ಸೋಮವಾರಪೇಟೆ, ಆ. 15: ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಂಧಿನಗರ ಗ್ರಾಮ ಮಾರಕ ರೋಗಗಳಾದ ಡೆಂಗ್ಯೂ, ಮಲೇರಿಯಾವನ್ನು ಹರಡುವ ಕಾರ್ಖಾನೆಯಂತೆ ಮಾರ್ಪಟ್ಟಿದೆ. ಸ್ವಚ್ಛ ಭಾರತ್ ಅಭಿಯಾನ ದೇಶಾದ್ಯಂತ ಜಾರಿಯಲ್ಲಿದ್ದು, ಯೋಜನೆಗೆ ಮಹಾತ್ಮ ಗಾಂಧಿಯವರ ಕನ್ನಡಕವನ್ನು ಬಳಸಿಕೊಳ್ಳಲಾಗಿದೆ. ಮಹಾತ್ಮನ ಹೆಸರನ್ನೇ ಇಟ್ಟುಕೊಂಡಿ ರುವ ಈ ಗ್ರಾಮ ಅಕ್ಷರಶಃ ಕಸದ ತೊಟ್ಟಿಯಾಗಿದೆ.
ಗಾಂಧಿನಗರದ ಮುಖ್ಯ ರಸ್ತೆಯ ಬದಿಯಲ್ಲೇ ತ್ಯಾಜ್ಯ ಸಂಗ್ರಹವಾಗು ತ್ತಿದೆ. ಗ್ರಾಮದ ಈರಪ್ಪ ಎಂಬವರ ಮನೆಯ ಪಕ್ಕದಲ್ಲಿ ಕೊಳೆತು ನಾರುತ್ತಿರುವ ಕಸದ ರಾಶಿ ಕ್ರಿಮಿಕೀಟಗಳ ಆವಾಸಸ್ಥಾನವಾಗಿದ್ದು, ಸಾಂಕ್ರಾಮಿಕ ರೋಗಗಳನ್ನು ಹರಡುವ ಕೇಂದ್ರವಾಗಿದೆ.
ಇದರೊಂದಿಗೆ ಒಕ್ಕಲಿಗರ ಸಮುದಾಯ ಭವನದ ಮುಂಭಾಗದ ರಸ್ತೆಯಲ್ಲಿರುವ ನಬೀಸ ಅವರ ಮನೆಯೆದುರು ಸ್ಥಳೀಯರು ಕಸ ತಂದು ಸುರಿಯುತ್ತಿದ್ದಾರೆ. ಹಳೆಯ ಬಟ್ಟೆ, ದಿನಬಳಕೆಯ ವಸ್ತುಗಳು, ಪ್ಲಾಸ್ಟಿಕ್, ಮಿಕ್ಕಿದ ಅನ್ನ, ಬಾಟಲ್ಗಳು, ತೆಂಗಿನ ಕಾಯಿಯ ಚಿಪ್ಪು, ಟಯರ್ ಸೇರಿದಂತೆ ಕೊಳೆತ ತರಕಾರಿ ಇತ್ಯಾದಿಗಳನ್ನು ಸುರಿಯುತ್ತಿರುವದ ರಿಂದ ಇಡೀ ಆವರಣ ಗಬ್ಬೆದ್ದು ನಾರುತ್ತಿದೆ.
ನಿನ್ನೆಯಷ್ಟೇ ಗಾಂಧಿನಗರ ಗ್ರಾಮದ ವಿವಾಹಿತೆ ಮಹಿಳೆ ಯೋರ್ವರು ನಿಧನರಾಗಿದ್ದು, ಗಬ್ಬೆದ್ದು ನಾರುತ್ತಿರುವ ಗ್ರಾಮದಲ್ಲಿ ಉತ್ಪತ್ತಿಯಾಗುವ ಕ್ರಿಮಿಕೀಟಗಳಿಂದ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಇವರು ಸಾವನ್ನಪ್ಪಿರಬಹುದು ಎಂದು ಸ್ಥಳೀಯರು ಸಂಶಯಿಸಿದ್ದಾರೆ.
