ಮಡಿಕೇರಿ, ಆ. 14: ಭಾರತೀಯ ಸೇನೆಯಲ್ಲಿ ಮಹಿಳೆಯರಿಗೂ ಸೂಕ್ತ ಸ್ಥಾನಮಾನ, ಅವಕಾಶಗಳು ಇವೆ. ಪುರುಷರಷ್ಟೇ ಸಾಮಥ್ರ್ಯದಲ್ಲಿ ಕೆಲಸ ನಿರ್ವಹಣೆಯೊಂದಿಗೆ ಗೌರವವೂ ಸಿಗಲಿದೆ. ಯುವತಿಯರು ಸೇನಾ ಕರ್ತವ್ಯಕ್ಕೆ ಸೇರ್ಪಡೆಗೊಳ್ಳುವ ನಿಟ್ಟಿನಲ್ಲೂ ಆಸಕ್ತಿ ತೋರುವಂತಾಗಬೇಕೆಂದು ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಿರುವ ಕೊಡಗಿನ ಬಿದ್ದಂಡ ಈಶ್ವರಿ ಅವರು ಸಲಹೆ ನೀಡಿದ್ದಾರೆ.

ಜಿಲ್ಲೆಗೆ ಭೇಟಿ ನೀಡಿದ್ದ ಇವರನ್ನು ‘ಶಕ್ತಿ’ ಮಾತನಾಡಿಸಿದ ಸಂದರ್ಭ, ತಮ್ಮ ಅನುಭವ ಹಂಚಿಕೊಂಡರು. ಪ್ರಸ್ತುತ ಶೇ.10ರಷ್ಟು ಮಹಿಳೆಯರು ಮಾತ್ರ ಸೇನೆಯಲ್ಲಿ ತೊಡಗಿಸಿಕೊಂಡಿದ್ದು, ಇದೀಗ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಈ ಬಗ್ಗೆ ಹೆಚ್ಚಿನ ಜಾಗೃತಿ- ಆಸಕ್ತಿ ಕಂಡುಬರುತ್ತಿಲ್ಲ ಎಂದು ಈಶ್ವರಿ ಅಭಿಪ್ರಾಯಪಟ್ಟರು. ಕ್ಷೇತ್ರದ ಆಯ್ಕೆಯ ವಿಚಾರ ಅವರಿಗೆ ಬಿಟ್ಟದ್ದು. ಆದರೆ ಯುವತಿಯರನ್ನು ಸೇನೆಗೆ ಸೇರಿಸಲು ಪೋಷಕರು ಹೆಚ್ಚಾಗಿ ಹಿಂಜರಿಯುತ್ತಾರೆ. ಮದುವೆ ಮತ್ತಿತರ ವೈಯಕ್ತಿಕ ಕಾರಣಗಳನ್ನು ಅವಲೋಕಿಸಿ ಹಿಂದೇಟು ಹಾಕಲಾಗುತ್ತಿದೆ. ಒಂದು ರೀತಿಯಲ್ಲಿ ಸಾಂಸಾರಿಕ ಜೀವನ ಕಷ್ಟವೆನಿಸಿದರೂ ಆಸಕ್ತಿಯಿದ್ದಲ್ಲಿ ಸೇನೆಯಲ್ಲಿ ಅವಕಾಶದೊಂದಿಗೆ ಗೌರವವೂ ಸಿಗಲಿದೆ ಎಂಬದು ತಮ್ಮ ಅನಿಸಿಕೆಯಾಗಿದೆ. ಮೊದಲು ಎನ್.ಸಿ.ಸಿ.ಗೆ ಸೇರ್ಪಡೆಗೊಂಡು ಸಾಧನೆ ತೋರಬೇಕು. ಇದರಿಂದ ಶಿಸ್ತುಬದ್ಧ ಜೀವನ ಸಾಧ್ಯವಿದೆ. ಕೊಡಗಿನವರಲ್ಲಿ ಅದರಲ್ಲೂ ಕೊಡವ ಜನಾಂಗದಲ್ಲಿ ಸೇನಾ ಪರಂಪರೆ ರಕ್ತಗತವಾಗಿ ಬಂದಿದೆ. ಈ ಹಿಂದೆ ತಮ್ಮ ತಂದೆಗೆ ಸೇನೆಗೆ ಸೇರ್ಪಡೆಗೊಳ್ಳಲು ಆಸಕ್ತಿ ಇತ್ತಾದರೂ ಅದು ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಈ ನಿಟ್ಟಿನಲ್ಲಿ ತಮ್ಮನ್ನು ಅವರು ಹೆಚ್ಚು ಆಸಕ್ತಿ ತೋರಿ ಸೇನೆಗೆ ಸೇರಿಸಲು ಶ್ರಮ ವಹಿಸಿರುವದಾಗಿ ಈಶ್ವರಿ ಹೆಮ್ಮೆಯಿಂದ ಹೇಳಿದರು.

