ಮಡಿಕೇರಿ, ಆ. 14: ಪೊಲೀಸ್ ಇಲಾಖೆಯಲ್ಲಿನ ಉತ್ತಮ ಸೇವೆಗಾಗಿ ಸ್ವಾತಂತ್ರ್ಯೋತ್ಸವ ಅಂಗವಾಗಿ ಕೊಡಮಾಡುವ ಪ್ರತಿಷ್ಠಿತ ರಾಷ್ಟ್ರಪತಿಗಳ ಪ್ರಶಂಸನೀಯ ಪದಕಕ್ಕೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಆಯ್ಕೆಯಾಗಿದ್ದಾರೆ.ಪದಕ ವಿಜೇತರ ಪಟ್ಟಿ ಇಂದು ಬಿಡುಗಡೆ ಯಾಗಿದ್ದು, ಇಲಾಖೆಯಲ್ಲಿನ ಪ್ರಶಂಸನೀಯ ಸೇವೆಗಾಗಿ ನೀಡಲಾಗುವ ಪದಕ 18 ಮಂದಿ ಅಧಿಕಾರಿಗಳಲ್ಲಿ ರಾಜೇಂದ್ರ ಪ್ರಸಾದ್ ಅವರಿಗೂ ಲಭಿಸಿದೆ. ವಿಶಿಷ್ಟ ಸೇವಾ ಪದಕ ಮೂವರು ಮಂದಿಗೆ ಲಭ್ಯವಾಗಿದೆ.

ರಾಜೇಂದ್ರ ಪ್ರಸಾದ್ ಅವರು 1997ರ ಮಾರ್ಚ್‍ನಲ್ಲಿ ಡಿವೈಎಸ್‍ಪಿ ಆಗಿ ಗುಲ್ಬಾರ್ಗದಲ್ಲಿ ಸೇವೆ ಆರಂಭಿಸಿದರು. ನಂತರ 1999 ಅಕ್ಟೋಬರ್‍ನಿಂದ 2002ರ ಜುಲೈವರೆಗೆ ಕೊಡಗು ಜಿಲ್ಲೆಯಲ್ಲಿ ಡಿವೈಎಸ್‍ಪಿಯಾಗಿ ಸೇವೆ ಸಲ್ಲಿಸಿದ್ದರು. ಆನಂತರ ಉಡುಪಿಯಲ್ಲಿ ಡಿವೈಎಸ್‍ಪಿಯಾಗಿ, ಹಾವೇರಿ, ಬೆಳಗಾಂನಲ್ಲಿ ಹೆಚ್ಚುವರಿ ಅಧೀಕ್ಷಕರಾಗಿ, ಮೈಸೂರು ನಗರ ಡಿಸಿಪಿಯಾಗಿ, ಮೈಸೂರಿನ ಪೊಲೀಸ್ ಅಕಾಡೆಮಿ ಉಪನಿರ್ದೇಶಕರಾಗಿ ಸೇವೆ ಸಲ್ಲಿಸಿದ ಬಳಿಕ ಚಾಮರಾಜನಗರ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ, ಉಡುಪಿ ಎಸ್‍ಪಿಯಾಗಿ, ರಾಜ್ಯಭದ್ರತಾ ಗುಪ್ತದಳದ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಬಳಿಕ 2016ರಿಂದ ಕೊಡಗು ಜಿಲ್ಲಾ ಉನ್ನತಾಧಿಕಾರಿಯಾಗಿ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.