ಗಾಂಧಿನಗರ ಗ್ರಾಮದ ಮುಖ್ಯರಸ್ತೆಯ ಒಂದು ಬದಿಯಲ್ಲಿ ನಿರಂತರವಾಗಿ ಸ್ಥಳೀಯರೇ ಕಸ ಸುರಿಯುತ್ತಿದ್ದು, ಅಲ್ಲಲ್ಲಿ ಕಸದ ರಾಶಿ ಕಣ್ಣಿಗೆ ರಾಚುತ್ತಿವೆ. ಇದರೊಂದಿಗೆ ಗ್ರಾಮದ ಶ್ರೀ ದೊಡ್ಡಮಾರಿಯಮ್ಮ ದೇವಾಲಯ ಮುಂಭಾಗದ ರಸ್ತೆಯಲ್ಲಿರುವ ಈರಪ್ಪ ಎಂಬವರ ಮನೆಯ ಮುಂಭಾಗವಂತೂ ಜನರು ನಡೆದಾಡಲೂ ಕಷ್ಟಕರವಾಗಿ ಮಾರ್ಪಟ್ಟಿದೆ.
ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನೆಲ್ಲಾ ತಂದು ರಸ್ತೆಯಲ್ಲೇ ಸುರಿಯುತ್ತಿರುವದರಿಂದ ಮೂಗು ಮುಚ್ಚಿಕೊಂಡು ಜನ ತಿರುಗಾಡ ಬೇಕಿದೆ. ಮಳೆಯ ನೀರು ಹಳೆಯ ಟಯರ್, ಬಾಟಲಿ, ತೆಂಗಿನ ಕಾಯಿಯ ಚಿಪ್ಪು ಇತ್ಯಾದಿಗಳಲ್ಲಿ ಶೇಖರಣೆಗೊಂಡು ಡೆಂಗ್ಯೂ ಹರಡುವ ಸೊಳ್ಳೆಗಳನ್ನು ಉತ್ಪಾದಿಸುತ್ತಿದ್ದರೆ, ಕೊಳೆತು ನಾರುವ ತರಕಾರಿಗಳು ದುರ್ನಾತ ಬೀರುತ್ತಿವೆ. ಮನೆಯಲ್ಲಿ ಮಿಕ್ಕಿದ ಅನ್ನ ಶ್ವಾನಗಳಿಗೆ ಆಹಾರವಾಗುತ್ತಿದ್ದು, ಬೀದಿ ನಾಯಿಗಳ ದಂಡೇ ರಸ್ತೆಯಲ್ಲಿ ಕಂಡುಬರುತ್ತಿದೆ.
ಇಷ್ಟೆಲ್ಲಾ ಅನೈರ್ಮಲ್ಯತೆ ತಾಂಡವವಾಡುತ್ತಿದ್ದರೂ ಸಂಬಂಧಿಸಿದ ಚೌಡ್ಲು ಗ್ರಾಮ ಪಂಚಾಯಿತಿ ಕಂಬಳಿ ಹೊದ್ದು ಮಲಗಿದೆ. ಈ ವಾರ್ಡ್ನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳ ಕಣ್ಣಿಗೂ ಕಸದ ರಾಶಿ ಕಾಣದಿರುವದು ದುರಂತವೇ ಸರಿ.
ಜವಾಬ್ದಾರಿ ಸ್ಥಾನದಲ್ಲಿರುವ ಜನಪ್ರತಿನಿಧಿಗಳು ತ್ಯಾಜ್ಯ ಸಂಗ್ರಹಣೆಗೆ ಬದಲಿ ವ್ಯವಸ್ಥೆ ಕಲ್ಪಿಸುವ ಮೂಲಕ, ರಸ್ತೆಯ ಪಕ್ಕದಲ್ಲಿ ತ್ಯಾಜ್ಯ ಸುರಿಯದಂತೆ ಸ್ಥಳೀಯರ ಮನವೊಲಿಸುವ ಕಾರ್ಯ ಮಾಡಬೇಕಿದೆ. ತಪ್ಪಿದ್ದಲ್ಲಿ ಸ್ಥಳೀಯರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆ ದಟ್ಟವಾಗಿದೆ.
-ವಿಜಯ್ ಹಾನಗಲ್