ಮಡಿಕೇರಿ, ಆ. 15: ಪ್ರಜಾಪ್ರಭುತ್ವದ ಯಶಸ್ಸು ಮತ್ತು ಸಮಾನತೆಗಾಗಿ ದುಡಿದ ಜನರನ್ನು ನೆನೆದು ಸಂಭ್ರಮಿಸಲು ಇದು ಒಂದು ಸುದಿನವಾಗಿದ್ದು, ರಾಷ್ಟ್ರ ಕವಿ ಕುವೆಂಪು ಹೇಳಿರುವಂತೆ ನಾಡು ‘ಸರ್ವ ಜನಾಂಗದ ತೋಟ’ವಾಗಲು ಚಿಂತಿಸಬೇಕೆಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಆಶಯ ವ್ಯಕ್ತಪಡಿಸಿದರು.ಜಿಲ್ಲಾಡಳಿತದ ವತಿಯಿಂದ ಇಲ್ಲಿನ ಕೋಟೆ ಆವರಣದಲ್ಲಿ ಜರುಗಿದ 71ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದ ಅವರು, ಸ್ವಾತಂತ್ರ್ಯ ಚಳವಳಿಯಲ್ಲಿ ಶ್ರಮಿಸಿದ ಕೊಡಗಿನ ಎಲ್ಲ ಹಿರಿಯರಿಗೆ, ಮಹಾನ್ ನಾಯಕರುಗಳಿಗೆ ನಮನ ಸಲ್ಲಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ 4 ವರ್ಷಗಳ ಅವಧಿಯಲ್ಲಿ ನುಡಿದಂತೆ ನಡೆಯಲು ಪ್ರಯತ್ನಿಸಿದೆ. ಜನರ ಆಶೋತ್ತರಗಳ ಈಡೇರಿಕೆಗೆ ಆದ್ಯತೆಯಲ್ಲಿ ಸ್ಪಂದಿಸಿದೆ ಎಂದು ಹೇಳಿದರು.

ಮಡಿಕೇರಿ ಜಿಲ್ಲಾ ಕೇಂದ್ರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ರೂ. 4 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ರೂ. 575 ಲಕ್ಷ ವೆಚ್ಚದಲ್ಲಿ ಮಡಿಕೇರಿಯಲ್ಲಿ ಕಿರು ತಾರಾಲಯ ನಿರ್ಮಿಸಲು ಅನುಮೋದನೆಯಾಗಿದೆ.

ಸುದೀರ್ಘ 40 ವರ್ಷಗಳ ಬೇಡಿಕೆಯಲ್ಲಿದ್ದ ಹಾರಂಗಿ ಜಲಾಶಯ ನಿರ್ಮಾಣ ಸಂದರ್ಭದ ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲಾಗಿದ್ದ ಯಡವನಾಡು ಮತ್ತು ಅತ್ತೂರು ಅರಣ್ಯ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ, ಅತ್ತೂರು ಗ್ರಾಮದ 735 ಎಕರೆ ಜಾಗದ 141 ಮಂದಿಗೆ, ಯಡವನಾಡು ಗ್ರಾಮದ ಒಟ್ಟು 1076 ಎಕರೆ ಜಾಗದ ಒಟ್ಟು 113 ಜನರಿಗೆ ಹಕ್ಕು ದಾಖಲಾತಿಗಳನ್ನು ವಿತರಿಸಲಾಗಿದೆ.

