ಚಿತ್ರ ವರದಿ : ವಾಸು ಎ.ಎನ್

ಸಿದ್ದಾಪುರ, ಆ. 15 : ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಘಟ್ಟದಳದಲ್ಲಿ ಇತ್ತೀಚೆಗೆ ಕಂದಾಯ ಇಲಾಖಾಧಿಕಾರಿಗಳು ಖಾಸಗಿ ಕಾಫಿ ತೋಟವೊಂದರಲ್ಲಿ ಒತ್ತುವರಿ ಮಾಡಿದ ಸರ್ಕಾರಿ ಜಾಗವನ್ನು ತೆರವುಗೊಳಿಸಿದ ಜಾಗದಲ್ಲಿ ಕಸವಿಲೇವಾರಿ ಮಾಡಲು ಜನಪ್ರತಿನಿಧಿಗಳು ಹಾಗೂ ಮಾಲ್ದಾರೆ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬಾಡಗ-ಬಾಣಂಗಾಲ ಗ್ರಾಮದ ಘಟ್ಟದಳದಲ್ಲಿ ಕಂದಾಯ ಇಲಾಖಾಧಿಕಾರಿಗಳು ತೆರವುಗೊಳಿಸಿದ್ದ 5.05 ಎಕರೆ ಸರಕಾರಿ ಜಾಗದಲ್ಲಿ ಸಿದ್ದಾಪುರದ ಗ್ರಾಮ ಪಂಚಾಯಿತಿಯ ಕಸವಿಲೇವಾರಿಗೆ ಜಾಗ ನೀಡುವದಾಗಿ ತಿಳಿದು ಬಂದಿದ್ದು, ಈ ಹಿನ್ನೆಲೆಯಲ್ಲಿ ಯಾವದೇ ಒತ್ತಡವಿದ್ದರೂ ಕೂಡ ಸಿದ್ದಾಪುರ ಗ್ರಾಮ ಪಂಚಾಯಿತಿಗೆ ಕಸವಿಲೇವಾರಿ ಮಾಡಲು ಬಿಡುವದಿಲ್ಲವೆಂದು ಮಾಲ್ದಾರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು, ತಾ.ಪಂ. ಸದಸ್ಯರುಗಳು ವಿರೋಧ ವ್ಯಕ್ತಪಡಿಸಿದ್ದು, ಕಸ ವಿಲೇವಾರಿಗೆ ಜಾಗ ನೀಡಿದಲ್ಲಿ ಉಗ್ರ ಹೋರಾಟ ಮಾಡಲಾಗುವದೆಂದು ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ಘಟ್ಟದಳದಲ್ಲಿ ಕಂದಾಯ ಇಲಾಖೆಯವರು ತೆರವುಗೊಳಿಸಿದ ಜಾಗದಲ್ಲಿ ಜಮಾಯಿಸಿದ ಮಾಲ್ದಾರೆ ಪಂಚಾಯಿತಿ ವ್ಯಾಪ್ತಿಯ ನೂರಾರು ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳು ಸಭೆ ನಡೆಸಿ ಸಿದ್ದಾಪುರ ಗ್ರಾಮ ಪಂಚಾಯಿತಿಗೆ ಕಸವಿಲೇವಾರಿ ಮಾಡಲು ಜಾಗ ಬಿಡುವದಿಲ್ಲವೆಂದು ಸಭೆಯಲ್ಲಿ ನಿರ್ಣಯ ಕೈಗೊಂಡರು.

ಈ ಸಂದರ್ಭ ಮಾತನಾಡಿದ ಗ್ರಾ.ಪಂ, ಅಧ್ಯಕ್ಷೆ ರಾಣಿ ಘಟ್ಟದಳದಲ್ಲಿ ತೆರವುಗೊಳಿಸಿದ ಸರಕಾರಿ ಭೂಮಿ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದ್ದು ಈ ಹಿನ್ನೆಲೆಯಲ್ಲಿ ಯಾವದೇ ಕಾರಣಕ್ಕೂ ಸಿದ್ದಾಪುರ ಪಂಚಾಯಿತಿ ಅಥವಾ ಇತರ ಪಂಚಾಯಿತಿಗೆ ಕಸವಿಲೇವಾರಿ ಮಾಡಲು ಬಿಡುವದಿಲ್ಲವೆಂದು ಆಕ್ಷೇಪಣೆ ವ್ಯಕ್ತಪಡಿಸಿದರು.

