ಮಡಿಕೇರಿ, ಆ. 14: ರಾಜ್ಯ ಸರ್ಕಾರ 2015 ನ. 10ರಂದು ಮೊದಲ ಬಾರಿಗೆ ಆಯೋಜಿಸಿದ ಟಿಪ್ಪು ಜಯಂತಿ ಸಂದರ್ಭದಲ್ಲಿ ನಡೆದ ಗುಂಡೇಟು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಗಳನ್ನು ಹೊತ್ತಿದ್ದ ಮೂವರು ಆರೋಪಿ ಗಳನ್ನು ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.ಗುಂಡೇಟು ಪ್ರಕರಣದ ಆರೋಪಿಗಳಾಗಿದ್ದ ಮಡಿಕೇರಿಯಲ್ಲಿ ಮೊಬೈಲ್ ಶಾಪೊಂದನ್ನು ನಡೆಸುತ್ತಿದ್ದ ಪಾಣತ್ತಲೆ ಕಾವೇರಪ್ಪ ಅಲಿಯಾಸ್ ಕವನ್ (33) ಮಡಿಕೇರಿ ನಿವಾಸಿಗಳಾದ ಸೂದನ ಭೀಷ್ಮ ಅಲಿಯಾಸ್ ನಂದ (38) ಹಾಗೂ ಟ್ಯಾಕ್ಷಿ ಚಾಲಕ ಕೆ.ಆರ್. ರಮೇಶ್ (47) ಅವರನ್ನು ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ. ಪವನೇಶ್ ಆರೋಪಿಗಳ ವಿರುದ್ಧ ಸೂಕ್ತ ಸಾಕ್ಷ್ಯಾಧಾರ ಕೊರತೆಯ ಹಿನ್ನೆಲೆಯಲ್ಲಿ ದೋಷಮುಕ್ತಗೊಳಿಸಿ ತೀರ್ಪಿತ್ತಿದ್ದಾರೆ.

ಘಟನೆ ವಿವರ: 2015ರ ನ. 10ರಂದು ಕೊಡಗು ಜಿಲ್ಲೆಯಲ್ಲಿ ಆಯೋಜಿಸಿದ ಟಿಪ್ಪು ಜಯಂತಿ ಸಾವು ನೋವುಗಳಿಗೆ ಕಾರಣ ವಾಯಿತು. ಹಲವಷ್ಟು ಉದಾಹರಣೆ ಗಳನ್ನು ಮುಂದಿಟ್ಟು ಕೊಡಗಿನ ಅನೇಕ ಸಂಘಟನೆಗಳು ಜಯಂತಿಗೆ ತೀವ್ರವಾಗಿ ವಿರೋಧಿಸಿದ್ದರೂ ಸರ್ಕಾರ

(ಮೊದಲ ಪುಟದಿಂದ) ಇದನ್ನು ಲಘುವಾಗಿ ಪರಿಗಣಿಸಿದ ಪರಿಣಾಮ ಸಾವು ನೋವುಗಳಿಗೆ ಕಾರಣವಾಗಿತ್ತು.

ಸರ್ಕಾರದ ಆದೇಶದಂತೆ ಟಿಪ್ಪು ಜಯಂತಿಯನ್ನು ಜಿಲ್ಲಾಡಳಿತ ಕಾವೇರಿ ಕಲಾಕ್ಷೇತ್ರದಲ್ಲಿ ಆಯೋಜಿಸಿತ್ತು. ಪರ-ವಿರೋಧ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮೆರವಣಿಗೆಯನ್ನು ನಿಷೇಧಿಸಿತು.

ತಾ. 10ರಂದು ಕಾರ್ಯಕ್ರಮವನ್ನು ಬೆಂಬಲಿಸಿ ಬರುವವರ ಸಂಖ್ಯೆ ಬಗ್ಗೆ ಗುಪ್ತಚರ ಇಲಾಖೆ ವೈಫಲ್ಯ ಕಂಡು ಬಂದಿತು. 9 ಗಂಟೆ ವೇಳೆಯಲ್ಲಿ ಮಂಗಳೂರು ರಸ್ತೆ, ವೀರಾಜಪೇಟೆ ಹಾಗೂ ಮೈಸೂರು ಮಾರ್ಗದಿಂದ ನೂರಾರು ಮಂದಿ ಘೋಷಣೆಗಳೊಂದಿಗೆ ಕಾರ್ಯಕ್ರಮಕ್ಕೆ ವಾಹನಗಳಲ್ಲಿ ನಗರದತ್ತ ಬಂದಾಗಷ್ಟೇ ಪೊಲೀಸರಿಗೆ ಪರಿಸ್ಥಿತಿ ಕೈ ಮೀರುವ ಅರಿವಾಗತೊಡಗಿತು. ವಾಹನಗಳಲ್ಲಿ ಬಂದವರು ತಿಮ್ಮಯ್ಯ ವೃತ್ತದ ಬಳಿ ಮೆರವಣಿಗೆಗೆ ಅಣಿಗೊಂಡರೆ ಮತ್ತೊಂದು ಮೆರಣಿಗೆ ಮಾರುಕಟ್ಟೆ ಬಳಿಯಿಂದ ಕಲಾಕ್ಷೇತ್ರದತ್ತ ದಾಪುಗಾಲಿಡಲಾರಂಭಿಸಿತು.

ಮೆರವಣಿಗೆ ನಿಷೇಧವಾಗಿದ್ದರೂ ಬೆರಳೆಣಿಕೆಯ ಪೊಲೀಸರಿಗೆ ಅದನ್ನು ತಡೆಯುವ ಸಾಮಥ್ರ್ಯವಾಗಲಿ, ಮೇಲಾಧಿಕಾರಿಗಳ ಆದೇಶ ಇಲ್ಲದಿದ್ದುದು ವರವಾಗಿ ಪರಿಣಮಿಸಿತು.