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಗಾಂಧಿ ಭವನ ನಿರ್ಮಾಣಕ್ಕಾಗಿ ರೂ. 1.70 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವದು. ಮಡಿಕೇರಿ ನಗರದಲ್ಲಿ ರೂ. 3.50 ಕೋಟಿ ವೆಚ್ಚದಲ್ಲಿ ಜನರಲ್ ತಿಮ್ಮಯ್ಯ ಸ್ಮಾರಕ ಕಾಮಗಾರಿ ಪ್ರಗತಿಯಲ್ಲಿದೆ. ಮಡಿಕೇರಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ 1 ಎಕರೆ ನಿವೇಶನ ಕಾಯ್ದಿರಿಸಲಾಗಿದ್ದು, ಕಟ್ಟಡ ನಿರ್ಮಾಣಕ್ಕಾಗಿ ರೂ. 2 ಕೋಟಿ ಅನುದಾನ ಮಂಜೂರಾತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ರಸ್ತೆ ಅಭಿವೃದ್ಧಿ

ನಬಾರ್ಡ್ ಯೋಜನೆಯಡಿ ಮಲ್ಲಳ್ಳಿ ಜಲಪಾತಕ್ಕೆ ತೆರಳುವ 2.80 ಕಿ.ಮೀಗಳ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿ, ರೂ. 3.19 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿದೆ. ದುಬಾರೆ ಕೂಡುರಸ್ತೆ ಅಭಿವೃದ್ದಿಗೆ 132 ಲಕ್ಷ ಬಿಡುಗಡೆಗೊಂಡಿದೆ. ಮಲ್ಲಳ್ಳಿ ಜಲಪಾತ ಬಳಿ ಮೂಲಭೂತ ಸೌಕರ್ಯ ಕಾಮಗಾರಿ 3 ಕೋಟಿ ವೆಚ್ಚದಲ್ಲಿ ಪ್ರಗತಿಯಲ್ಲಿದೆ. ಚೇಲಾವರ ಜಲಪಾತ ಕೂಡುರಸ್ತೆ ಅಭಿವೃದ್ಧಿ ಕಾಮಗಾರಿ ರೂ. 3 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿರುತ್ತದೆ. ಕೊಡವ ಹೆರಿಟೇಜ್ ಕೂಡುರಸ್ತೆ ಕಾಮಗಾರಿ ರೂ. 2 ಕೋಟಿ ವೆಚ್ಚದಲ್ಲಿ ಪೂರ್ಣ ಗೊಂಡಿದೆ ಎಂದು ತಿಳಿಸಿದರು.

ಜಿಲ್ಲೆಯ ಗ್ರಾಮೀಣ ರಸ್ತೆಗಳ ದುರಸ್ತಿ ಕಾಮಗಾರಿಗಾಗಿ 2016-17ನೇ ಸಾಲಿನಲ್ಲಿ ರೂ. 50 ಕೋಟಿ ಅನುದಾನ ಲೋಕೋಪಯೋಗಿ ಇಲಾಖೆಗೆ ಬಿಡುಗಡೆಯಾಗಿದ್ದು, ಕೊಡಗು ಪ್ಯಾಕೇಜ್‍ನಡಿ ಒಟ್ಟು 122 ಕಾಮಗಾರಿಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.

(ಮೊದಲ ಪುಟದಿಂದ) ಜಿಲ್ಲೆಯ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿಗಾಗಿ ರೂ. 38 ಕೋಟಿ ಅನುದಾನ ಬಿಡುಗಡೆಯಾಗಿದ್ದು, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಒಟ್ಟು 19 ಕಾಮಗಾರಿಗಳು ಹಾಗೂ 3 ಸೇತುವೆ ಕಾಮಗಾರಿಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸ ಲಾಗಿರುತ್ತದೆ. ಈಗಾಗಲೇ ಎಲ್ಲ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿವೆ.

ಮಡಿಕೇರಿಗೆ ಅನುದಾನ

ಮಡಿಕೇರಿ ನಗರಸಭೆಗೆ 3ನೇ ಹಂತದ ಯೋಜನೆಯಡಿ ರೂ. 35 ಕೋಟಿ ಮಂಜೂರಾತಿಗೆ ಈಗಾಗಲೇ ಕ್ರಿಯಾಯೋಜನೆಯನ್ನು ತಯಾರಿಸಲಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ರೂ. 9 ಕೋಟಿ ಮೀಸಲಿಡಲಾಗಿದೆ. ಮಡಿಕೇರಿ ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ರೂ. 12 ಕೋಟಿ ವೆಚ್ಚದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವದು ಎಂದು ಮಾಹಿತಿ ನೀಡಿದರು.

