ಕುಶಾಲನಗರ, ಆ. 15: ಸ್ವಾತಂತ್ರ್ಯದ ಸಂದರ್ಭ ಅಖಂಡ ಭಾರತ ಮತೀಯ ಆಧಾರದ ಮೇಲೆ ಛಿದ್ರವಾಗಿ ತ್ರಿಖಂಡವಾಗಲು ಅಂದಿನ ಕಾಂಗ್ರೆಸ್ ಮತ್ತು ಬ್ರಿಟೀಷರ ಕುತಂತ್ರ ಪ್ರಮುಖ ಕಾರಣ ಎಂದು ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.

ಹಿಂದೂ ಜಾಗರಣಾ ವೇದಿಕೆ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಸ್ಥಳೀಯ ರೈತ ಸಹಕಾರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಮಂದಿ ಪ್ರಾಣತ್ಯಾಗ ಮಾಡಿದ್ದಾರೆ. ಆ ಪೈಕಿ ಕೇವಲ ಬೆರಳೆಣಿಕೆ ನಾಯಕರನ್ನು ಮಾತ್ರ ಸ್ಮರಿಸಲಾಗುತ್ತಿದೆ. ಇತಿಹಾಸದ ಬಗ್ಗೆ ಪೂರ್ಣ ಅರಿವು ಮೂಡಿಸುವದರೊಂದಿಗೆ ಅಖಂಡ ಭಾರತದ ನಿಮಾರ್ಣ ಅಗತ್ಯತೆಯಿದೆ ಎಂದರು.

ಸ್ವಾತಂತ್ರ್ಯದ ಹೆಸರಿನಲ್ಲಿ ಬ್ರಿಟೀಷರ ಹಾಗೂ ಕಾಂಗ್ರೆಸ್ ನಾಯಕರ ಕುತಂತ್ರದಿಂದಾಗಿ ದೇಶ ವಿಭಜನೆಯಾಯಿತು. ಇದರೊಂದಿಗೆ ಕೇಸರಿ ಧ್ವಜವನ್ನು ಕೂಡ ಧರ್ಮಗಳಿಗೆ ಅನುಗುಣವಾಗಿ ವಿಭಜಿಸುವ ಮೂಲಕ ತಿರಂಗವಾಗಿ ಮಾರ್ಪಾಡುಗೊಳಿಸಲಾಯಿತು. ಶಾಂತಿಯ ಹೆಸರಿನಲ್ಲಿ ಹಿಂದೂಗಳನ್ನು ದುರ್ಬಲಗೊಳಿಸುವದರೊಂದಿಗೆ ಹಿಂದೂ ಸಮಾಜವನ್ನು ಪ್ರಜ್ಞಾಹೀನ ಸ್ಥಿತಿಗೆ ತರುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ಯಾವದೇ ಕಡೆ ಹಿಂದೂಗಳು ಗಲಭೆ ಆರಂಭಿಸಿದ ಪುರಾವೆಗಳಿಲ್ಲ. ತಮ್ಮನ್ನು ಆಕ್ರಮಿಸಲು ಬರುವ ಇತರರೊಡನೆ ಆತ್ಮರಕ್ಷಣೆಗಾಗಿ ಹೋರಾಡುತ್ತಿದ್ದಾರೆ ಎಂದ ಪ್ರಭಾಕರ್ ಭಟ್, ಮತಾಂತರದ ಬಗ್ಗೆ ಸಮಾಜ ಜಾಗೃತಿಗೊಳ್ಳಬೇಕಾಗಿದೆ ಎಂದರು.

ಹಲವಾರು ಜಿಲ್ಲೆಗಳು ಈಗಾಗಲೇ ಇಸ್ಲಾಮೀಕರಣಗೊಂಡಿದ್ದು ಕೊಡಗು ಜಿಲ್ಲೆಯಲ್ಲಿ ಕೂಡ ಇಸ್ಲಾಮೀಕರಣ ಲಕ್ಷಣಗಳು ಕಂಡುಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಹಿಂದೂಗಳ ಮೇಲಿನ ದಬ್ಬಾಳಿಕೆ ಕೊನೆಗಾಣಬೇಕಿದೆ. ಲವ್ ಜಿಹಾದ್, ಗೋಹತ್ಯೆ ಮೊದಲಾದವುಗಳನ್ನು ನಿಗ್ರಹಿಸಲು ಹಿಂದೂಗಳು ಒಗ್ಗೂಡಿ ಹೋರಾಡಬೇಕು ಎಂದರು.

ಹಿಂದೂ ಜಾಗರಣಾ ವೇದಿಕೆಯ ಉತ್ತರ ಪ್ರಾಂತ್ಯದ ಸಂಚಾಲಕ ಶಿವಾನಂದ ಬಡಿಗೇರ್ ಪ್ರಾಸ್ತಾವಿಕ ನುಡಿಗಳಾಡಿದರು. ಹಿಂದೂ ಜಾಗರಣಾ ವೇದಿಕೆ ಪ್ರಮುಖರಾದ ಚಕ್ಕೆರ ಮನು ಮತ್ತಿತರರು ಇದ್ದರು.