ಮಡಿಕೇರಿ, ಆ. 14: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕೊಡಗು ಜಿಲ್ಲೆಯನ್ನು ತೀರಾ ಕಡೆಗಣಿಸುತ್ತಿದೆ ಎಂದು ಶಾಸಕದ್ವಯರಾದ ಕೆ.ಜಿ. ಬೋಪಯ್ಯ ಹಾಗೂ ಎಂ.ಪಿ. ಅಪ್ಪಚ್ಚುರಂಜನ್ ಇವರುಗಳು ಆರೋಪಿಸಿದ್ದಾರೆ.ಪತ್ರಿಕಾಭವನದಲ್ಲಿಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್, ರಾಜ್ಯ ಸರ್ಕಾರ ಬಜೆಟ್‍ನಲ್ಲಿ ಕೊಡಗಿಗೆ 200 ಕೋಟಿ ರೂ. ಗಳನ್ನು ಘೋಷಿಸಿತ್ತಾದರೂ ಕೇವಲ 41 ಕೋಟಿ ರೂ.ಗಳು ಮಾತ್ರ ಬಿಡುಗಡೆಗೊಂಡಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅನುದಾನ ಜಿಲ್ಲೆಗೆ ಬಿಡುಗಡೆಗೊಂಡು ಅಭಿವೃದ್ಧಿ ಕೆಲಸಗಳೂ ಕೂಡ ಉತ್ತಮವಾಗಿ ನಡೆದಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಘೋಷಿಸಿದ ಅನುದಾನ ಬಿಡುಗಡೆಗೊಳ್ಳದೆ ಕೊಡಗಿನ ಅಭಿವೃದ್ಧಿ ನಿಂತ ನೀರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ರಾಜ್ಯ ಸರ್ಕಾರದಿಂದ ಹಣ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಗುತ್ತಿಗೆದಾರರು ಕೂಡ ಹಿಂದೇಟು ಹಾಕುತ್ತಿದ್ದಾರೆ. ಕೊಡಗಿನಲ್ಲಿ ಧಾರಾಕಾರ ಮಳೆಯಾಗಬೇಕು. ಇದರಿಂದ ರಾಜ್ಯಕ್ಕೆ ಉಪಯೋಗವಾಗಬೇಕು ಎಂದು ಮಾತ್ರ ಆಶಿಸುವ ಸರ್ಕಾರ ಕೊಡಗಿನ ಜನರ ಕಣ್ಣೀರನ್ನು ಒರೆಸುವ ಕೆಲಸ ಮಾಡುತ್ತಿಲ್ಲ ಎಂದು ದೂರಿದರು.

ಕಸ್ತೂರಿ ರಂಗನ್ - ಸರ್ಕಾರದ ನಿರ್ಲಕ್ಷ್ಯ

ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸ ಮಾಡುತ್ತಿದೆ. ರಾಜ್ಯ ಸರ್ಕಾರ ನೇಮಿಸಿದ ತಜ್ಞರ ಸಮಿತಿ ಕಸ್ತೂರಿರಂಗನ್ ವರದಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ಅಸಮರ್ಪಕ. ವರದಿಯೆ ಸಮಸ್ಯೆಗೆ ಕಾರಣವಾಗಿದೆ.

(ಮೊದಲ ಪುಟದಿಂದ) ಕೊಡಗು ಸೇರಿದಂತೆ ಮಲೆನಾಡು ವ್ಯಾಪ್ತಿಯ ಶಾಸಕರು ಹಾಗೂ ಸಂಸದರು ಇತ್ತೀಚೆಗೆ ದೆಹಲಿಯಲ್ಲಿ ಕೇಂದ್ರ ಪರಿಸರ ಖಾತೆ ಸಚಿವ ಹರ್ಷವರ್ಧನ್ ಅವರನ್ನು ಭೇಟಿ ಮಾಡಿ ಚರ್ಚಿಸಲಾಯಿತು. ಈ ಸಂದರ್ಭ ರಾಜ್ಯ ಸರ್ಕಾರ ನೀಡಿರುವ ವರದಿಯನ್ವಯ ಕೇಂದ್ರ ಸರ್ಕಾರ ಕ್ರಮಕೈಗೊಂಡಿದೆ ಹೊರತಾಗಿ ಕೇಂದ್ರ ಸರ್ಕಾರ ಸ್ವತಂತ್ರವಾಗಿ ತೀರ್ಮಾನ ಕೈಗೊಂಡಿಲ್ಲ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ ಎಂದು ಬೋಪಯ್ಯ ಮಾಹಿತಿಯಿತ್ತರು.

