ಸೋಮವಾರಪೇಟೆ, ಆ. 15: ಮಕ್ಕಳಲ್ಲಿ ರಾಷ್ಟ್ರಾಭಿಮಾನ ಮೂಡಿಸುವ ಶಿಕ್ಷಣವನ್ನು ಪಠ್ಯದಲ್ಲಿ ಅಳವಡಿಸಬೇಕು. ದೇಶಾಭಿಮಾನದ ಪಾಠಗಳನ್ನು ವಿದ್ಯಾರ್ಥಿಗಳಿಗೆ ಶಿಕ್ಷಕರು ಬೋಧಿಸಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕರೆ ನೀಡಿದರು.ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ದೇಶದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಾಗಬೇಕು. ದೇಶದ ಮುಂದಿನ ಪ್ರಜೆಗಳಾದ ಮಕ್ಕಳಲ್ಲಿ ಚಿಕ್ಕಂದಿನಿಂದಲೇ ದೇಶಭಕ್ತಿ ಮೂಡಿಸಬೇಕು. ದೇಶದ ಪ್ರಧಾನಿಯವರು ಭಾರತಕ್ಕೆ ವಿಶ್ವಮಾನ್ಯತೆ ದೊರಕಿಸಿಕೊಡಲು ಪ್ರಯತ್ನಿಸುತ್ತಿದ್ದಾರೆ. ದೇಶದ ಘಟತೆಯನ್ನು ಎತ್ತಿಹಿಡಿಯುತ್ತಿದ್ದಾರೆ.
ಭಯೋತ್ಪಾದನೆ ಮತ್ತು ಭ್ರಷ್ಟಾಚಾರ ದೇಶವನ್ನು ಕಾಡುತ್ತಿರುವ ಸಮಸ್ಯೆಯಾಗಿದ್ದು, ಇವೆರಡೂ ನಿರ್ಮೂಲನೆಯಾಗಬೇಕಿದೆ. ಭಾರತಕ್ಕೆ ಪಾಕಿಸ್ತಾನಕ್ಕಿಂತಲೂ ಹೆಚ್ಚಿನ ಅಪಾಯಕಾರಿ ರಾಷ್ಟ್ರವಾಗಿ
(ಮೊದಲ ಪುಟದಿಂದ) ಚೀನಾ ಪರಿಣಮಿಸುತ್ತಿದ್ದು, ಆ ದೇಶದ ಉತ್ಪನ್ನಗಳನ್ನು ಭಾರತೀಯರು ಖರೀದಿಸದೇ ಬಹಿಷ್ಕರಿಸಬೇಕು. ಬೀ ಇಂಡಿಯನ್ ಬೈ ಇಂಡಿಯನ್ ಎಂಬ ಘೋಷವಾಕ್ಯದಂತೆ ನಡೆಯಬೇಕು ಎಂದು ರಂಜನ್ ಕರೆ ನೀಡಿದರು.
ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದ ತಾಲೂಕು ತಹಶೀಲ್ದಾರ್ ಮಹೇಶ್, ಸ್ವಾತಂತ್ರ್ಯವೇ ಮಾನವ ಚೈತನ್ಯದ ಸ್ವಾರಸ್ಯ ಎಂದು ವಿವೇಕಾನಂದರು ಹೇಳಿದ್ದರು. ಮಹಾನ್ ದೇಶಭಕ್ತರ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ದೊರಕಿದ್ದು, ಹುತಾತ್ಮರ ಸ್ಮರಣೆ ಎಲ್ಲರ ಕರ್ತವ್ಯವಾಗಿದ್ದು, ದೇಶವಾಸಿಗಳ ಅಭಿವೃದ್ಧಿಗೆ ಸರ್ಕಾರಗಳೂ ಶ್ರಮಿಸುತ್ತಿವೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಮಾತನಾಡಿ, ಸ್ವಾತಂತ್ರ್ಯದ ಆಶಯ ಎಷ್ಟರ ಮಟ್ಟಿಗೆ ಈಡೇರಿದೆ ಎಂಬ ಬಗ್ಗೆ ಅವಲೋಕನ ಅಗತ್ಯವಾಗಿದ್ದು, ಸ್ವಾತಂತ್ರ್ಯ ಸ್ವೇಚ್ಛಾಚ್ಚಾರವಾಗಬಾರದು ಎಂದರು. ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್ ಮಾತನಾಡಿ, ದೇಶದಲ್ಲಿ ಜಾತೀಯತೆ ನಶಿಸಿದಾಗ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ ಎಂದರು.
ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಮಾತನಾಡಿದರು. ವೇದಿಕೆಯಲ್ಲಿ ಚೌಡ್ಲು ಗ್ರಾ.ಪಂ. ವನಜ, ತಾ.ಪಂ. ಸದಸ್ಯೆ ಸಬಿತಾ ಚನ್ನಕೇಶವ, ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಎಸ್. ಮಹೇಶ್, ಸಮಿತಿ ಸದಸ್ಯ ಜೆ.ಸಿ. ಶೇಖರ್, ತಾಲೂಕು ಕಚೇರಿಯ ಅರುಣ್‍ಕುಮಾರ್, ಬಿಇಓ ಮಲ್ಲೇಸ್ವಾಮಿ, ಪೊಲೀಸ್ ವೃತ್ತ ನಿರೀಕ್ಷಕ ಪರಶಿವಮೂರ್ತಿ, ಪ.ಪಂ. ಮುಖ್ಯಾಧಿಕಾರಿ ನಾಚಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮಾಜೀ ಸೈನಿಕ ಚೌಡ್ಲು ಗ್ರಾಮ ಆಲೇಕಟ್ಟೆ ರಸ್ತೆಯ ಕೆ.ಜಿ. ಕಾರ್ಯಪ್ಪ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕಳೆದ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ನೀಡಲಾದ ಲ್ಯಾಪ್‍ಟಾಪ್‍ಗಳನ್ನು ವಿತರಿಸಲಾಯಿತು. ನಂತರ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ ನಡೆಯಿತು.