ಕುಶಾಲನಗರ, ಆ. 15: ನಿರ್ದಿಷ್ಟ ಗುರಿಯೊಂದಿಗೆ ಸಾಧನೆಯ ಹಾದಿಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ನಾಡಿನ ಜನತೆ ಸಂಕಲ್ಪ ಹೊಂದಬೇಕಾಗಿದೆ ಎಂದು ಕುಶಾಲನಗರ ಜೆಎಂಎಫ್‍ಸಿ ನ್ಯಾಯಾಧೀಶರಾದ ಎಸ್. ನಟರಾಜ್ ಕರೆ ನೀಡಿದ್ದಾರೆ. ಅವರು ಕುಶಾಲನಗರದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ನಡೆದ 71ನೇ ಸ್ವಾತಂತ್ರ್ಯೋತ್ಸವದ ಸಮಾರಂಭದಲ್ಲಿ ಗೌರವ ವಂದನೆ ಸ್ವೀಕರಿಸಿ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿ ಮಾತನಾಡಿದರು.

ದೇಶದ ಉನ್ನತಿಗೆ ಶ್ರಮಿಸುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇಂದಿನ ಜನಾಂಗ ಅನುಭವಿಸುತ್ತಿರುವ ಸ್ವಾತಂತ್ರ್ಯದ ಬಗ್ಗೆ ಹಾಗೂ ಅದಕ್ಕೆ ಕಾರಣರಾದ ತ್ಯಾಗ, ಬಲಿದಾನಗೈದ ಹಿರಿಯ ಚೇತನಗಳು ಹಾಗೂ ಮೂಲಭೂತ ಹಕ್ಕುಗಳು ದೊರೆಯಲು ಕಾರಣಕರ್ತರಾದವರ ಬಗ್ಗೆ ಚಿಂತನೆ ಹರಿಸಬೇಕು. ಅಭಿವೃದ್ಧಿ ನಡುವೆ ತತ್ವ, ನೀತಿ, ಸಿದ್ದಾಂತಗಳು, ಮಾನವೀಯತೆ ಬದಲಾಗುವದು ಅಸಾಧ್ಯ ಎಂದರು.

ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ. ಎಂ.ಚರಣ್ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಿತು. ಅವರು ಮಾತನಾಡಿ, ಪ್ರತಿಯೊಬ್ಬರೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸಮಾಜದ ಸುಧಾರಣೆಯತ್ತ ಕೈಜೋಡಿಸಬೇಕೆಂದು ಕರೆ ನೀಡಿದರು.

ಇದಕ್ಕೂ ಮುನ್ನ ಪರೇಡ್ ಕಮಾಂಡಂಟ್ ಸದಾಶಿವ ಪಲ್ಲೇದ್ ಅವರ ನೇತೃತ್ವದಲ್ಲಿ ಸ್ಥಳೀಯ ಪೊಲೀಸ್, ಅರಣ್ಯ ರಕ್ಷಕರ ತರಬೇತಿ ಕೇಂದ್ರ, ಎನ್‍ಸಿಸಿ ತಂಡಗಳು, ಕಾಲೇಜು ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.

ಮುಖ್ಯ ಅತಿಥಿಗಳಾಗಿ ಸೋಮವಾರಪೇಟೆ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಸಂತಪ್‍ಕುಮಾರ್, ಉಪ ತಹಶೀಲ್ದಾರ್ ನಂದಕುಮಾರ್, ಸರಕಾರಿ ಅಭಿಯೋಜಕರಾದ ಯಾಸಿನ ಅಹಮ್ಮದ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ತಂಡದಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಮಹೇಶ್ ಅಮೀನ್ ಅವರು ಸುಶ್ರಾವ್ಯವಾಗಿ ವಂದೇ ಮಾತರಂ ಹಾಡಿದರು. ಹಿಂದು ಜಾಗರಣಾ ವೇದಿಕೆಯ ಕೆ.ಪಿ.ಚಂದ್ರಶೇಖರ್ ತ್ರಿವರ್ಣ ಧ್ವಜ ಬಗ್ಗೆ ಮಾಹಿತಿ ಒದಗಿಸಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಎಚ್.ಎಂ.ರಘು ಸ್ವಾಗತಿಸಿದರು, ಪಟ್ಟಣ ಪಂಚಾಯಿತಿ ಸದಸ್ಯ ನಂಜುಂಡಸ್ವಾಮಿ ಮತ್ತು ಶಿಕ್ಷಕಿ ಗಾಯತ್ರಿ ಕಾರ್ಯಕ್ರಮ ನಿರೂಪಿಸಿದರು, ರಶ್ಮಿ ಅಮೃತ್ ವಂದಿಸಿದರು.