ಶ್ರೀಮಂಗಲ, ಆ. 15: ಅನಾದಿ ಕಾಲದಿಂದ ಇಲ್ಲಿ ಕೊಡವ ಜನಾಂಗ ವಾಸಿಸುತ್ತಿದ್ದರಿಂದ ಈ ಜಿಲ್ಲೆಗೆ ಕೊಡಗು ಎಂದು ಹೆಸರು ಬಂದಿದೆ. ಕೂರ್ಗ್, ಮರ್ಕರ, ಮಡಕೇರಿ ಅಲ್ಲ, ಇದು ಕೊಡಗು. ಹಾಗೆಯೇ ನಮ್ಮ ದೇಶ ಹಿಂದೂ ಸ್ಥಾನ, ಭಾರತ. ಇಂಡಿಯಾ ಅಲ್ಲ. ಆ ಹೆಸರಿಗೆ ಅರ್ಥವೇ ಇಲ್ಲ ಎಂದು ಭಜರಂಗದಳದ ದಕ್ಷಿಣ ವಲಯ ಪ್ರಾಂತ ಅಕಾಡ ಪ್ರಮುಖ ರಂಗನಾಥ್ ಪ್ರತಿಪಾದಿಸಿದರು.

ಕುಟ್ಟ ಕೊಡವ ಸಮಾಜದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಜಂಟಿ ಆಶ್ರಯದಲ್ಲಿ ನಡೆದ ‘ಅಖಂಡ ಭಾರತ ಸಂಕಲ್ಪ ದಿನ’ದ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು ನಮ್ಮ ದೇಶದ ಹೆಸರಿಗೆ ಅರ್ಥವಿದೆ. ಇದು ಕೇವಲ ದೇಶವಲ್ಲ, ಭರತ ಖಂಡ. ಅಖಂಡ ಭಾರತವು ಇಡೀ ವಿಶ್ವಕ್ಕೆ ಬೆಳಕುನೀಡಿದ ದೇಶ ಈ ದೇಶಕ್ಕೆ ವಿಶೇಷವಾದ ಹಿನ್ನೆಲೆ ಇದೆ, ಹೆಸರಿಗೆ ವಿಶೇಷವಾದ ಅರ್ಥವಿದೆ. ಇತರ ದೇಶಗಳಂತೆ ನಮ್ಮ ದೇಶ ಕೇವಲ ಬದುಕಲು ಬೇಕಾದ ಸ್ಥಳವಲ್ಲ. ಇಲ್ಲಿನ ಜನರಿಗೆ ಈ ದೇಶದೊಂದಿಗೆ, ಈ ಮಣ್ಣಿನೊಂದಿಗೆ, ಈ ನೆಲದೊಂದಿಗೆ ಭಾವನಾತ್ಮಕ ಸಂಬಂಧವಿದೆ. ಭಾರತ ದೇಶ ಪ್ರಪಂಚದ ಇತರ ಎಲ್ಲಾ ದೇಶಗಳಿಗೂ ನಾಗರಿಕತೆಯನ್ನು, ಸಂಸ್ಕøತಿಯನ್ನು, ಔಷದೋಪಚಾರ ವನ್ನು, ಯೋಗ ಶಿಕ್ಷಣವೂ ಸೇರಿದಂತೆ ಬದುಕಲು ಕಲಿಸಿದ ಇತಿಹಾಸ ಸೃಷ್ಟಿಸಿದ ದೇಶ. ಪ್ರಪಂಚದಲ್ಲಿ ಭೂಮಿಯನ್ನು ಪೂಜಿಸುವ ಏಕೈಕ ದೇಶ ಭಾರತ. ಇತಿಹಾಸದÀ ಪುಟಗಳಲ್ಲಿ ಎಲ್ಲಿಯೂ ಭಾರತವನ್ನು ಸೋಲಿಸಿದ ದಾಖಲೆ ಇಲ್ಲ. ಬದಲಿಗೆ ಭಾರತದಲ್ಲಿನ ಸಂಪತ್ತನ್ನು ಲೂಟಿ ಮಾಡಿದರು. ಸಾವಿರಾರು ಸಂಖ್ಯೆಯಲ್ಲಿ ಹೋರಾಟ ಗಾರರನ್ನು, ತ್ಯಾಗಿಗಳನ್ನು, ದೇಶ ಪ್ರೇಮಿಗಳನ್ನು ಸೃಷ್ಟಿಸಿದ ವೀರ ಭೂಮಿ, ಪುಣ್ಯ ಭೂಮಿ ಈ ಕೊಡಗು. ಸ್ವಾತಂತ್ರ್ಯ ಪೂರ್ವದಿಂದಲೇ ಹರಿದು ಹೋಗಲಾರಂಭಿಸಿದ ಅಖಂಡ ಭಾರತವನ್ನು ಮತ್ತೊಮ್ಮೆ ಅಖಂಡ ಭಾರತವಾಗಿ ಪಡೆಯುವ ಸಲುವಾಗಿ ಪ್ರತಿ ವರ್ಷದ ಆಗಸ್ಟ್ 14 ರಂದು ಅಖಂಡ ಭಾರತ ಸಂಕಲ್ಪ ದಿನವನ್ನು ಆಚರಿಸುತ್ತಿದ್ದೇವೆ ಎಂದರು.