ಜೇನು ಕೃಷಿಗೆ

ಜಿಲ್ಲೆಯು ಜೇನು ಕೃಷಿಗೆ ಹೆಸರುವಾಸಿಯಾಗಿದ್ದು, ಜೇನು ಮ್ಯೂಸಿಯಂ ಸ್ಥಾಪನೆಯ ಜೊತೆಗೆ ಜೇನು ಕೃಷಿ ತರಬೇತಿ ಹಾಗೂ ಪೆಟ್ಟಿಗೆಗಳಿಗೆ ಸಹಾಯಧನ ನೀಡಲಾಗುವದು. ರೂ. 66.25 ಲಕ್ಷ ಅನುದಾನದಲ್ಲಿ ಮಾದಾಪÀುರ ತೋಟಗಾರಿಕೆ ಕ್ಷೇತ್ರವನ್ನು ಮಾದರಿ ತೋಟಗಾರಿಕೆ ಕ್ಷೇತ್ರವನ್ನಾಗಿಸಲಾಗುವದು ಎಂದರು.

ಕ್ರೀಡಾಂಗಣಕ್ಕೆ...

ಯುವಜನ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ವೀರಾಜಪೇಟೆಯಲ್ಲಿ ರೂ. 3.26 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ, ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ರೂ. 61 ಲಕ್ಷ ವೆಚ್ಚದಲ್ಲಿ ಸ್ಕ್ವಾಷ್ ಕೋರ್ಟ್ ನಿರ್ಮಾಣ, ರೂ. 53.15 ಲಕ್ಷ ವೆಚ್ಚದಲ್ಲಿ ಬಾಕ್ಸಿಂಗ್ ಕಟ್ಟಡ ನಿರ್ಮಾಣ ಕಾಮಗಾರಿ ಹಾಗೂ ಸೋಮವಾರಪೇಟೆಯ ಕೂಡಿಗೆ ಕ್ರೀಡಾ ಶಾಲೆಯಲ್ಲಿ ಹಾಕಿ ಟರ್ಫ್ ಮೈದಾನವನ್ನು ರೂ. 3.50 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಅಲ್ಪ ಸಂಖ್ಯಾತರಿಗೆ...

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಬಿದಾಯಿ ಯೋಜನೆಯಡಿ ಇಲ್ಲಿಯವರೆಗೆ ರೂ. 50 ಸಾವಿರಗಳಂತೆ 300 ಫಲಾನುಭವಿಗಳಿಗೆ ರೂ. 150 ಲಕ್ಷಗಳ ಸಹಾಯಧನ ನೀಡಲಾಗಿದೆ. ಮಡಿಕೇರಿ ನಗರದಲ್ಲಿ ಅಲ್ಪಸಂಖ್ಯಾತರ ಮೌಲಾನ ಆಜಾದ್ ಭವನ ಕಟ್ಟಡವನ್ನು ರೂ. 114 ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಲಾಗುವದು. ಶಾದಿಮಹಲ್, ಚರ್ಚ್ ಹಾಗೂ ಸಮುದಾಯ ಭವನಗಳ ನಿರ್ಮಾಣದಂತಹ ಶಾಶ್ವತ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಕುಶಾಲನಗರ ನೂತನ ಕಟ್ಟಡ ರೂ. 134 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ವೀರಾಜಪೇಟೆಯ ಆರ್ಜಿ ಗ್ರಾಮದಲ್ಲಿ ರೂ. 10 ಕೋಟಿ ವೆಚ್ಚದಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ಶಾಲೆ ನಿರ್ಮಾಣ ಆಗಿದ್ದು ಪ್ರಸಕ್ತ ಸಾಲಿನಲ್ಲಿ ಲೋಕಾರ್ಪಣೆಗೊಂಡಿದೆ.

