ಮಡಿಕೇರಿ, ಆ. 13: ಗ್ರಾಮೀಣ ಯುವಕರನ್ನು ಕೃಷಿಯ ಕಡೆಗೆ ಆಕರ್ಷಿಸಲು ಮತ್ತು ಸ್ಥಳೀಯವಾಗಿ ಸಣ್ಣ ಕೃಷಿ ಉಪಕರಣಗಳ ತಯಾರಿಕೆ ಸೌಲಭ್ಯದೊಂದಿಗೆ ಕೃಷಿ ಯಂತ್ರಗಳ ಬಳಕೆಯನ್ನು ಪ್ರೋತ್ಸಾಹಿಸಲು ಮತ್ತು ಯುವ ರೈತರನ್ನು ಕೃಷಿಯಲ್ಲೇ ಉಳಿಸಿಕೊಳ್ಳುವಲ್ಲಿ ಅವರಿಗೆ ಉದ್ಯೋಗವಕಾಶ ಸೃಷ್ಟಿಸುವ ನಿಟ್ಟಿನಲ್ಲಿ ಗ್ರಾಮೀಣ ಕೃಷಿ ಯಂತ್ರೋಪಕರಣ/ಸೇವಾ ಕೇಂದ್ರಗಳ ಕಾರ್ಯಕ್ರಮ ಆಯೋಜಿಸಲಾಗಿದೆ.

ಕೃಷಿ ಯಂತ್ರೋಪಕರಣಗಳು, ಪಂಪುಸೆಟ್‍ಗಳು, ಬೋರ್‍ವೆಲ್‍ಗಳು ಹಾಗೂ ಸೂಕ್ಷ್ಮ ನೀರಾವರಿ ಘಟಕಗಳು ದುರಸ್ತಿಗೆ ಒಳಗಾದಲ್ಲಿ ಇವುಗಳನ್ನು ರಿಪೇರಿ ಮಾಡುವ ಸೌಲಭ್ಯಗಳು ಪ್ರಮುಖವಾಗಿ ಜಿಲ್ಲಾ ಮಟ್ಟದಲ್ಲಿ ಲಭ್ಯವಿದ್ದು, ರೈತರು ಹೋಬಳಿ/ತಾಲೂಕುಗಳಿಂದ ಜಿಲ್ಲಾ ಕೇಂದ್ರಗಳಿಗೆ ಬರಬೇಕಾಗಿರುತ್ತದೆ. ರೈತರಿಗೆ ಈ ಎಲ್ಲಾ ಸೌಲಭ್ಯಗಳನ್ನು ಸ್ಥಳೀಯವಾಗಿ ಒದಗಿಸಲು ಕೃಷಿ ಯಂತ್ರೋಪಕರಣಗಳು, ಪಂಪುಸೆಟ್‍ಗಳು, ಬೋರ್‍ವೆಲ್‍ಗಳು ಹಾಗೂ ಸೂಕ್ಷ್ಮ ನೀರಾವರಿ ಘಟಕ ಗಳು ದುರಸ್ತಿ ಮಾಡುವಲ್ಲಿ ಪೂರಕ ಸೌಲಭ್ಯಗಳನ್ನು ಸೃಷ್ಟಿಸುವಲ್ಲಿ ಪ್ರಾರಂಭಿಕವಾಗಿ ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚು ಇರುವ ಹೋಬಳಿಯಲ್ಲಿ ಗ್ರಾಮೀಣ ಕೃಷಿ ಯಂತ್ರೋಪಕರಣ/ಸೇವಾ ಕೇಂದ್ರ ಗಳನ್ನು ತೆರೆಯಲು ಉದ್ದೇಶಿಸ ಲಾಗಿರುತ್ತದೆ.

ಮಾರ್ಗಸೂಚಿ: ಪ್ರತಿ ತಾಲೂಕು ಕೇಂದ್ರಕ್ಕೆ 1ರಂತೆ ಕೃಷಿ ಚಟುವಟಿಕೆಗಳು ಹೆಚ್ಚು ಇರುವ ಹೋಬಳಿಯಲ್ಲಿ ಅನುಷ್ಠಾನಗೊಳಿಸಲಾಗುವದು. ಕೇಂದ್ರಗಳನ್ನು ಸ್ಥಾಪಿಸಲು ಕನಿಷ್ಟ 20*15 ಅಡಿ ಅಳತೆಯ ಕೊಠಡಿ/ಗೋದಾಮು ಇರಬೇಕು.

