ಮಡಿಕೇರಿ, ಆ. 15: ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದವರಿಗೆ ಕಂದಾಯ ಇಲಾಖೆ ವತಿಯಿಂದ ಹಕ್ಕು ಪತ್ರ ವಿತರಣೆ ಮಾಡಲಾಯಿತು.ಇಲ್ಲಿನ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಕ್ಕು ಪತ್ರ ವಿತರಣೆ ಮಾಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರು, ಸರಕಾರಿ ಜಾಗದಲ್ಲಿ ಹಲವಾರು ವರ್ಷಗಳಿಂದ ಮನೆ ಕಟ್ಟಿಕೊಂಡು ಹಕ್ಕು ಪತ್ರ ದೊರಕದೇ ಇದ್ದವರಿಗೆ 94ಛಿ ಹಾಗೂ 94ಛಿಛಿ ರಡಿ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ನಿರ್ದೇಶನದ ಮೇರೆಗೆ ಹಕ್ಕು ಪತ್ರ ವಿತರಣೆ ಮಾಡಲಾಗುತ್ತಿದೆ. ಕಾನೂನಿನ ನಿಯಮದಂತೆ ಫಲಾನುಭವಿಗಳು ರೂ. 2 ಸಾವಿರ ಪಾವತಿಸಬೇಕಾಗಿದೆ. ನಗರ ಪ್ರದೇಶದಲ್ಲಿ ಜಾಗ ಸಿಗುವದೇ ಕಷ್ಟ, ಅಂತದ್ದರಲ್ಲಿ ಸಿಕ್ಕಿರುವ ಜಾಗ, ಮನೆಗಳನ್ನೂ ಮಾರಿಕೊಳ್ಳದೆ ಸದುಪಯೋಗಪಡಿಸಿಕೊಳ್ಳುವಂತೆ ಕೋರಿದರು.
ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಸಿ ಮತ್ತು ಡಿ ಜಾಗದಲ್ಲಿ ಸಾಕಷ್ಟು ಬಡವರು ನೆಲೆಸಿದ್ದು, ಸಿ ಮತ್ತು ಡಿ ಜಾಗದ
(ಮೊದಲ ಪುಟದಿಂದ) ನೆಪವೊಡ್ಡಿ ಹಕ್ಕು ಪತ್ರ ನೀಡುತ್ತಿಲ್ಲ. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಆದೇಶದಲ್ಲಿಯೇ ಹಕ್ಕು ಪತ್ರ ನೀಡಬಹುದೆಂದು ಸೂಚಿಸಿದ್ದರು. ಅಧಿಕಾರಿಗಳು ಮಾಡುತ್ತಿಲ್ಲ. ಕಡತ ವಿಲೇವಾರಿ ಆಗುತ್ತಿಲ್ಲ. ಹೀಗಾದರೆ ಬಡವರಿಗೆ ನ್ಯಾಯ ಸಿಕ್ಕಿದಂತಾಗುವದೆಯೇ ಎಂದು ಪ್ರಶ್ನಿಸಿದರು. ಸಿ. ಅಂಡ್ ಡಿ ಜಾಗದ ಬಗ್ಗೆ ಅಧಿಕಾರಿಗಳು ಸರಕಾರಕ್ಕೆ ಸ್ಪಷ್ಟನೆ ಕೋರಿ ಕಳುಹಿಸಿದ್ದೆ ಇದಕ್ಕೆ ಕಾರಣವಾಗಿದೆ. ಕಾನೂನು ರೀತಿಯಲ್ಲಿ ಹಕ್ಕು ಪತ್ರ ನೀಡಿ ಕಾನೂನು ಬಾಹಿರವಾಗಿ ಕೇಳುತ್ತಿಲ್ಲವೆಂದರು. ಅರಣ್ಯ ಇಲಾಖೆ ಇದೀಗ ಈಸ್ಟ್ರೇಂಜ್ ಎಂಬ ಇಲ್ಲದ ಕಾನೂನು ಹೇಳುತ್ತಿದ್ದು, ಇದು ಸರಿಯಾದ ಧೋರಣೆಯಲ್ಲವೆಂದು ಹೇಳಿದರು.
ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ, ಹಕ್ಕು ಪತ್ರ ನೀಡಿದ ಬಳಿಕ ಫಲಾನುಭವಿಗಳಿಗೆ ಯಾವದೇ ರೀತಿಯ ತೊಡಕಾಗಬಾರದೆಂಬ ಉದ್ದೇಶದಿಂದ ಫಾರಂ ನಂ 50 ಹಾಗೂ 53ರ ಬಗ್ಗೆ ಸ್ಪಷ್ಟೀಕರಣ ಕೋರಲಾಗಿದೆ. ಎಲ್ಲರಿಗೂ ಸಮರ್ಪಕ ರೀತಿಯ ಹಕ್ಕು ಪತ್ರ ವಿತರಣೆ ಮಾಡಲಾಗುವದು ಯಾವದೇ ಆತಂಕ ಬೇಡವೆಂದರು. ಈ ಸಂದರ್ಭ ಶಾಸಕರುಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಇದ್ದರು.