ಮಾಲ್ದಾರೆ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ವಲಯ ಕಾಂಗ್ರೆಸ್ ಅಧ್ಯಕ್ಷ ಸಜೀ ಥೋಮಸ್ ಮಾತನಾಡಿ, ಕಂದಾಯ ಇಲಾಖಾಧಿಕಾರಿಗಳು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಒತ್ತುವರಿ ಜಾಗವನ್ನು ತೆರವುಗೊಳಿಸಿರುವದು ಸ್ವಾಗತಾರ್ಹವಾಗಿದೆ. ಆದರೆ ಸದರಿ ಜಾಗವು ಮಾಲ್ದಾರೆ ಪಂಚಾಯಿತಿಗೆ ಸೇರಿದಾಗಿದ್ದು, ಮಾಲ್ದಾರೆ ಗ್ರಾಮ ಪಂಚಾಯಿತಿ ದೊಡ್ಡ ಗ್ರಾಮ ಪಂಚಾಯಿತಿಯಾಗಿದ್ದು. ತೆರವುಗೊಳಿಸಿದ 5 ಎಕರೆ ಜಾಗದಲ್ಲಿ ಒಂದು ಎಕರೆ ಜಾಗವನ್ನು ಮಾಲ್ದಾರೆ ಗ್ರಾಮ ಪಂಚಾಯಿತಿಗೆ ಕಸ ವಿಲೇವಾರಿ ಮಾಡಲು ಮೀಸಲಿಟ್ಟು ಉಳಿದ ಜಾಗವನ್ನು ಗ್ರಾಮದಲ್ಲಿ ತಲತಲಾಂತರದಿಂದಲೂ ಕಾಫಿ ತೋಟದಲ್ಲಿ ವಾಸ ಮಾಡಿಕೊಂಡಿರುವ ಕಾರ್ಮಿಕರು ಹಾಗೂ ನಿವೇಶನ ರಹಿತರಿಗೆ ಜಾಗ ನೀಡಬೇಕೆಂದು ಒತ್ತಾಯಿಸಿದರು. ಅಲ್ಲದೆ ಕೂಲಿ ಕಾರ್ಮಿಕರಿಗೆ ಸ್ವಂತ ಸೂರು ಇಲ್ಲದೆ ಅತಂತ್ರದಲ್ಲಿರುವ ನಿವೇಶನ ರಹಿತರನ್ನು ಗುರುತಿಸಿ ಅವರಿಗೆ ನಿವೇಶನ ನೀಡಬೇಕೆಂದು ಜಿಲ್ಲಾಡಳಿಕ್ಕೆ ಮನವಿ ಮಾಡಿಕೊಂಡರು. ತೆರವುಗೊಳಿಸಿದ ಜಾಗದಲ್ಲಿ ಸಿದ್ದಾಪುರ ಗ್ರಾಮ ಪಂಚಾಯಿತಿಗೆ ಕಸವಿಲೇವಾರಿ ಮಾಡಲು ಇದೇ ಜಾಗವನ್ನು ಗುರುತಿಸಿ ಜಿಲ್ಲಾಡಳಿತ ಕ್ರಮ ಕೈಗೊಂಡಿರುವÀದು ಸರಿಯಾದ ಕ್ರಮವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮಾಜಿ ತಾ.ಪಂ ಸದಸ್ಯ ಹಾಗೂ ಗ್ರಾಮಸ್ಥರಾದ ಸಿ.ಎ. ಹಂಸ ಮಾತನಾಡಿ, ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾಕಷ್ಟು ಸರಕಾರಿ ಜಾಗವನ್ನು ದೊಡ್ಡ ಕಂಪೆನಿಗಳ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದು ಇದನ್ನು ತೆರವುಗೊಳಿಸಿ ಬಡವರಿಗೆ ಹಾಗೂ ನಿವೇಶನ ರಹಿತರಿಗೆ ನೀಡುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದರು. ತೆರವುಗೊಳಿಸಿದ ಜಾಗದಲ್ಲಿ ಸಿದ್ದಾಪುರ ಗ್ರಾಮ ಪಂಚಾಯಿತಿಯ ಕಸವಿಲೇವಾರಿಗೆ ವಿರೋದ ವ್ಯಕ್ತಪಡಿಸಿದ ಅವರು ಈ ಭಾಗದಲ್ಲಿ ಕಾವೇರಿ ನದಿಗೆ ಸಂಪರ್ಕ ಕಲ್ಪಿಸುವ ತೋಡು ಹರಿಯುತ್ತಿದ್ದು ಅಲ್ಲದೆ ಸಾರ್ವಜನಿಕರು ಉಪಯೋಗಿಸುವ ಏಕೈಕ ತೆರೆದ ಬಾವಿ ಇದ್ದು ಈ ಜಾಗದಲ್ಲಿ ಕಸವಿಲೇವಾರಿ ಮಾಡಿದ್ದಲ್ಲಿ ಸಮಸ್ಯೆ ಎದುರಾಗುವದೆಂದು ತಿಳಿಸಿದ ಅವರು ಬಜೆಗೊಲ್ಲಿ ಸಮೀಪ ಆಲೆತೋಪುವಿನಲ್ಲಿ ಆ ಭಾಗದ ನಿವಾಸಿಗಳಿಗೆ ಇಕ್ಕಟ್ಟಾದ ರಸ್ತೆಯಿದ್ದು ರಸ್ತೆಯನ್ನು ಅಗಲೀಕರಣ ಗೊಳಿಸಬೇಕೆಂದು ಜಿಲ್ಲಾಡಳಿತ ಹಾಗೂ ತಹಶೀಲ್ದಾರರನ್ನು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಜು ಮಾತನಾಡಿ, ಇತ್ತೀಚೆಗೆ ತೆರವುಗೊಳಿಸಿದ ಜಾಗದಲ್ಲಿ ಮಾಲ್ದಾರೆ ಗ್ರಾಮ ಪಂಚಾಯಿತಿಗೆ ನಿವೇಶನ ರಹಿತರು ನೀಡಿರುವ 850 ಅರ್ಜಿಗಳ ಫಲಾನುಭವಿಗಳಿಗೆ ಮನೆ ನಿರ್ಮಿಸಲು ಸ್ಥಳೀಯ ನಿವಾಸಿಗಳಿಗೆ ನಿವೇಶನಗಳನ್ನು ನೀಡಬೇಕೆಂದು ಒತ್ತಾಯಿಸಿದರು.

