ಕುಶಾಲನಗರ, ಆ. 14: ಪತ್ರಕರ್ತರು ಮತ್ತು ಪತ್ರಿಕೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಾಕಾರಿ ಹಾಗೂ ನಿಂದನೆ ಮಾಡುವ ಕಾಯಕದಲ್ಲಿ ಕೆಲವು ವ್ಯಕ್ತಿಗಳು ತೊಡಗಿರುವ ಬಗ್ಗೆ ಕುಶಾಲನಗರ ಕಾರ್ಯನಿರತ ಪತ್ರಕರ್ತರ ಸಂಘ ಖಂಡನೆ ವ್ಯಕ್ತಪಡಿಸಿದೆ.

ಕುಶಾಲನಗರದಲ್ಲಿ ನಡೆದ ಪತ್ರಕರ್ತರ ಸಂಘದ ತುರ್ತು ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು ಇತ್ತೀಚಿನ ದಿನಗಳಲ್ಲಿ ಕೆಲವು ವ್ಯಕ್ತಿಗಳು ಪತ್ರಿಕಾ ರಂಗದ ಮೇಲೆ ವಿನಾಕಾರಣ ದೂಷಣೆ ಮಾಡುವದು, ಇಲ್ಲಸಲ್ಲದ ಆರೋಪ ಹೊರಿಸುತ್ತಿರುವದು ಕಂಡುಬಂದಿದ್ದು ಪತ್ರಿಕಾ ರಂಗದ ಮೇಲೆ ಪರೋಕ್ಷ ಹಿಡಿತ ಸಾಧಿಸಲು ಹೊರಟಿರುವ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಿಕೆಯಲ್ಲಿ ಯಾವದೇ ರೀತಿಯ ಸುದ್ದಿಗಳು ಪ್ರಕಟಗೊಂಡ ಸಂದರ್ಭ ಅವುಗಳ ಬಗ್ಗೆ ಪತ್ರಿಕ್ರಿಯೆ ಅಥವಾ ಸ್ಪಷ್ಟನೆ ನೀಡುವ ಅವಕಾಶವಿದೆ. ಇದಕ್ಕೆ ಹೊರತಾಗಿ ವಿನಾಕಾರಣ ದೂಷಣೆ ಮಾಡುವದು ಸರಿಯಲ್ಲ. ಈ ನಿಟ್ಟಿನಲ್ಲಿ ಪತ್ರಕರ್ತರಿಗೆ ಪೊಲೀಸ್ ರಕ್ಷಣೆ ನೀಡುವ ಸಂಬಂಧ ಪೊಲೀಸ್ ಉಪ ಅಧೀಕ್ಷಕರಿಗೆ ಮನವಿ ನೀಡಲು ಸಭೆ ನಿರ್ಣಯ ಕೈಗೊಂಡಿತು.

ಬೇನಾಮಿ ಸಂಘಸಂಸ್ಥೆಗಳ ಹೆಸರಿನಲ್ಲಿ ಕುಶಾಲನಗರದಲ್ಲಿ ಕೆಲವು ವ್ಯಕ್ತಿಗಳು ಪತ್ರಕರ್ತರ, ಪತ್ರಿಕೆಗಳ ವಿರುದ್ಧ ಸಭೆ ನಡೆಸುವ ಬಗ್ಗೆ ಪತ್ರಗಳು ರವಾನೆಯಾಗುತ್ತಿರುವ ಕೆಲವು ಪ್ರಕರಣಗಳು ಕಂಡುಬರುತ್ತಿದ್ದು ಈ ಮೂಲಕ ನಾಗರಿಕರಲ್ಲಿ ಗೊಂದಲ ಉಂಟುಮಾಡುತ್ತಿದ್ದಾರೆ. ಇಂತಹವರ ಮೇಲೆ ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು. ಇಂತಹ ದುಷ್ಟ ಶಕ್ತಿಗಳ ವಿರುದ್ಧ ಸಂಘದ ಮೂಲಕ ಪ್ರತಿಭಟಿಸುವ ಬಗ್ಗೆ ಚರ್ಚಿಸಲಾಯಿತು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಯದರ್ಶಿ ಕೆ.ಕೆ.ನಾಗರಾಜಶೆಟ್ಟಿ, ಖಜಾಂಚಿ ವಿ.ಪಿ.ಸುಖೇಶ್, ಸಂಘಟನಾ ಕಾರ್ಯದರ್ಶಿ ಬಿ.ಎಸ್. ಲೋಕೇಶ್ ಸಾಗರ್, ಕೆ.ಎಸ್.ಮೂರ್ತಿ, ರಘು ಹೆಬ್ಬಾಲೆ, ಪಿ.ಬಿ.ಸುನೀಲ್ ಎನ್.ಎ.ಅಶ್ವಥ್, ಸಬಲಂ ಭೋಜಣ್ಣ ರೆಡ್ಡಿ, ವಿನೋದ್ ಇದ್ದರು.