ಕುಶಾಲನಗರ, ಆ. 15: ಹಾರಂಗಿ ಜಲಾಶಯದಲ್ಲಿ ನೀರಿನ ಕೊರತೆಯಿರುವ ಹಿನ್ನಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ನೀರು ಹರಿಸಲು ಅಸಾಧ್ಯ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ತಿಳಿಸಿದ್ದಾರೆ.
ಅವರು ಗುಡ್ಡೆಹೊಸೂರು ವೃತ್ತದಲ್ಲಿ ರೂ 9.25 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ರಸ್ತೆ ಕಾಮಗಾರಿಗಳ ಗುದ್ದಲಿಪೂಜೆ ಮತ್ತು ಸಂಕುಸ್ಥಾಪನೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ಮುಖ್ಯಮಂತ್ರಿಗಳು ಈ ಬಗ್ಗೆ ಸರ್ವಪಕ್ಷ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು, ನೀರಿನ ಲಭ್ಯತೆಯಲ್ಲಿ ಭಾರೀ ಪ್ರಮಾಣದ ಕೊರತೆ ಉಂಟಾಗಿದೆ. ರಾಜ್ಯದಲ್ಲಿ ಶೇ.43 ರಷ್ಟು ನೀರಿನ ಸಂಗ್ರಹ ಉಂಟಾಗಿದ್ದು, ಅದರಲ್ಲಿ ಶೇ. 33 ರಷ್ಟು ನಗರಗಳಿಗೆ ಕುಡಿಯಲು ಬಳಸಬೇಕಾಗಿದೆ. ಉಳಿದ ಶೇ. 10 ರಷ್ಟು ಪ್ರಮಾಣದ ನೀರನ್ನು ಕೆರೆಕಟ್ಟೆಗಳಿಗೆ ಮತ್ತು ಜನಜಾನುವಾರುಗಳಿಗೆ ಕುಡಿಯಲು ಹರಿಸಲಾಗುತ್ತದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಮಳೆ ನಿರೀಕ್ಷಿಸಲಾಗಿದ್ದು ಸೆಪ್ಟೆಂಬರ್ ತಿಂಗಳ ತನಕ ಇದೇ ಪರಿಸ್ಥಿತಿ ಮುಂದುವರೆಯಲಿದೆ. 15 ದಿನಗಳಿಗೊಮ್ಮೆ ಸಲಹಾ ಸಮಿತಿ ಸಭೆ ನಡೆಸಿ ನೀರಿನ ಸಂಗ್ರಹದ ಬಗ್ಗೆ ಪರಾಮರ್ಶೆ ನಡೆಸಲಾಗುವದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.