ರಾಜ್ಯ ಸರ್ಕಾರ ಜನಾಭಿಪ್ರಾಯಕ್ಕೆ ಮನ್ನಣೆ ನೀಡದೆ ಏಕ ಪಕ್ಷೀಯವಾಗಿ ವರದಿ ತಯಾರಿಸಿ ಸಲ್ಲಿಸಿರುವದು ಸರಿಯಲ್ಲ. ಕೇರಳ ಸರ್ಕಾರ ಸಮರ್ಪಕ ವರದಿ ತಯಾರಿಸಿ ಕೇಂದ್ರಕ್ಕೆ ಸಲ್ಲಿಸಿ, ಸಮಸ್ಯೆಗೆ ಪರಿಹಾರೋಪಾಯ ಕಂಡುಕೊಂಡಿರುವಾಗ ರಾಜ್ಯ ಸರ್ಕಾರಕ್ಕೆ ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದ ಮಾಜಿ ಸ್ಪೀಕರ್ ಕೇಂದ್ರ ಸರ್ಕಾರ ಮತ್ತೊಮ್ಮೆ ಜನಾಭಿಪ್ರಾಯಕ್ಕೆ ಅವಕಾಶ ನೀಡುವ ಸಾಧ್ಯತೆಯಿದ್ದು, ಆ ಅವಕಾಶವನ್ನಾದರೂ ಸಮರ್ಪಕವಾಗಿ ರಾಜ್ಯ ಸರ್ಕಾರ ಬಳಸಿಕೊಳ್ಳುವಂತಾಗಲಿ ಎಂದು ಸಲಹೆಯಿತ್ತರು.

ಒತ್ತುವರಿ ಜಾಗ ಮಂಜೂರು

ಕಂದಾಯ ಇಲಾಖೆಯಲ್ಲಿದ್ದ ಸಿ &amdiv; ಡಿ ಜಾಗ. ಅರಣ್ಯ ಇಲಾಖೆಗೆ ಹಸ್ತಾಂತರಿಸಲ್ಪಟ್ಟು ಒತ್ತುವರಿಯಾಗಿದ್ದ ಸಿ&amdiv;ಡಿ ವರ್ಗೀಕೃತ ಜಾಗವನ್ನು ಸಕ್ರಮಗೊಳಿಸಲು ಸರ್ಕಾರ ಸಮ್ಮತ್ತಿಸಿದೆ. ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಅವರ ಆಸಕ್ತಿಯಿಂದಾಗಿ ಇದು ಸಾಧ್ಯವಾಗಿದೆ ಎಂದು ಶಾಸಕ ರಂಜನ್ ಹೇಳಿದರು. ಸಿ &amdiv; ಡಿ ಜಮೀನುಗಳಲ್ಲಿ ಸಕ್ರಮ ಕೋರಿ ಸೋಮವಾರಪೇಟೆ ತಾಲೂಕಿನಲ್ಲಿ 4368.20 ಎಕರೆ ಇದ್ದು, 3032 ಅರ್ಜಿಗಳು ಬಂದಿದೆ. ಮಡಿಕೇರಿ ತಾಲೂಕಿನ 1249 ಎಕರೆಗೆ 523 ಅರ್ಜಿ, ವೀರಾಜಪೇಟೆ ತಾಲೂಕಿನ 488 ಎಕರೆಗೆ 114 ಅರ್ಜಿ ಸೇರಿದಂತೆ ಒಟ್ಟು 6105 ಎಕರೆಗೆ 3669 ಅರ್ಜಿಗಳು ಸಲ್ಲಿಸಲ್ಪಟ್ಟಿವೆ ಅವರು ಮಾಹಿತಿಯಿತ್ತರು. ಕಾಡಾನೆ ಹಾವಳಿಗೆ ಸಂಬಂಧಿಸಿದಂತೆ ಅರಣ್ಯದಲ್ಲಿ ತೇಗದ ಮರ ಕಡಿದು ಆನೆಗಳಿಗೆ ಆಹಾರವಾಗುವ ಮರಗಳನ್ನು ಬೆಳೆಯಲು ರಾಜ್ಯ ಸರ್ಕಾರ ಮುಂದಾಗುವದಾದರೆ ಕೇಂದ್ರದಿಂದ ಅನುಮತಿ ತರಲು ಸಿದ್ಧ ಎಂದು ರಂಜನ್ ನುಡಿದರು.