ಗ್ರಾ.ಪಂ. ಸದಸ್ಯ ಸತೀಶ್ ಮಾತನಾಡಿ, ಮಾಲ್ದಾರೆ ಪಂಚಾಯಿತಿಗೆ ಸೇರಿದ್ದ ಘಟ್ಟದಳದಲ್ಲಿ ತೆರವುಗೊಳಿಸಿದ ಜಾಗದಲ್ಲಿ ಇರುವ ಎಲ್ಲಾ ಮರಗಳನ್ನು ಬಹಿರಂಗ ಹರಾಜು ಮಾಡುವಂತೆ ಜಿಲ್ಲಾಡಳಿಕ್ಕೆ ಒತ್ತಾಯಿಸಿದರು. ಸಿದ್ದಾಪುರ ಪಂಚಾಯಿತಿಗೆ ಕಸವಿಲೇವಾರಿ ಮಾಡಲು ಜಾಗವನ್ನು ನೀಡಿದ್ದಲ್ಲಿ ಪ್ರತಿಭಟನೆ ಮಾಡುವದಾಗಿ ಹೇಳಿದರು.

ತಾ.ಪಂ. ಸದಸ್ಯೆ ಚಿನ್ನಮ್ಮ ಮಾತನಾಡಿ ಇತ್ತೀಚೆಗೆ ಕಂದಾಯ ಇಲಾಖಾಧಿಕಾರಿಗಳು ತೆರವುಗೊಳಿಸಿದ ಜಾಗದಲ್ಲಿ ಸಿದ್ದಾಪುರ ಪಂಚಾಯಿತಿಯ ಕಸವಿಲೇವಾರಿ ಮಾಡಲು ಕಂದಾಯ ಇಲಾಖಾಧಿಕಾರಿಗಳು ಕೈಗೊಂಡಿರುವ ತೀರ್ಮಾನಕ್ಕೆ ತಮ್ಮ ವಿರೋಧವಿದ್ದು ಕಸವಿಲೇವಾರಿ ಮಾಡಲು ಸಿದ್ದಾಪುರ ವ್ಯಾಪ್ತಿಯಲ್ಲಿ ಬದಲೀ ಜಾಗವನ್ನು ಕಂದಾಯ ಇಲಾಖಾಧಿಕಾರಿಗಳು ಕಂಡುಹಿಡಿದು ಜಾಗ ಕಲ್ಪಿಸುವಂತೆ ಒತ್ತಾಯಿಸಿದರು. ಅಲ್ಲದೆ ಗ್ರಾಮಸ್ಥರು ನಡೆಸುವ ಹೋರಾಟಕ್ಕೆ ತಾವು ಬೆಂಬಲ ಸೂಚಿಸುವದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾಲ್ದಾರೆ ಗ್ರಾ. ಪಂ. ಸದಸ್ಯರುಗಳಾದ ಬಿ.ಡಿ. ಮುತ್ತಪ್ಪ ,ಉಮೇಶ, ಕರುಂಬಯ್ಯ, ವಾರಿಜ, ಪಾತುಮ್ಮ, ಪವಿತ್ರ ಹಾಗೂ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು. ನಂತರ ಗ್ರಾಮಸ್ಥರು ತೆರವುಗೊಳಿಸಿದ ಸ್ಥಳದಲ್ಲಿ ಸಿದ್ದಾಪುರ ಗ್ರಾಮದ ಕಸವಿಲೇವಾರಿ ಮಾಡಲು ವಿರೋಧ ವ್ಯಕ್ತಪಡಿಸಿ ಸಹಿ ಸಂಗ್ರಹಿಸಿದ ಮನವಿ ಪತ್ರವನ್ನು ಮಾಲ್ದಾರೆ ಗ್ರಾ.,ಪಂ. ಅಧ್ಯಕ್ಷೆ ರಾಣಿ ಅವರಿಗೆ ನೀಡಿದರು.