ಗೋಣಿಕೊಪ್ಪಲು, ಆ. 15: ಹರಿದು ಹಂಚಿ ಹೋದ ಭರತಭೂಮಿ ಒಂದಾಗಲೆಂಬ ಸಂಕಲ್ಪದೊಂದಿಗೆ ಕುಟ್ಟದಲ್ಲಿ 10 ವರ್ಷಗಳ ನಂತರ ದೇಶಾಭಿಮಾನಿ ಹಿಂದೂಗಳಿಂದ ಪಂಜಿನ ಮೆರವಣಿಗೆ ನಡೆಯಿತು. 1947ರ ಆಗಸ್ಟ್ 14 ರಂದು ತುಂಡಾದ ಭರತ ಭೂಮಿಯ ಭಾಗಗಳೆಲ್ಲವೂ ಮತ್ತೆ ಒಂದಾಗಲೆಂಬ ಧ್ಯೇಯ ವಾಕ್ಯದೊಂದಿಗೆ ಕುಟ್ಟ ಮುಖ್ಯರಸ್ತೆಯಲ್ಲಿ ಸುಮಾರು ಒಂದು ಗಂಟೆ ಅವಧಿಯ ಮೆರವಣಿಗೆ ದೇಶಭಕ್ತ ಯುವಕ ಯುವತಿಯರ ಉದ್ಘೋಷದೊಂದಿಗೆ ನಡೆಯಿತು.

ಬಸ್ ನಿಲ್ದಾಣ (ಸರ್ಕಾರಿ ಆಸ್ಪತ್ರೆ ಮುಂಭಾಗ)ದಿಂದ ರಾತ್ರಿ 7.30 ಗಂಟೆಗೆ ಆರಂಭಗೊಂಡ ಪಂಜಿನ ಮೆರವಣಿಗೆಗೂ ಮುನ್ನ ತಮಿಳರ ಮುತ್ತು ಎಂಬವರಿಗೆ ಸೇರಿದ ಎರಡು ಗೋವುಗಳಿಗೆ ಪೂಜೆ ಸಲ್ಲಿಸಲಾಯಿತು. ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಕುಟ್ಟ ಘಟಕದ ನೇತೃತ್ವದಲ್ಲಿ ಜರುಗಿದ ಸಂಕಲ್ಪ ದಿನದ ಪಂಜಿನ ಮೆರವಣಿಗೆಯಲ್ಲಿ ಜಿಲ್ಲೆ ಹಾಗೂ ಹೊರಜಿಲ್ಲೆಯ ವಿಎಚ್‍ಪಿ ಮುಖಂಡರು, ಬಜರಂಗದಳ ಪ್ರಮುಖರು, ಜನಪ್ರತಿನಿಧಿಗಳು, ವೀರಾಜಪೇಟೆ ತಾಲೂಕಿನ ಹಿಂದೂ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಭಾರತಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶೋಭಾಯಾತ್ರೆಯನ್ನು ಶಾಸಕ ಕೆ.ಜಿ. ಬೋಪಯ್ಯ ನೆರವೇರಿಸಿದರು. ಕೇರಳ ಮಾನಂದವಾಡಿಯ ಮಹಿಳೆಯರು ಚಂಡೆ ವಾದ್ಯದ ಹಿಮ್ಮೇಳದೊಂದಿಗೆ ‘ಬೊಲೋ ಭಾರತ್ ಮಾತಾಕಿ ಜೈ’, ‘ಕೆಚ್ಚಿನಿಂದ ಹೇಳು ನಾನೊಬ್ಬ ಹಿಂದು’ ಇತ್ಯಾದಿ ಘೋಷಣೆಗಳು ಯುವಕ, ಯುವತಿಯರಿಂದ ತೂರಿ ಬರುವ ಮೂಲಕ ಭಗವಾಧ್ವಜದ ಹಾರಾಟ, ಪಂಜಿನ ಬೆಳಕು ಇತ್ಯಾದಿಗಳಿಂದ ಕುಟ್ಟ ಸಂಪೂರ್ಣ ಕೇಸರಿಮಯವಾಗಿ ಕಂಡು ಬಂದಿತು.

ತಾಲೂಕಿನ ವೀರಾಜಪೇಟೆ, ಅಮ್ಮತ್ತಿ, ಸಿದ್ದಾಪುರ, ಗೋಣಿಕೊಪ್ಪಲು, ಕಾನೂರು, ಬಾಳೆಲೆ, ತಿತಿಮತಿ, ಪೆÇನ್ನಂಪೇಟೆ, ಹುದಿಕೇರಿ, ಬಿರುನಾಣಿ, ಶ್ರೀಮಂಗಲ, ಕುಟ್ಟ, ನಾಲ್ಕೇರಿ, ಟಿ. ಶೆಟ್ಟಿಗೇರಿ, ಬೀರುಗ ವಿಭಾಗದ ಹಿಂದೂಗಳು ಅಧಿಕವಾಗಿ ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಕುಟ್ಟ ಕೊಡವ ಸಮಾಜದಲ್ಲಿ ದಿನದ ಮಹತ್ವ ಕುರಿತು ಬಜರಂಗದಳ ಕರ್ನಾಟಕ (ದಕ್ಷಿಣ) ಪ್ರಾಂತ ಅಖಾಡ ಪ್ರಮುಖ್ ರಂಗನಾಥ್ ದಿಕ್ಸೂಚಿ ಭಾಷಣ ಮಾಡಿದರು.

