗಳ ಪುತ್ರ ಜಗದೀಶ್ ಪೂಜಾರಿ ತೃತೀಯ ಬಹುಮಾನ ಪಡೆದಿದ್ದಾರೆ. ಇವರು ಮಡಿಕೇರಿಯಲ್ಲಿ ವೀಡಿಯೋಗ್ರಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ಭಾಗಮಂಡಲ ಸಮೀಪದ ತಣ್ಣಿಮಾನಿಯ ನಿವಾಸಿ ದೇವಿಪ್ರಸಾದ್ ನಾಲ್ಕನೇ ಬಹುಮಾನ ಪಡೆದಿದ್ದಾರೆ.

ತಾ. 20 ರಂದು ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆಯುವ ವಿಶ್ವ ಛಾಯಾಗ್ರಾಹಕರ ದಿನಾಚರಣೆಯಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಣೆಯಾಗಲಿದೆ. ಅಂದು ಪತ್ರಿಕಾ ಹಾಗೂ ದೃಶ್ಯ ಮಾಧ್ಯಮದ ಛಾಯಾಗ್ರಾಹಕರಿಗೆ ಆಯೋಜಿಸಲಾಗಿದ್ದ ಛಾಯಾಚಿತ್ರ ಹಾಗೂ ವೀಡಿಯೋಗ್ರಫಿ ಸ್ಪರ್ಧೆಯ ಫಲಿತಾಂಶ ಬರಲಿದೆ ಎಂದು ಪ್ರಕಟಣೆ ತಿಳಿಸಿದೆ.