ಸೋಮವಾರಪೇಟೆ, ಆ. 15: ಸಮುದಾಯದಲ್ಲಿ ಪರಸ್ಪರ ಬಾಂಧವ್ಯ ಮೂಡಿಸುವದರೊಂದಿಗೆ ಒಗ್ಗಟ್ಟಿನಿಂದ ಮುಂದೆ ಸಾಗಲು ಸಾಮೂಹಿಕ ಆಚರಣೆಗಳು ಸಹಕಾರಿಯಾಗಿವೆ ಎಂದು ಉದ್ಯಮಿ ಬಿ.ಎಸ್. ಸುಂದರ್ ಅಭಿಪ್ರಾಯಿಸಿದರು.ಇಲ್ಲಿನ ಶ್ರೀ ನಾರಾಯಣಗುರು ಸೇವಾ ಸಮಿತಿ ಹಾಗೂ ತುಳುನಾಡು ಬಿಲ್ಲವ ಮಹಿಳಾ ಸಂಘದ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ಜಾನಕಿ ಕನ್ವೆನ್‍ಷನ್ ಹಾಲ್‍ನಲ್ಲಿ ಆಯೋಜಿಸಿದ್ದ ಆಟಿ ಸಂಭ್ರಮೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರೋಟರಿ ಜಿಲ್ಲಾ ಮಾಜಿ ಸಹಾಯಕ ರಾಜ್ಯಪಾಲ ಬಿ.ಎಸ್. ಸದಾನಂದ್ ಮಾತನಾಡಿ, ಇಂದಿನ ಯುವ ಜನಾಂಗಕ್ಕೆ ಸಮಾಜದ ಆಚಾರ-ವಿಚಾರಗಳನ್ನು ಪರಿಚಯಿಸುವ ಕಾರ್ಯವನ್ನು ಇಲ್ಲಿನ ಸಂಘ ಮಾಡುತ್ತಿದೆ. ಇಂದಿನ ಸಂಭ್ರಮೋತ್ಸವದಲ್ಲಿ ನಮ್ಮ ಹಿರಿಯರು ಬಳಸುತ್ತಿದ್ದ ಪಾತ್ರೆ, ಆಯುಧ ಹಾಗೂ ಪರಿಕರಗಳನ್ನು ಪ್ರದರ್ಶನಕ್ಕಿಡುವ ಮೂಲಕ ಸಂಭ್ರಮೋತ್ಸವವನ್ನು ಅರ್ಥಪೂರ್ಣವನ್ನಾಗಿಸಿರುವದು ಉತ್ತಮ ಕಾರ್ಯವಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಅಧ್ಯಕ್ಷತೆಯನ್ನು ನಾರಾಯಣ ಗುರು ಸೇವಾ ಸಮಿತಿಯ ಅಧ್ಯಕ್ಷ ಎನ್.ಡಿ. ಕೃಷ್ಣಪ್ಪ ವಹಿಸಿದ್ದರು. ಸಮಾರಂಭವನ್ನುದ್ದೇಶಿಸಿ ಸುಂಟಿಕೊಪ್ಪ ನಾರಾಯಣಗುರು ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಬಿ.ಎಂ. ಮಣಿ ಮುಖೇಶ್, ಉಪಾಧ್ಯಕ್ಷ ಸುನಿಲ್, ತುಳುನಾಡು ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಬೇಬಿ ಚಂದ್ರಹಾಸ್ ಮಾತನಾಡಿದರು. ವೇದಿಕೆಯಲ್ಲಿ ಸಂಘದ ಮಾಜಿ ಅಧ್ಯಕ್ಷ ಬಿ.ಆರ್. ಚಂದ್ರಹಾಸ್, ಮಾಜಿ ಕಾರ್ಯದರ್ಶಿ ಬಿ.ಆರ್. ಜಯರಾಮ್ ಉಪಸ್ಥಿತರಿದ್ದರು. ಮಹಿಳಾ ಸಂಘದ ಸದಸ್ಯರುಗಳಾದ ಯಶೋಧ, ಈಶ್ವರಿ, ಪವಿತ್ರಾ ಪ್ರಾರ್ಥಿಸಿದರು. ಕೆ.ಎನ್. ನಾಗರಾಜು ಸ್ವಾಗತಿಸಿ, ಮಹಿಳಾ ಸಂಘದ ಕಾರ್ಯದರ್ಶಿ ಈಶ್ವರಿ ವಂದಿಸಿದರು. ಉಪಾಧ್ಯಕ್ಷ ಬಿ.ಎ. ಭಾಸ್ಕರ್ ನಿರೂಪಿಸಿದರು. ಸಂಭ್ರಮೋತ್ಸ ವದಲ್ಲಿ ಹಗ್ಗಜಗ್ಗಾಟ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು.