ನಾಪೋಕ್ಲು, ಆ. 15: ಏರುತ್ತಿರುವ ಉತ್ಪಾದನಾ ವೆಚ್ಚ, ಕೂಲಿ ಕಾರ್ಮಿಕರ ಕೊರತೆ, ಹವಾಮಾನದ ಏರುಪೇರು ಮುಂತಾದ ಕಾರಣಗಳನ್ನು ಮುಂದಿಟ್ಟುಕೊಂಡು ರೈತರು ಭತ್ತದ ಬೇಸಾಯವನ್ನು ಕಡಿಮೆ ಮಾಡಿದ್ದಾರೆ.ಬೆಳೆ ಕಟಾವಿನ ಸಮಯದಲ್ಲಿ ಕಾಡು ಹಂದಿಗಳ ಉಪಟಳವೂ ಬೆಳೆಗಾರರನ್ನು ಹೈರಾಣಾಗಿಸುತ್ತಿದೆ. ಆದರೂ ಗ್ರಾಮೀಣ ಭಾಗದಲ್ಲಿ ರೈತರು ಭತ್ತದ ನಾಟಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ಉಳುಮೆ ಮತ್ತಿತರ ಕೆಲಸಗಳನ್ನು ಬದಿಗೊತ್ತಿ ಭತ್ತದ ಕೆಲಸಗಳಿಗೆ ಯಂತ್ರಗಳ ಮೊರೆಹೋಗುತಿದ್ದಾರೆ. ಇಲ್ಲಿಗೆ ಸಮೀಪದ ಚೆಯ್ಯಂಡಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಿಯಂದಡ ಗ್ರಾಮದ ರೈತರು ಭತ್ತದ ನಾಟಿಗಾಗಿ ಯಂತ್ರಗಳ ಬಳಕೆಯನ್ನು ಎರಡು ವರ್ಷಗಳಿಂದ ಕೈಗೊಳ್ಳುತ್ತಿದ್ದಾರೆ. ರೈತರಾದ ಬೊವ್ವೇರಿಯಂಡ ಪ್ರಶಾಂತ ಕಾವೇರಪ್ಪ, ಶೈಲಾಶಾನುಭೋಗ, ಕುಕ್ಕೆಮನೆ ಆರ್. ಸದಾಶಿವ ಹಾಗೂ ಕುಕ್ಕೆಮನೆ ಸುಬ್ರಮಣ್ಯ ಇವರಿಗೆ ಸೇರಿದ ಹದಿನೇಳು ಏಕರೆ ಗದ್ದೆಯಲ್ಲಿ ಎರಡು ವರ್ಷಗಳಿಂದ ಯಾಂತ್ರೀಕೃತ ನಾಟಿ ಮಾಡುತ್ತಿದ್ದಾರೆ. ಕೃಷಿ ಇಲಾಖೆ ನೀಡುವ ಹದಿನಾರು ಸಾವಿರ ರೂಪಾಯಿ ಪ್ರೋತ್ಸಾಹ ಧನದ ಸದುಪಯೋಗ ಮಾಡಿಕೊಂಡು ರೈತರು ಭತ್ತ ಬೆಳೆಯುತ್ತಿದ್ದಾರೆ.

ಇತ್ತೀಚೆಗೆ ನರಿಯಂದಡ ಗ್ರಾಮದಲ್ಲಿ ತೋಟಂಬೈಲ್ ಕುಮಾರ್ ಅವರ ಗದ್ದೆಯಲ್ಲಿ ರೈತರು ಪರಸ್ಪರ ಸಹಕಾರ ತತ್ವದಲ್ಲಿ ನಾಟಿ ಮಾಡಿದ್ದರು.

-ದುಗ್ಗಳ