ಇಂತಹ ವಿಶ್ವ ಖ್ಯಾತಿಯ ದೇಶದೊಳಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಟಿಪ್ಪು ಸುಲ್ತಾನರ ಜಯಂತಿಯನ್ನು ಆಚರಣೆ ಮಾಡುತ್ತಿರುವದು ಈ ದೇಶದ ದುರಂತ. ಹೇಡಿಯಾದ ಟಿಪ್ಪುವನ್ನು ಹುಲಿ ಎಂದು ಬಿಂಭಿಸುತ್ತಿರುವದು ಕೇವಲ ಒಂದು ಧರ್ಮದ ಮನವೊಲಿಕೆಗಾಗಿ. ಟಿಪ್ಪು ಅಲ್ಲ ಹುಲಿ, ಟಿಪ್ಪು ಜಯಂತಿಯನ್ನು ವಿರೋಧಿಸುವ ಸಂದರ್ಭ ಹಲ್ಲೆಗೊಳಗಾಗಿ ವೀರ ಮರಣ ಪಟ್ಟ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷ ದೇವಪಂಡ ಕುಟ್ಟಪ್ಪ ಹುಲಿ. ಅಪ್ರತಿಮ ದೇಶ ಪ್ರೇಮಿಗಳಾದ ಫೀಲ್ಡ್ ಮಾರ್ಷಲ್ ಕೊಡಂದೇರ ಕಾರ್ಯಪ್ಪ ಹುಲಿ, ಜನರಲ್ ಕೊಡಂದೇರ ತಿಮ್ಮಯ್ಯ ಹುಲಿ. ಇಂತಹ ಹುಲಿಗಳ ನಾಡಿನಲ್ಲಿ ಟಿಪ್ಪು ಜಯಂತಿ ಮಾಡುತ್ತಿರುವದು ಈ ನಾಡು ಕಂಡ ದುರಂತ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಕಟ ಪೂರ್ವ ಸಂಘ ಚಾಲಕ ಮಚ್ಚಾರಂಡ ಮಣಿ ಕಾರ್ಯಪ್ಪ ಮಾತನಾಡಿ, ವಿಶ್ವ ಹಿಂದೂ ಪರಿಷತ್ ವಿಶ್ವಕ್ಕೆ ಮಾರ್ಗದರ್ಶನ ನೀಡುವ ಸಂಘಟನೆ. ನಮ್ಮ ಸಂಕಲ್ಪ ತುಂಡಾದ ಭಾರತವನ್ನು ಅಖಂಡ ಭಾರತವಾಗಿ ಮತ್ತೆ ಪಡೆಯುವದು. ಭಾರತದಲ್ಲಿ ಇರುವ ಎಲ್ಲರೂ ಹಿಂದುಗಳೇ ಆದರೆ ಹಲವರು ಮತಾಂತರವಾಗಿದ್ದಾರೆ. ನಾವು ಕಾನೂನನ್ನು ಬೆಂಬಲಿಸಬೇಕು ಕಾನೂನು ಪಾಲಕರಾದ ಪೊಲೀಸರು ಜನರ ಭಾವನೆಗೆ, ದೇಶದ ಭಾವನೆಗೆ ಸ್ಪಂದಿಸಬೇಕು. ಹಿಂದೂ ಸಂಘಟನೆ ಯವರು ದೇಶ ಭಕ್ತರೆಂಬವದನ್ನು ಮನಗಾಣಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಹಿಂದೂಪರ ಸಂಘಟನೆಯ ಮಚ್ಚಮಾಡ ಡಾಲಿಚಂಗಪ್ಪ ಮಾತನಾಡಿ ನಮ್ಮ ದೇಶದ ತ್ರಿವರ್ಣ ಧ್ವಜ ವಿಶ್ವದಲ್ಲೆ ಉತ್ತಮ ಧ್ವಜವೆಂದು ಹಾಗೂ ರಾಷ್ಟ್ರಗೀತೆಯು ವಿಶ್ವದಲ್ಲೆ ಅತ್ಯುತ್ತಮವೆಂದು ಮಾನ್ಯತೆ ಪಡೆದಿದೆ. ಇಂತಹ ಧ್ವಜ ಹಾಗೂ ರಾಷ್ಟ್ರಗೀತೆಗೆ ಗೌರವ ನೀಡುವದು ನಮ್ಮ ಧರ್ಮ. ಇದನ್ನು ಪಾಲಿಸದವರು ಈ ದೇಶದಲ್ಲಿರಲು ಅನರ್ಹರು ಎಂದರು. ಸಭೆ ಪ್ರಾರಂಭವಾಗುವದಕ್ಕೆ ಮುನ್ನ ಕುಟ್ಟ ಬಸ್ ನಿಲ್ದಾಣದಲ್ಲಿ ಗೋಪೂಜೆ ಮಾಡಿ ಸಾವಿರಾರು ಸಂಖ್ಯೆಯ ಹಿಂದೂಪರ ಸಂಘಟನೆಯ ದೇಶಭಕ್ತರು ಭಾರತಾಂಭೆಯನ್ನು ಕೊಂಡಾಡುವ ಘೊಷಣೆಗಳೊಂದಿಗೆ ಪಂಜಿನ ಮೆರವಣಿಗೆಯಲ್ಲಿ ಕೊಡವ ಸಮಾಜಕ್ಕೆ ಆಗಮಿಸಿದರು. ಈ ಸಂದರ್ಭ ವೇದಿಕೆಯಲ್ಲಿ ವಿ.ಹಿಂ.ಪ ಜಿಲ್ಲಾಧ್ಯಕ್ಷ, ಮಾತಂಡ ಟಾಟಾ ಬೋಪಯ್ಯ, ಭಜರಂಗದಳ ಜಿಲ್ಲಾ ಸಂಚಾಲಕ ಅಜಿತ್ ಕುಮಾರ್, ವಿ.ಹಿಂ.ಪ ತಾಲೂಕು ಅಧ್ಯಕ್ಷ ನಾಣಮಂಡ ವೇಣು ಮಾಚಯ್ಯ ಉಪಸ್ಥಿತರಿದ್ದರು. ಪಂಜಿನ ಮೆರವಣಿಗೆಯಲ್ಲಿ ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ, ಜಿ.ಪಂ ಸದಸ್ಯರಾದ ಮೂಕೋಂಡ ವಿಜು ಸುಬ್ರಮಣಿ, ಮುರುಳಿ ಕರುಂಬಮಯ್ಯ, ಮೂಕೋಂಡ ಶಶಿ ಸುಬ್ರಮಣಿ, ವೀರಾಜಪೇಟೆ ತಾಲೂಕು ವಿ.ಹಿಂ.ಪ ಕಾರ್ಯಾಧ್ಯಕ್ಷ ಉದ್ದಪಂಡ ಜಗತ್, ಹಿಂದೂಪರ ಸಂಘಟನೆಯ ಪ್ರಮುಖರಾದ ಕುಂಞಂಗಡ ಅರುಣ್ ಭೀಮಯ್ಯ, ಹೊಟ್ಟೇಂಗಡ ರಮೇಶ್, ಕಾಡ್ಯಮಾಡ ಗಿರೀಶ್ ಗಣಪತಿ, ಮುಕ್ಕಾಟಿರ ನವೀನ್, ಪೆಮ್ಮಣಮಾಡ ನವೀನ್ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.