ಮಡಿಕೇರಿಯಲ್ಲಿ ನೂತನ ಜಿಲ್ಲಾ ಪಂಚಾಯತ್ ಆಡಳಿತ ಭವನ ಕಛೇರಿ ಕಟ್ಟಡ ರೂ. 18.25 ಕೋಟಿ ಅಂದಾಜು ಮೊತ್ತದಲ್ಲಿ ವಿವಿಧ ಹಂತದಲ್ಲಿ ಪ್ರಗತಿಯಲ್ಲಿದ್ದು, 2018ರ ಜೂನ್ ಅಂತ್ಯದೊಳಗೆ ಉದ್ದೇಶಿತ ಕಾಮಗಾರಿ ಪೂರ್ಣಗೊಳ್ಳಲಿದೆ.

ಸಾಲ ಮನ್ನಾ...

ಬರದ ಛಾಯೆಯ ಹಿನ್ನೆಲೆಯಲ್ಲಿ ಜಿಲ್ಲೆಗೆ ಸುಮಾರು 34,000 ರೈತರುಗಳಿಗೆ ಒಟ್ಟು 151 ಕೋಟಿ ರೂ. ಗಳಷ್ಟು ಸಾಲಮನ್ನಾ ಮಾಡಲಾಗಿದೆ.

2016-17ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬರದಿಂದಾಗಿ ಸಂಭವಿಸಿದ ಕೃಷಿ ಬೆಳೆ ಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಪಾರದರ್ಶಕವಾಗಿ ರೈತರಿಗೆ ಅನುಕೂಲವಾಗುವಂತೆ ಪ್ರಪ್ರಥಮ ಬಾರಿಗೆ ಓಇಈಖಿ ಮುಖೇನ ಒಟ್ಟು 6260 ರೈತರಿಗೆ 2.30 ಕೋಟಿ ಪರಿಹಾರ ಮೊತ್ತವನ್ನು ನೇರವಾಗಿ ರೈತರ ಖಾತೆಗಳಿಗೆ ವರ್ಗಾಯಿಸಿದೆ.

2016-17ನೇ ಸಾಲಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಬರದಿಂದಾಗಿ ಸಂಭವಿಸಿದ ತೋಟಗಾರಿಕೆ ಬೆಳೆ ಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 6114 ರೈತರಿಗೆ 2.06 ಕೋಟಿ ಪರಿಹಾರ ಮೊತ್ತವನ್ನು ನೇರವಾಗಿ ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದರು.

ಮಹನೀಯರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ನಾವೆಲ್ಲ ಒಂದಾಗಿ ನಡೆಯಬೇಕಿದೆ. ಸ್ವಾತಂತ್ರ್ಯದ ಪರಿಕಲ್ಪನೆಯ ಸಮಗ್ರತೆಯನ್ನು ಅರ್ಥೈಸಿಕೊಂಡು ಭೇದ-ಭಾವವಿಲ್ಲದೆ ಒಟ್ಟಾಗಿ ಕೆಲಸ ಮಾಡೋಣವೆಂದು ಅವರು ಆಶಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ರಾಜ್ಯ ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ತಾ.ಪಂ. ಅಧ್ಯಕ್ಷೆ ಶೋಭಾ ಮೋಹನ್, ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್, ಮೂಡಾ ಅಧ್ಯಕ್ಷ ಚುಮ್ಮಿ ದೇವಯ್ಯ, ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ, ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ಅಪಾರ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಕೊಡಗು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಇನ್ನಿತರರಿದ್ದರು. ಜನರಲ್ ತಿಮ್ಮಯ್ಯ ಶಾಲಾ ವಿದ್ಯಾರ್ಥಿಗಳು ನಾಡ ಗೀತೆ, ರೈತ ಗೀತೆ ಹಾಡಿದರು. ಬಿಸಿಎಂ ಇಲಾಖಾಧಿಕಾರಿ ಕೆ.ವಿ. ಸುರೇಶ್ ನಿರೂಪಿಸಿದರು.