ಮಡಿಕೇರಿ, ಆ. 14: ಆಗಸ್ಟ್ 15ಕ್ಕೆ ಭಾರತ ಸ್ವಾತಂತ್ರ್ಯ ಲಭಿಸಿದ ಸುವರ್ಣ ದಿನ. ದೇಶದೆಲ್ಲೆಡೆ ಇಂದು ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದವರ ಸ್ಮರಣೆಯೊಂದಿಗೆ ದೇಶಭಕ್ತಿ ಮೇಳೈಸುತ್ತದೆ. ಸಭೆ - ಸಮಾರಂಭ, ಧ್ವಜಾರೋಹಣದ ಮೂಲಕ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯೊಂದಿಗೆ ಈ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ, ದೇಶದ ಭದ್ರತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಸಂದೇಶ ದೇಶದೆಲ್ಲೆಡೆ ಕೇಳಿ ಬರುತ್ತದೆ.

ಹೌದು ಇದು ನಿಜವೇ.. ಆದರೆ ಇದರೊಂದಿಗೆ ಮಾತಿಗಿಂತ ಕೃತಿಯೂ ಮುಖ್ಯವಾಗಿಬೇಕಲ್ಲವೇ. ಇದಕ್ಕೆ ಪೂರಕವಾಗಿ ಯುವಶಕ್ತಿಗೆ ದೇಶ ಪ್ರೇಮ, ಶಿಸ್ತಿನ ಪಾಠ ಕಲಿಸುವದು ಎನ್‍ಸಿಸಿ ಚಟುವಟಿಕೆ ಎನ್‍ಸಿಸಿಯ ಮೂಲಕ ಯುವ ಸಮೂಹಕ್ಕೆ ದೇಶಪ್ರೇಮ ಒಂದು ರೀತಿಯಲ್ಲಿ ರಕ್ತಗತವಾಗಿ ಮೈಗೂಡುತ್ತದೆ. ದೇಶದ ರಕ್ಷಣಾ ಪಡೆಗೆ ಪೂರಕವಾದ ತರಬೇತಿಯನ್ನು ಇಲ್ಲಿ ನೀಡಲಾಗುತ್ತದೆ.

19ಣh ಕರ್ನಾಟಕ ಬೆಟಾಲಿಯನ್

ಕೊಡಗು ಜಿಲ್ಲೆ ಹಾಗೂ ನೆರೆಯ ಸುಳ್ಯ ಹಾಗೂ ಪುತ್ತೂರನ್ನು ಒಳಗೊಂಡು 19ಣh ಕರ್ನಾಟಕ ಬೆಟಾಲಿಯನ್ (ಎನ್‍ಸಿಸಿ ಕಚೇರಿ) ಕಾರ್ಯನಿರ್ವಹಿಸುತ್ತಿದೆ. ಕೊಡಗು ಜಿಲ್ಲೆಯ ಐದು ಸೀನಿಯರ್ ಕಾಲೇಜು ಹಾಗೂ ಸುಳ್ಯ, ಪುತ್ತೂರಿನ ಮೂರು ಕಾಲೇಜು ಸೇರಿದಂತೆ ಸೀನಿಯರ್ ವಿಭಾಗದಲ್ಲಿ 8 ಕಾಲೇಜು ಹಾಗೂ ಜೂನಿಯರ್ ವಿಭಾಗದಲ್ಲಿ ಕೊಡಗಿನ 15 ಪ್ರೌಢಶಾಲೆ ಹಾಗೂ ಸುಳ್ಯ, ಪುತ್ತೂರಿನ 2 ಕಾಲೇಜು ಸೇರಿ 17 ಶಾಲೆಯಲ್ಲಿ ಎನ್‍ಸಿಸಿ ಚಟುವಟಿಕೆ ನಡೆಯುತ್ತಿದೆ.

ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ 19ನೇ ಕರ್ನಾಟಕ ಬೆಟಾಲಿಯನ್ ಕೇಂದ್ರ ಕಚೇರಿ ಇದ್ದು, ಇಲ್ಲಿ ಕಮಾಂಡಿಂಗ್ ಆಫೀಸರ್ ಆಗಿ ಕರ್ನಲ್ ಹುದ್ದೆಯ ಓರ್ವ ಅಧಿಕಾರಿ, ಸಹಾಯಕ ಅಧಿಕಾರಿಯಾಗಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಯ ಓರ್ವ ಅಧಿಕಾರಿ ಹಾಗೂ 6 ಮಂದಿ ಜೆಸಿಓ ಅಧಿಕಾರಿಗಳು ಹಾಗೂ 14 ಮಂದಿ ಎನ್‍ಸಿಓ (ನಾನ್ ಕಮೀಷನ್ಡ್ ಆಫೀಸರ್ಸ್) ಸೇರಿ ಒಟ್ಟು 20 ಮಂದಿ ಭಾರತೀಯ ಸೇನೆಯ ಸಿಬ್ಬಂದಿಗಳು ಎನ್‍ಸಿಸಿ ತರಬೇತಿ ನೀಡಲು ನಿಯೋಜಿಸಲ್ಪಟ್ಟಿದ್ದಾರೆ. ಇವರೊಂದಿಗೆ ಆಯಾ ಶಾಲಾ - ಕಾಲೇಜಿನ ಎನ್‍ಸಿಸಿ ಅಧಿಕಾರಿಗಳೂ ಸಹಕರಿಸುತ್ತಾರೆ. ಸಂಸ್ಥೆಯ ನಿಯೋಜಿತ ಅಧಿಕಾರಿಗಳ ಜವಾಬ್ದಾರಿಯೂ ಇಲ್ಲಿ ಹೆಚ್ಚಾಗಿರುತ್ತದೆ. ಸೇನಾಧಿಕಾರಿಗಳೊಂದಿಗೆ, ಕೆಡೆಟ್‍ಗಳಿಗೆ ಹೆಚ್ಚಿನ ಸ್ಫೂರ್ತಿ ತುಂಬುವದು, ಪ್ರೋತ್ಸಾಹ ನೀಡುವದು ಸಂಸ್ಥೆಯ ಅಧಿಕಾರಿಗಳಾಗಿದ್ದಾರೆ.

2200 ಯುವ ಸೈನಿಕರು

ಪ್ರಸ್ತುತ ಈ ಬೆಟಾಲಿಯನ್‍ಗೆ ಒಳಪಟ್ಟಿರುವ ವಿವಿಧ ಶಾಲಾ - ಕಾಲೇಜುಗಳಿಂದ ಒಟ್ಟು 2202 (ಯುವತಿಯರು ಸೇರಿ) ಯುವ ಸೈನಿಕರು ಎನ್‍ಸಿಸಿ ತರಬೇತಿ ಪಡೆಯುತ್ತಿದ್ದಾರೆ. ತರಬೇತಿ ನೀಡಲು ನಿಯೋಜಿಸಲ್ಪಟ್ಟಿರುವ ಸೇನಾಧಿಕಾರಿಗಳು ನಿರ್ದಿಷ್ಟ ದಿನಗಳಂದು ಆಯಾ ಸಂಸ್ಥೆಗಳಿಗೆ ತೆರಳಿ ಅಲ್ಲಿ ಎನ್‍ಸಿಸಿ ಕೆಡೆಟ್‍ಗಳಿಗೆ ತರಬೇತಿ ನೀಡುತ್ತಾರೆ. ರಕ್ಷಣಾ ಪಡೆಗೆ ಅಗತ್ಯವಿರುವ ತರಬೇತಿಯನ್ನು ಇಲ್ಲಿ ನೀಡಲಾಗುತ್ತದೆ. ಡ್ರಿಲ್, ಶಸ್ತ್ರಾಸ್ತ್ರ ತರಬೇತಿ ಮ್ಯಾಪ್‍ರೀಡಿಂಗ್ ಸೇರಿದಂತೆ ವಿವಿಧ ರೀತಿಯ ತರಬೇತಿ, ಸೇನೆ ಸೇರ್ಪಡೆಗೆ ಇರುವ ಪರೀಕ್ಷೆಗೆ ಪೂರಕ ತರಬೇತಿ - ಮಾಹಿತಿಯನ್ನೂ ನೀಡಲಾಗುತ್ತದೆ.

ವಾರ್ಷಿಕ ಶಿಬಿರ

ವಾರ್ಷಿಕವಾಗಿ ಮೂರು ತರಬೇತಿ ಶಿಬಿರಗಳನ್ನು ಏರ್ಪಡಿಸಲಾಗುತ್ತದೆ. ಎರಡು ‘ಕಂಬೈಂಡ್ ಅನ್ಸುಯಲ್ ಟ್ರೈನಿಂಗ್ ಕ್ಯಾಂಪ್’ ನಡೆಯುತ್ತದೆ. ಇವರೊಂದಿಗೆ ರಾಷ್ಟ್ರಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಶಿಬಿರವೂ ವರ್ಷಂಪ್ರತಿ ಯಾವದಾದರೊಂದು ಸ್ಥಳದಲ್ಲಿ ಆಯೋಜಿಸಲ್ಪಡುತ್ತದೆ. ಟಾಲ್ ಸೇನಾ ಕ್ಯಾಂಪ್, ಆರ್ಮಿ ಅಟ್ಯಾಚ್‍ಮೆಂಟ್ ಕ್ಯಾಂಪ್‍ನಲ್ಲಿಯೂ ಆಯ್ಕೆಯಾದ ಕೆಡೆಟ್‍ಗಳು ಭಾಗವಹಿಸುತ್ತಾರೆ. ಈ ಬಾರಿಯ ಗಣರಾಜ್ಯೋತ್ಸವ ಪರೇಡ್‍ನಲ್ಲಿ 19ನೇ ಕರ್ನಾಟಕ ಬೆಟಾಲಿಯನ್‍ನ 6 ಕೆಡೆಟ್‍ಗಳು ಪಾಲ್ಗೊಂಡಿದ್ದರು. ಇವರಲ್ಲಿ ಪಥಸಂಚಲನದಲ್ಲಿ ರಾಷ್ಟ್ರಮಟ್ಟದಲ್ಲಿ ಬೆಟಾಲಿಯನ್ ಅನ್ನು ಕಮಾಂಡ್ ಮಾಡಿದ ಕೀರ್ತಿ ಕೊಡಗಿನ ಕೆಡೆಟ್ ಐಶ್ವರ್ಯಳದ್ದು.

ಜಿಲ್ಲೆಯಲ್ಲಿ ತರಬೇತಿ ಪಡೆದಿರುವ ಕೆಡೆಟ್‍ಗಳ ಪೈಕಿ ಅದೆಷ್ಟೋ ಮಂದಿ ಸೇನೆಯಲ್ಲಿ ಉನ್ನತ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಫೀ.ಮಾ. ಕಾರ್ಯಪ್ಪ ಕಾಲೇಜಿನ ಕೆಡೆಟ್ ಆಗಿದ್ದ ಲೆಫ್ಟಿನೆಂಟ್ ಜನರಲ್ ಪದವಿಗೆ ಏರಿದ್ದ ಬುಟ್ಟಿಯಂಡ ಕೆ. ಬೋಪಣ್ಣ ಅವರು ಎನ್‍ಸಿಸಿಯ ದೇಶದ ಡೈರೆಕ್ಟರ್ ಜನರಲ್ ಆಗಿ ಕರ್ತವ್ಯ ನಿರ್ವಹಿಸಿರುವದು ವಿಶೇಷವಾಗಿದೆ.

ಸೈನಿಕ ತರಬೇತಿಯೊಂದಿಗೆ ದೇಶಭಕ್ತಿ, ಸಾಹಸ ಜೀವನ, ಸಹೋದರತೆ ರಾಷ್ಟ್ರೀಯ ಬಾವೈಕ್ಯತೆ ಎನ್‍ಸಿಸಿ ತರಬೇತಿಯ ಮೂಲಕ ದೊರೆಯುತ್ತದೆ. ಇದು ಯುವಕ ಯುವತಿಯರ ಭವಿಷ್ಯವನ್ನೂ ರೂಪಿಸುತ್ತದೆ. ಉದ್ಯೋಗವಕಾಶದ ಜತೆಗೆ ಸಾಕಷ್ಟು ಉತ್ತಮ ಪ್ರಯೋಜನಗಳು ಎನ್‍ಸಿಸಿಯಿಂದ ಸಿಗಲಿದೆ ಎಂದು ಫೀ.ಮಾ. ಕಾರ್ಯಪ್ಪ ಕಾಲೇಜಿನ ಎನ್‍ಸಿಸಿ ಅಧಿಕಾರಿ ಮೇಜರ್ ರಾಘವ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.