ವಿದ್ಯಾರ್ಹತೆ: ಕೃಷಿ ಇಂಜಿನಿಯರಿಂಗ್ ಡಿಪ್ಲೊಮೋ/ ಕೃಷಿಯಲ್ಲಿ ಡಿಪ್ಲೊಮೋ/ ಅಟೋಮೋಬೈಲ್ ಡಿಪ್ಲೊಮೋ/ ಮೆಕಾನಿಕಲ್ ಡಿಪ್ಲೊಮೋ/ ಐ.ಟಿ.ಐ/ ಪಿ.ಯು.ಸಿ ತೇರ್ಗಡೆ ಹೊಂದಿರುವ ಗ್ರಾಮೀಣ ಯುವಕರಾಗಿರಬೇಕು. ಕೃಷಿ ವಿಶ್ವವಿದ್ಯಾನಿಲಯದಿಂದ ಕೃಷಿ ಯಂತ್ರೋಪಕರಣಗಳ ದುರಸ್ತಿ ಹಾಗೂ ನಿರ್ವಹಣೆಗೆ ಸಂಬಂಧಿಸಿ ದಂತೆ ತರಬೇತಿ ಪಡೆದಿರುವ ಬಗ್ಗೆ ಪ್ರಮಾಣ ಪತ್ರ ಹೊಂದಿರಬೇಕು ಹಾಗೂ ರೈತ ಕುಟುಂಬಕ್ಕೆ ಸೇರಿದವರಾಗಿರಬೇಕು. ಅಭ್ಯರ್ಥಿಗಳ ವಯಸ್ಸು ಕನಿಷ್ಟ 18 ವರ್ಷ ಮತ್ತು ಗರಿಷ್ಠ 45 ವರ್ಷ ಮೀರಿರಬಾರದು. ಸ್ಥಳೀಯ ಅಭ್ಯರ್ಥಿಗಳನ್ನು ಪರಿಗಣಿಸಲಾಗುವದು. ಕೇಂದ್ರಗಳಲ್ಲಿ ಟ್ರ್ಯಾಕ್ಟರ್, ಪವರ್ ಟಿಲ್ಲರ್, ಪಂಪ್‍ಸೆಟ್, ಸಸ್ಯ ಸಂರಕ್ಷಣ ಉಪಕರಣಗಳು, ಸೂಕ್ಷ್ಮ ನೀರಾವರಿ ಘಟಕಗಳು ಮತ್ತು ಬೋರ್‍ವೆಲ್‍ಗಳ ದುರಸ್ತಿ ಒಳಗೊಂಡಂತೆ ಕೃಷಿ ಚಟುವಟಿಕೆಗಳಿಗೆ ಬೇಕಾದ ಎಲ್ಲಾ ಯಂತ್ರೋಪಕರಣಗಳ ದುರಸ್ತಿಯನ್ನು ಮಾಡುವಂತಿರಬೇಕು.

