ಚೆಟ್ಟಳ್ಳಿ, ಆ. 15: ಕೊಡಗಿನಲ್ಲಿ ಹಲವು ಸಂಘ-ಸಂಸ್ಥೆಗಳು ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಂತೆ ಕೊಡಗಿನ ಯುವಕರ ಟೀಂ ‘ನರಿ ಕೊಡವ ರೈಡರ್ಸ್ ಗ್ರೂಪ್’ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದೆ. ಫೇಸ್ಬುಕ್, ವಾಟ್ಸ್ಆ್ಯಪ್ಗಳಲ್ಲಿ ಗ್ರೂಪನ್ನು ತೆರೆದು ತನ್ನ ಗ್ರೂಪ್ನ ಬಗ್ಗೆ ಕಾಳಜಿ ಮೂಡಿಸುತ್ತಿದೆ. ಈಗಾಗಲೇ 20 ಸದಸ್ಯರು ಈ ಗ್ರೂಪ್ನಲ್ಲಿ ಸದಸ್ಯರಾಗಿದ್ದು ಬುಲೆಟ್, ಜಾವ, ಎಸ್ಡಿ ಹಾಗೂ ಹಲವು ಬೈಕ್ಗಳಲ್ಲಿ ಕೊಡಗಿನಲ್ಲದೆ ಬೇರೆ ರಾಜ್ಯಗಳ ಪ್ರವಾಸಿ ತಾಣಗಳಿಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ಮಡಿಕೇರಿ ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಿ ಇಲಾಖಾ ವತಿಯಿಂದ ಹಲವು ಗಿಡಗಳನ್ನು ಪಡೆದು ಮಕ್ಕಂದೂರಿನ ಪುಟ್ಟ ಹಳ್ಳಿಯಲ್ಲಿರುವ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಮಾವು, ನೇರಳೆ, ನೆಲ್ಲಿಕಾಯಿ, ಕುಂಬ್ಳಿಗಿಡವನ್ನೆಲ್ಲ ನೀಡಿದ್ದಾರೆ. ಈ ಗ್ರೂಪ್ನ ಪದಾಧಿಕಾರಿ ಯುವಕರುಗಳಾದ ಕುಂಚೆಟ್ಟಿರ ಅರುಣ್ ಬೆಳ್ಯಪ್ಪ, ಕೆಚ್ಚಟಿರ ಮದನ್ ಮಾದಯ್ಯ, ಪೆಮ್ಮುಡಿಯಂಡ ಅಭಿಷೇಕ್ ಉತ್ತಪ್ಪ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ನಮ್ಮೆಲ್ಲ ಹೊಣೆ; ಗಿಡ, ಮರವನ್ನು ನಮ್ಮ ಸ್ನೇಹಿತರಂತೆ ಕಂಡರೆ ಮಾತ್ರ ಸಂರಕ್ಷಣೆ ಸಾಧ್ಯವೆಂದು ಕಿವಿಮಾತು ಹೇಳಿದ್ದಾರೆ.
ಕೊಡಗಿನ ವಾತಾವರಣ ನಮ್ಮ ಕಣ್ಣಮುಂದೆ ದಿನೇ ದಿನೇ ಹಾಳಾಗುತ್ತಿರುವದು ಕಾಣುತ್ತಿದ್ದು, ಅದನ್ನು ಹಿಂದಿನಂತೆ ಪುನಶ್ಚೇತನ ಗೊಳಿಸಲು ಶ್ರಮಿಸುತೇವೆಂದು ಗ್ರೂಪ್ನ ಸಂಚಾಲಕ ಅಭಿಷೇಕ್ ಉತ್ತಪ್ಪ ಹೇಳುತ್ತಾರೆÉ.