ಪೊಲೀಸರು ಅಲ್ಲಿ ಸೇರಿದವರನ್ನು ಚದುರಿಸಬೇಕಾಯಿತು. ಗುಂಪು ಚೆಲ್ಲಾಪಿಲ್ಲಿಯಾಗಿ ಓಡಲಾರಂಭಿಸಿತು. ಈ ಸಂದರ್ಭ ಪೊಲೀಸರತ್ತ ಹಾಗೂ ಕಟ್ಟಡಗಳ ಮೇಲೂ ಕಲ್ಲು ತೂರಾಟ ನಡೆಯಿತು. ಇದೇ ಸಂದರ್ಭ ತಿಮ್ಮಯ್ಯ ವೃತ್ತದಿಂದ ಆಸ್ಪತ್ರೆ ಆವರಣದತ್ತ ಧಾವಿಸಿದ ವಿಶ್ವಹಿಂದೂ ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿದ್ದ ದೇವಪ್ಪಂಡ ಕುಟ್ಟಪ್ಪ ಗುಂಪಿನ ನಡುವೆ ಹತ್ಯೆಗೀಡಾದರು. ಮಡಿಕೇರಿ ಕಾರ್ಯಕ್ರಮ ಮುಗಿಸಿ ಸಿದ್ದಾಪುರದತ್ತ ಲಾರಿಯಲ್ಲಿ ತೆರಳುತ್ತಿದ್ದ ಗುಹ್ಯ ಗ್ರಾಮದ ಸಾಹುಲ್ ಹಮೀದ್ (22) ಯುವಕನ ಮೇಲೆ ನೀರುಕೊಲ್ಲಿ ಸನಿಹ ಅಪರಿಚಿತರು ಗುಂಡು ಹಾರಿಸಿದ್ದು, ಜೀವನ್ಮರಣ ಸ್ಥಿತಿಯಲ್ಲಿ ಗಾಯಾಳು ಮೈಸೂರಿನ ಆಸ್ಪತ್ರೆಗೆ ದಾಖಲಾಗಿ ಅಂದು ರಾತ್ರಿ ಸಾವಿಗೀಡಾದರು. ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರ ವಿಶೇಷ ತಂಡ 2015ರ ಡಿ. 14 ರಂದು ಮಡಿಕೇರಿಯಲ್ಲಿ ಮೊಬೈಲ್ ಶಾಪೊಂದನ್ನು ನಡೆಸುತ್ತಿದ್ದ ಪಾಣತ್ತಲೆ ಕವನ್ ಕಾವೇರಿಯಪ್ಪ, ಮಡಿಕೇರಿ ನಗರದ ನಿವಾಸಿಗಳಾದ ಬೆಳೆಗಾರರಾದ ಸೂದನ ಭೀಷ್ಮ ಹಾಗೂ ಚಾಲಕ ಕೆ.ಆರ್. ರಮೇಶ್ ಎಂಬವರನ್ನು ಬಂಧಿಸಿ ಐಪಿಸಿ ಸೆಕ್ಷನ್ 120 ಬಿ, 307, 302, 34 ಹಾಗೂ ಭಾರತೀಯ ಆಯುಧ ಕಾಯಿದೆಯಂತೆ 3, 5, 25, 27, 30 ಸೆಕ್ಷನ್‍ನಡಿ ಪ್ರಕರಣ ದಾಖಲಿಸಿದ್ದರು. ಕಾರ್ಯಾಚರಣೆ ತಂಡದಲ್ಲಿ ಎಸ್ಪಿ ವರ್ತಿಕಾ ಕಟಿಯಾರ್ ಮಾರ್ಗದರ್ಶನದಲ್ಲಿ ಮಡಿಕೇರಿ ಡಿವೈಎಸ್‍ಪಿಯಾಗಿದ್ದ ರಾಜಶೇಖರ್, ಗೋಣಿಕೊಪ್ಪಲು ವೃತ್ತ ನಿರೀಕ್ಷಕ ರಾಜು, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಕರೀಂ ರಾವುತರ್, ಎಎಸ್‍ಐ ಹಮೀದ್, ಮುಖ್ಯ ಪೇದೆಗಳಾದ ತೀರ್ಥಕುಮಾರ್, ನಿರಂಜನ್, ಸತೀಶ್, ಶೇಖರ್, ರವಿ, ಮಂಜು, ತಮ್ಮಯ್ಯ, ಲಿಂಗರಾಜು, ರಾಜು, ವೆಂಕಟೇಶ್, ಪೂವಯ್ಯ, ಗಿರೀಶ್, ರಾಜೇಶ್, ಸುನೀಲ್, ಜೋಷ್, ನಿಶಾಂತ್, ಮಹಮದ್ ಆಲಿ ಪಾಲ್ಗೊಂಡಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಡಿ. ಪವನೇಶ್ ಸೂಕ್ತ ಸಾಕ್ಷ್ಯಾಧಾರ ದೊರೆಯದ ಹಿನ್ನೆಲೆಯಲ್ಲಿ ಮೂವರು ಆರೋಪಿಗಳ ಆರೋಪ ದೋಷ ಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ.

ಆರೋಪಿಗಳ ಪರವಾಗಿ ವಕೀಲರಾದ ಪಿ. ಕೃಷ್ಣ ಮೂರ್ತಿ ವಾದ ಮಂಡಿಸಿದರು.