ಪ್ರಸ್ತುತ ಮಹಿಳೆಯರಿಗೆ ಅಧಿಕಾರಿಗಳಾಗಿ ಸೇರುವ ಅವಕಾಶ ಮಾತ್ರ ಇದ್ದು, ಸೈನಿಕರಾಗಿ ಸೇರಲು ಸೇನೆಯಲ್ಲಿ ಅವಕಾಶ ಇನ್ನೂ ಒದಗಿಸಿಲ್ಲ. ಕೊಡಗಿನ ಅದೆಷ್ಟೋ ಮಹಿಳೆಯರು, ಯುವತಿಯರು ವೈದ್ಯಕೀಯ ವಿಭಾಗದಲ್ಲಿ ಸೇನೆಯಲ್ಲಿ ವಿವಿಧ ಹುದ್ದೆಗಳಲ್ಲಿ ಇದ್ದಾರೆ. ಆದರೆ ನೇರವಾಗಿ ‘ಫೀಲ್ಡ್’ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರ ಸಂಖ್ಯೆ ಅತ್ಯಂತ ವಿರಳ. ‘ಶಕ್ತಿ’ಗೆ ತಿಳಿದುಬಂದಂತೆ ಕೊಡಗಿನ ಏಳು ಯುವತಿಯರು ಸೇನೆಯಲ್ಲಿ ಈ ಕರ್ತವ್ಯದಲ್ಲಿದ್ದಾರೆ. ಇವರ ಪೈಕಿ ಕ್ಯಾಪ್ಟನ್ ಈಶ್ವರಿ ಒಬ್ಬರಾಗಿದ್ದಾರೆ. ಬಲಂಬೇರಿಯ ಬಿದ್ದಂಡ ಜಗದೀಶ್ ಹಾಗೂ ವೀಣಾ ದಂಪತಿಯ ಮೂವರು ಪುತ್ರಿಯರ ಪೈಕಿ ಎರಡನೆಯವರಾಗಿರುವ ಈಶ್ವರಿ ಮೂರ್ನಾಡು ಪಿಯು ಕಾಲೇಜಿನಲ್ಲಿ ಎನ್.ಸಿ.ಸಿ. ಬಳಿಕ ಕಂಬೈಂಡ್, ಡಿಫೆನ್ಸ್ ಸರ್ವೀಸ್ ಎಕ್ಸಾಮ್ (ಸಿ.ಡಿ.ಎಸ್.ಇ) ಉತ್ತೀರ್ಣರಾಗಿ ತರಬೇತಿ ಬಳಿಕ 2011ರಲ್ಲಿ ಲೆಫ್ಟಿನೆಂಟ್ ಆಗಿ ಸೇವೆಗೆ ನಿಯುಕ್ತರಾಗಿದ್ದಾರೆ. ಚಿಕ್ಕಂದಿನಿಂದಲೇ ವೈಯಕ್ತಿಕವಾಗಿ ತಮಗೂ ಸೇನೆಯ ಆಸಕ್ತಿ ಇತ್ತು ಎನ್ನುವ ಈಶ್ವರಿ ಮಧ್ಯಪ್ರದೇಶದ ಸಾಗರ್, ಜಲಲ್‍ಪುರ್, ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ, ಪಟ್ಟಣ್‍ನಲ್ಲಿ ಸೇವೆ ಸಲ್ಲಿಸಿದ್ದು, ಇದೀಗ ಬೆಂಗಳೂರಿನಲ್ಲಿ ಎ.ಎಸ್.ಸಿ.ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದೇಶದ ರಕ್ಷಣಾ ಪಡೆಗೆ ಕೊಡಗು ಅದೆಷ್ಟೋ ಸೇನಾನಿಗಳನ್ನು ನೀಡಿದೆ. ಇವರ ಹಾದಿಯಲ್ಲೇ ಜಿಲ್ಲೆಯ ಯುವತಿಯರೂ ಸೇನೆಯಲ್ಲಿ ಗುರುತಿಸಿಕೊಳ್ಳುತ್ತಿರುವದು ಕೊಡಗಿನ ಸೇನಾ ಪರಂಪರೆಗೆ ಮತ್ತೊಂದು ಗರಿಯಾಗಿದೆ.