ಮೆರವಣಿಗೆ ಸಂದರ್ಭ ಇಲ್ಲಿನ ಆಟೋ ನಿಲ್ದಾಣದಲ್ಲಿ ಭಗವಾಧ್ವಜಾರೋಹಣವನ್ನು ನೆರವೇರಿಸಲಾಯಿತು.

ಕುಟ್ಟ ಕಾಫಿ ಬೆಳೆಗಾರ ಮಚ್ಚಮಾಡ ಡಾಲಿ ಚಂಗಪ್ಪ ಅಧ್ಯಕ್ಷತೆಯಲ್ಲಿ ಕೊಡವ ಸಮಾಜದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಎಚ್‍ಪಿ ಜಿಲ್ಲಾಧ್ಯಕ್ಷ ಟಾಟಾ ಬೋಪಯ್ಯ, ಕೊಡಗು ಜಿಲ್ಲೆಯ ನಿಕಟಪೂರ್ವ ಸಂಘ ಚಾಲಕರಾದ ಮಚ್ಚಾರಂಡ ಮಣಿ ಕಾರ್ಯಪ್ಪ, ಶಾಸಕ ಕೆ.ಜಿ. ಬೋಪಯ್ಯ, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರಾದ ಮೂಕೊಂಡ ವಿಜು ಸುಬ್ರಮಣಿ, ಮೂಕೊಂಡ ಶಶಿ ಸುಬ್ರಮಣಿ, ಸದಸ್ಯರಾದ ಮುರುಳಿ ಕರುಂಬಯ್ಯ, ಅಚ್ಚಪಂಡ ಮಹೇಶ್, ಸಿ.ಕೆ. ಬೋಪಣ್ಣ, ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಅರುಣ್‍ಭೀಮಯ್ಯ, ಮಾಜಿ ಜಿ.ಪಂ. ಅಧ್ಯಕ್ಷೆ ಶರೀನ್ ಸುಬ್ಬಯ್ಯ, ತಾ.ಪಂ. ಸದಸ್ಯ ಅಜಿತ್ ಕರುಂಬಯ್ಯ, ರಾಜ್ಯ ಎಫ್‍ಕೆಸಿಸಿಐ ನಿರ್ದೇಶಕ ಗಿರೀಶ್‍ಗಣಪತಿ, ಎಪಿಎಂಸಿ ನಿರ್ದೇಶಕರಾದ ಕಿಲನ್‍ಗಣಪತಿ, ಸುಜುಪೂಣಚ್ಚ, ಮಾಜಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮನುಮುತ್ತಪ್ಪ, ಜಿಲ್ಲಾ ವಿಎಚ್‍ಪಿ ಕಾರ್ಯದರ್ಶಿ ಡಿ. ನರಸಿಂಹ, ತಾಲೂಕು ಕಾರ್ಯಾಧ್ಯಕ್ಷ ಉದ್ದಪಂಡ ಜಗತ್, ಗೌರವಾಧ್ಯಕ್ಷ ನಾಣಮಂಡ ವೇಣು ಮಾಚಯ್ಯ, ಬಜರಂಗದಳದ ಜಿಲ್ಲಾ ಸಂಚಾಲಕ ಅಜಿತ್ ಕುಮಾರ್, ತಾಲೂಕು ಸಂಚಾಲಕ ವಿವೇಕ್ ರೈ, ಡಿಸಿಸಿ ಬ್ಯಾಂಕ್ ಸದಸ್ಯ ಹೊಟ್ಟೇಂಗಡ ರಮೇಶ್, ಅಜ್ಜಮಾಡ ಸುಬ್ರಮಣಿ, ಪ್ರಿನ್ಸ್ ಗಣಪತಿ, ವಿನು ಮಾಚಯ್ಯ, ಆದೇಂಗಡ ವಿನು ಚಂಗಪ್ಪ, ಮಚ್ಚಾಮಾಡ ಸುಮಂತ್, ಬೊಟ್ಟಂಗಡ ರಾಜು, ಗೋಣಿಕೊಪ್ಪಲಿನ ಸುರೇಶ್ ರೈ, ರಾಜೇಶ್ ಮುಂತಾದವರು ಪಾಲ್ಗೊಂಡಿದ್ದರು.ಪಂಜಿನ ಮೆರವಣಿಗೆ ಹಾಗೂ ಅಖಂಡ ಭಾರತ ಸಂಕಲ್ಪದಿನ ಆಯೋಜನೆಯಲ್ಲಿ ಕುಟ್ಟ ವಿಶ್ವ ಹಿಂದೂಪರಿಷತ್ತಿನ ಸಂಚಾಲಕ ಮುಕ್ಕಾಟಿರ ನವೀನ್ ಅಯ್ಯಪ್ಪ ಹಾಗೂ ಬಜರಂಗದಳ ಸಂಚಾಲಕ ಪೆಮ್ಮಣಮಾಡ ನವೀನ್ ನೇತೃತ್ವದಲ್ಲಿ ಜರುಗಿತು.

-ಟಿ.ಎಲ್. ಶ್ರೀನಿವಾಸ್