ಸೋಮವಾರಪೇಟೆ, ಆ. 14: ಇಲ್ಲಿನ ತಾಲೂಕು ಕೇಂದ್ರದಲ್ಲಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಅವ್ಯವಸ್ಥೆಗಳನ್ನು ರಾಜ್ಯ ಆರೋಗ್ಯ ಸಚಿವರ ಗಮನಕ್ಕೆ ತರಲಾಗುವದು. ಇದರೊಂದಿಗೆ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ವೈದ್ಯರ ಭದ್ರತೆಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವದು ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ತಿಳಿಸಿದರು.

ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ಅವ್ಯವಸ್ಥೆ, ವೈದ್ಯರ ಕೊರತೆ, ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದ ನಂತರ ಮಾಧ್ಯಮದವರೊಂದಿಗೆ ವೀಣಾ ಅಚ್ಚಯ್ಯ ಮಾತನಾಡಿದರು.

ಆಸ್ಪತ್ರೆಗೆ ಭೇಟಿ ನೀಡಿದ ಎಂಎಲ್‍ಸಿ ಅವರಿಗೆ ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ವೈದ್ಯರಾದ ಶರತ್‍ಬಾಬು ಅವರು ವಿವರಣೆ ನೀಡಿದರು. ಸದ್ಯ ಆಸ್ಪತ್ರೆಯಲ್ಲಿ ಕೇವಲ ಮೂವರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಓರ್ವ ವೈದ್ಯರು ಸತತ 48 ಗಂಟೆಗಳ ಕಾಲ ಕಾರ್ಯನಿರ್ವಹಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಈ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿ ಸಲು ಅಸಾಧ್ಯ ವಾದಂತಹ ಪರಿಸ್ಥಿತಿ ನಿರ್ಮಾಣ ವಾಗಿದ್ದು, ಕೆಲಸದ ಒತ್ತಡದೊಂದಿಗೆ ಕೆಲವೊಮ್ಮೆ ರೋಗಿಗಳ ಸಂಬಂಧಿಕರಿಂದ ಹಲ್ಲೆಯತ್ನದಂತಹ ವಿದ್ಯಮಾನಗಳೂ ನಡೆಯುತ್ತಿವೆ. ಈ ಆಸ್ಪತ್ರೆಗೆ ಬರಲು ಯಾವ ವೈದ್ಯರೂ ಮನಸ್ಸು ಮಾಡುತ್ತಿಲ್ಲ.

(ಮೊದಲ ಪುಟದಿಂದ) ತಾನೂ ಸಹ ರಾಜೀನಾಮೆ ನೀಡಿ ಹೊರಡುವ ಬಗ್ಗೆ ಚಿಂತಿಸುತ್ತಿರುವದಾಗಿ ಅಸಹಾಯಕತೆ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ವೀಣಾ ಅಚ್ಚಯ್ಯ, ಗ್ರಾಮೀಣ ಭಾಗದ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವ ವೈದ್ಯರುಗಳನ್ನು ಸಾರ್ವಜನಿಕರೇ ಗೌರವದಿಂದ ಕಾಣಬೇಕು. ಆಸ್ಪತ್ರೆಯಲ್ಲಿನ ವೈದ್ಯರ ಸಮಸ್ಯೆ ಬಗ್ಗೆ ರಾಜ್ಯ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರ ಗಮನ ಸೆಳೆಯುತ್ತೇನೆ. ಇದರೊಂದಿಗೆ ಆಸ್ಪತ್ರೆಯ ಭದ್ರತೆ ದೃಷ್ಟಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿ ಬಂದೋಬಸ್ತ್‍ಗೆ ಸಿಬ್ಬಂದಿ ಯನ್ನು ನಿಯೋಜಿಸುವ ಬಗ್ಗೆಯೂ ಕ್ರಮ ವಹಿಸುವದಾಗಿ ತಿಳಿಸಿದರು.

ಆಸ್ಪತ್ರೆಯ ರಕ್ಷಾ ಸಮಿತಿ ಸಭೆ ಸಮರ್ಪಕವಾಗಿ ನಡೆಯುತ್ತಿಲ್ಲ. ಇದರಿಂದಾಗಿಯೇ ಹಲವಷ್ಟು ಸಮಸ್ಯೆಗಳು ಎದುರಾಗಿದೆ. ಸಮಿತಿಗೆ ರಾಜಕೀಯ ಪಕ್ಷಗಳ ನಾಯಕರು ಗಳನ್ನು ಮಾತ್ರ ಸದಸ್ಯರನ್ನಾಗಿಸುವ ಬದಲು ಸಾರ್ವಜನಿಕ ಮುಖಂಡರನ್ನೂ ನೇಮಿಸಿಕೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ದೀಪಕ್ ಹೇಳಿದರು.

ಶಾಸಕರೇ ಆರೋಗ್ಯ ರಕ್ಷಾ ಸಮಿತಿಯ ಅಧ್ಯಕ್ಷರಾಗಿದ್ದು, ಅವರೇ ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಅಭಿಪ್ರಾಯಿಸಿದರು. ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಂದಕುಮಾರ್, ತಾ.ಪಂ. ಸದಸ್ಯ ಬಿ.ಬಿ. ಸತೀಶ್, ಪ.ಪಂ. ಸದಸ್ಯ ಕೆ.ಎ. ಆದಂ, ಶೀಲಾ ಡಿಸೋಜ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಎ. ಯಾಕೂಬ್, ಪಕ್ಷದ ಕಾರ್ಯಕರ್ತ ರಾದ ಚೇತನ್, ವಿನಿ, ಸುನಿಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.