ಮಡಿಕೇರಿ, ಆ. 15 : ಸ್ವಾತಂತ್ರ್ಯ ಲಭಿಸಿ 70 ವರ್ಷಗಳಲ್ಲಿ ಭಾರತ ಪ್ರಗತಿಯ ನಾಗಲೋಟದಲ್ಲಿರು ವಂತೆಯೇ ಸಮಾಜದಲ್ಲಿ ಮನುಷ್ಯ ಸಂಬಂಧಗಳು ನಶಿಸುತ್ತಿದ್ದು ಹೃದಯದ ಕವಾಟಿಗೆ ಬೀಗ ಹಾಕಿಕೊಂಡು ಎಲ್ಲವನ್ನೂ ವ್ಯಾವಹಾರಿಕವಾಗಿ ನೋಡುವಂತಾಗಿದೆ ಎಂದು ಕೊಡಗು ಜಿಲ್ಲಾ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮ್ಮದ್ ವಿಷಾದಿಸಿದ್ದಾರೆ.

ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನಗರದ ಬಾಲಕರ ಬಾಲಮಂದಿರದ ಮಕ್ಕಳ ಮನೆಯಲ್ಲಿ ಜರುಗಿದ ಸ್ವಾತಂತ್ರ್ಯೋತ್ಸವದಲ್ಲಿ ಮಾತನಾಡಿದರು. ದೇಶ 7 ದಶಕಗಳಲ್ಲಿ ವೈಜ್ಞಾನಿಕವಾಗಿ ಸಾಕಷ್ಟು ಬೆಳೆದಿದ್ದು ಮೊಬೈಲ್ ಎಂಬ ಅಂಗೈಗೆ ನಿಲುಕುವ ಸಾಧನದಲ್ಲಿಯೇ ಇಡೀ ಪ್ರಪಂಚದ ದರ್ಶನವಾಗುತ್ತಿದೆ. ಮುಂದಿನ ದಿನಗಳಲ್ಲಿ ಮಂಗಳ ಗ್ರಹದ ಅಂಗಳದಲ್ಲಿ ಕ್ರಿಕೆಟ್ ಪಂದ್ಯಾಟ ನಡೆದರೂ ಅಚ್ಚರಿ ಇಲ್ಲ ಎಂಬಂತೆ ಗ್ರಹಗಳ ನಡುವೇ ಸಂಬಂಧದ ಬೆಸುಗೆ ಏರ್ಪಟ್ಟಿದೆ. ಹೀಗಿದ್ದರೂ ಭೂಮಿಯ ಮೇಲಿನ ಮನುಷ್ಯರ ನಡುವಿನ ಸಂಬಂಧಗಳು ದಿನದಿನಕ್ಕೂ ನಶಿಸುತ್ತಿದ್ದು, ಮನೆಯಲ್ಲಿಯೇ ಕುಟುಂಬ ಸದಸ್ಯರ ನಡುವೆ ಪ್ರೀತಿ, ಪ್ರೇಮ, ವಿಶ್ವಾಸದ ಸಂಬಂಧಗಳಿಗಿಂತ ವ್ಯಾವಹಾರಿಕ ಸಂಬಂಧಗಳ ಸ್ವಾರ್ಥಪರ ಮನೋಭಾವನೆಯೇ ಹೆಚ್ಚಾಗುತ್ತಿದೆ ಎಂದು ಹೇಳಿದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಅನಿಲ್ ಎಚ್.ಟಿ. ದ್ವಜಾರೋಹಣ ನೆರವೇರಿಸಿ ಮಾತನಾಡಿ, ಮಿಸ್ಟಿ ಹಿಲ್ಸ್ ನಾನಾ ರೀತಿಯಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಸುಭದ್ರ ಭಾರತಕ್ಕೆ ರೋಟರಿ ಸದಸ್ಯರು ತಮ್ಮ ಕಾಣಿಕೆ ನೀಡುತ್ತಿದ್ದಾರೆ ಎಂದು ಹೇಳಿದರು,

ಬಾಲಕರ ಬಾಲಮಂದಿರದ ವಿದ್ಯಾರ್ಥಿಗಳಾದ ಭೀಮ, ಗಣೇಶ್ ಈ ಸಂದರ್ಭ ಸ್ವಾತಂತ್ರೋತ್ಸವದ ಕುರಿತಾಗಿ ಅಭಿಪ್ರಾಯ ಹಂಚಿಕೊಂಡರು.

ರೋಟರಿ ಮಿಸ್ಟಿ ಹಿಲ್ಸ್ ಗೌರವ ಕಾರ್ಯದರ್ಶಿ ಪಿ.ಎಂ. ಸಂದೀಪ್ ವಂದಿಸಿದರು. ಜೋನಲ್ ಲೆಫ್ಟಿನೆಂಟ್ ಅಂಬೆಕಲ್ ವಿನೋದ್ ಕುಶಾಲಪ್ಪ, ಮುಂದಿನ ಸಾಲಿನ ಅಧ್ಯಕ್ಷ ಜಿ.ಆರ್. ರವಿಶಂಕರ್, ಕೊಡಗು ಜಿಲ್ಲಾ ಶಿಶುಕಲ್ಯಾಣ ಸಮಿತಿ ಅಧ್ಯಕ್ಷ ಕಲ್ಮಾಡಂಡ ಮೋಹನ್ ಮೊಣ್ಣಪ್ಪ, ಬಾಲಕರ ಬಾಲಮಂದಿರದ ಅಧಿಕಾರಿಗಳಾದ ಚೇತನ್, ಸೂರಜ್, ಶರಣ್, ಭಾಗ್ಯ, ಶೋಭಾ, ಜಾಜಿ, ರೋಟರಿ ಮಿಸ್ಟಿ ಹಿಲ್ಸ್ ಸದಸ್ಯರಾದ ಡಾ. ನವೀನ್, ಪಿ.ಆರ್. ರಾಜೇಶ್, ಸತೀಶ್ ಪೂಣಚ್ಚ, ಕೆ.ಕೆ. ವಿಶ್ವನಾಥ್, ಶಶಿಮೊಣ್ಣಪ್ಪ, ಲೀನಾ ಪೂವಯ್ಯ, ಅಶೋಕ್ ಹಾಜರಿದ್ದರು.