ಕೇಂದ್ರಗಳಲ್ಲಿ ಯಂತ್ರೋಪಕರಣ ಗಳ ದುರಸ್ತಿಗೆ ಬೇಕಾದ ಪರಿಕರ, ರುಬ್ಬುವ ಯಂತ್ರ, ಕೈಯಲ್ಲಿ ಕೊರೆಯುವ ಯಂತ್ರ, ವೆಲ್ಡಿಂಗ್ ಮೆಷಿನ್, ಸ್ಪಾಟ್ ವೆಲ್ಡಿಂಗ್ ಮೆಷಿನ್, ಕಟ್ಟಿಂಗ್ ಮೆಷಿನ್, ಏರ್ ಕಂಪ್ರೆಷರ್, ಬೇರಿಂಗ್ ಪುಲ್ಲರ್ ಹಾಗೂ ಇತರ ಅವಶ್ಯವಿರುವ ಉಪಕರಣಗಳನ್ನು ಹೊಂದಿರಬೇಕಾಗಿರುತ್ತದೆ. ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ. 50 ರಷ್ಟು ಅಥವಾ ಗರಿಷ್ಠ ರೂ 5 ಲಕ್ಷಗಳು ಮತ್ತು ಪ.ಜಾತಿ ಹಾಗೂ ಪ.ಪಂಗಡದ ಫಲಾನುಭವಿಗಳಿಗೆ ಶೇ. 75 ರಷ್ಟು ಅಥವಾ ಗರಿಷ್ಠ ರೂ. 7.50 ಲಕ್ಷಗಳ ಮಿತಿಯೊಳಗೆ ಇವೆರಡರಲ್ಲಿ ಯಾವದು ಕಡಿಮೆಯೋ ಅದನ್ನು ಸಹಾಯಧನವನ್ನಾಗಿ ಬ್ಯಾಂಕ್ ಲೋನ್ ಆಧಾರದ ಮೇರೆಗೆ ಒಂದು ಬಾರಿ ನೀಡಲಾಗುವದು.

ಪ್ರೋತ್ಸಾಹ ಧನವನ್ನು ಪಡೆಯಲು ರಾಷ್ಟ್ರೀಕೃತ ಬ್ಯಾಂಕ್‍ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‍ಗಳು, ರಾಜ್ಯ ಸಹಕಾರಿ, ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ಗಳು, ಷೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್, ಸಹಕಾರ ಬ್ಯಾಂಕ್, ನಬಾರ್ಡ್ ಇವುಗಳಿಂದ ಸಾಲ ಪಡೆಯಬೇಕು. ಅನುದಾನ ಲಭ್ಯತೆಗೆ ಅನುಗುಣವಾಗಿ ಪ್ರೋತ್ಸಾಹ ಧನವನ್ನು ನೀಡಲಾಗುವದು.

ಆಯ್ಕೆಯಾದ ಅಭ್ಯರ್ಥಿಯು ಗ್ರಾಮೀಣ ಕೃಷಿ ಯಂತ್ರೋಪಕರಣ/ಸೇವಾ ಕೇಂದ್ರಗಳ ಸ್ಥಾಪನೆಗೆ ಸಂಬಂಧಿಸಿದಂತೆ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು ಹಾಗೂ ಈ ಕೇಂದ್ರಗಳ ಕನಿಷ್ಟ 6 ವರ್ಷಗಳ ತನಕ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕು. ನಿಗದಿತ ಅರ್ಜಿಯನ್ನು ಸಂಬಂಧಿಸಿದ ತಾಲೂಕುಗಳ ಸಹಾಯಕ ಕೃಷಿ ನಿರ್ದೇಶಕರುಗಳ ಕಚೇರಿ ಅಥವ ಜಂಟಿ ಕೃಷಿ ನಿರ್ದೇಶಕರ ಕಚೇರಿಯಿಂದ ಪಡೆದುಕೊಳ್ಳಲು ಕೋರಿದೆ. ಜಿಲ್ಲೆಗೆ 3 ಸೇವಾ ಕೇಂದ್ರಗಳ ಸ್ಥಾಪನೆಗೆ ಗುರಿ ನಿಗದಿಪಡಿಸಲಾಗಿದ್ದು, ಸಾಮಾನ್ಯ ಅಭ್ಯರ್ಥಿಗೆ 1, ಪರಿಶಿಷ್ಟ ಜಾತಿ ಅಭ್ಯರ್ಥಿಗೆ 1 ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗೆ 1. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಆಯ್ಕೆ ಮಾಡಲಾಗು ವದು. ಆಸಕ್ತಿಯುಳ್ಳ ಅಭ್ಯರ್ಥಿಗಳು ನಿಗದಿತ ಅರ್ಜಿಯನ್ನು ಎಲ್ಲಾ ದಾಖಲಾತಿಗಳೊಂದಿಗೆ ತಾ. 31 ರೊಳಗೆ ಸಲ್ಲಿಸುವಂತೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.